ಪುಟ:ಸ್ವಾಮಿ ಅಪರಂಪಾರ.pdf/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ಸ್ವಾಮಿ ಅಪರ೦ಪಾರ ೧೦೫

    ಚನ್ನಬಸಪ್ಪನೆ೦ದ:
    "ನಾವು ಧನ್ಯರು, ಸ್ವಾಮಿಗಳೇ."
    ನಡುಮನೆಯ ಪೀಠವೊಂದರ ಮೇಲೆ ಅಪರಂಪಾರ ಕುಳಿತ. ಸಿದಲಿ೦ಗ ತಾನು
ಸ್ವಾಮಿಗಳ ಶಿಷ್ಯ ಎಂಬಂತೆ, ತುಟಿಬಿಗಿದು ವಿನಯದಿಂದ ಪೀಠದ ಹಿಂದೆ ನಿಂತ. ವಿಚಿತ್ರ 
ಲೋಕನಾಟಕದೊಂದು ದೃಶ್ಯಕ್ಕೆ ಪ್ರೇಕ್ಷಕನಾಗಿದ್ದ ಆತ.
   ಅಪರ೦ಪಾರ ಕೇಳಿದ :
   "ಅಪ್ಪಾ, ಎಷ್ಟು ದಿವಸ ಈ ವನವಾಸ ?"
   "ನಮ್ಮ ವಿಷಯ ತಾವು ಬಲ್ಲಿರಿ, ಹಂಗಾದರೆ."
   "ತ್ರಿಲೋಕಜ್ಞಾನಿಗಳಿಗೆ ತಿಳಿಯದ್ದು ಯಾವುದುಂಟು, ತಮ್ಮಾ?"
   "ತಮ್ಮಲ್ಲಿ ಹೇಳೋದಕ್ಕೆ ಸಂಕೋಚ ಯಾಕೆ? ಈ ಚಳಿಗಾಲ ಕಳೆದ ಕೂಡಲೇ ದೌಡು  
 ನಡೀತದೆ."
   ಅಪರಂಪಾರ ಅಂತರ್ಮುಖಿಯಾದಂತೆ ಚನ್ನಬಸಪ್ಪನಿಗೆ ಅನಿಸಿತು.
   ದೇವಮ್ಮಾಜಿ ಅಂದಳು.
   "ಸೋಮಿಗಳಿಗೆ ನಮ್ಮ ಜಾತಕ ತೋರಿಸಿದರಾಗತಿತ್ತು."
   "ಅದಕ್ಕಾಗಿಯೇ ಒಳ್ಳೆಯ ದಿನ ನೋಡಿ ಮತ್ತೊಮ್ಮೆ ಬರತೇವೆ, ತಂಗಿ."
   "ತಮ್ಮಿಷ್ಟ."
   "ಆದರೂ ಜಾತಕ ನೋಡದೆಯೇ ಅಷ್ಟಿಷ್ಟು ನಾವು ಹೇಳಬಹುದು."
   ಚನ್ನಬಸಪ್ಪನೆಂದ :
   "ಅಪ್ಪಣೆಯಾಗಲಿ!”
   "ಒಂದು ನಾಣ್ಣುಡಿಯು೦ಟು: ಮಿಗಿಲಾದವನ ಹತ್ತರ ಹಗೆ ಸಲ್ಲ, ನಗೆಗಾರನ ಹತ್ತರ
 ಮೈತ್ರಿ ಸಲ್ಲ-ಅ೦ತ."
   “ಸರಿ."
   "ಇಂಗ್ರೇಜಿಯವರು ನಗತಾ ಇರತಾರೆ, ಅಲ್ಲವಾ ?”
   "ಅದೇನೋ ನಿಜ, ಸ್ವಾಮಿಗಳೇ, ಆದರೆ ನಾವು ಅನಾಥರು, ಏನು ಮಾಡೋ 
ಕಾಗತದೆ ?"
   "ಸಗಣಿಯ ಬೆನಕಂಗೆ ಸಂಪಿಗೆಯರಳಿನಲ್ಲಿ ಪೂಜಿಸಿದರೆ ರಂಜನೆಯಲ್ಲದೆ ಅದರ ಗಂಜಳ
ಬಿಟ್ಟೀತೆ? ನೀವು ಇಂಗ್ರೇಜಿಯವರನ್ನ ಓಲೈಸುತೀರಿ. ಆದರೆ ಅವರು ತಮ್ಮ ಬುದೀ 
ಬಿಟ್ಟಾರಾ?"
   "ಕೊಟ್ಟ ಮಾತಿಗೆ ಅವರು ತಪ್ಪರು ಅನಿಸತದೆ."
   "ಹಹ್ಹ...ಮಳೆ ನೀರನ್ನು ಬಿಟ್ಟು ಮಂಜು ನೀರಿಗೆ ಕೈಯೊಡ್ಡಿದ ಹಾಗೆ ಆಗಲಿಕ್ಕಿಲ್ಲ
 ವೇನಪ್ಪ?"
   ಚನ್ನಬಸಪ್ಪನ ಮುಖ ಗಂಟಿಕ್ಕಿತು. ಇವನೊಳ್ಳೇ ಅಯ್ಯ ಬಂದನಲ್ಲ?–ಎನಿಸಿತು.
  "ಅಲ್ಲಿದ್ದರೆ ಸಾಯುತ್ತಿದ್ದೆವು. ಬದುಕೋಣ ಅಂತ ಇಲ್ಲಿಗೆ ಬಂದೆವು."
  ಸಹಸ್ರ ಚೇಳುಗಳು ತನ್ನೆಡೆಗೆ ಬರುತ್ತಿದ್ದಂತೆ ಅಪರಂಪಾರನಿಗೆ ಭಾಸವಾಯಿತು.
ಮನಸ್ಸಿನಲ್ಲೆ 'ಛೂ !' ಎಂದು ಅವುಗಳನ್ನು ಆತ ಓಡಿಸಿದ.