ಪುಟ:ಸ್ವಾಮಿ ಅಪರಂಪಾರ.pdf/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೦೮ ಸ್ವಾಮಿ ಅಪರಂಪಾರ

   "ಹುಡುಗನಿದ್ದಾಗಲೇ ಅದಕ್ಕೆ ಎಳ್ಳು ನೀರು ಬಿಟ್ಟೆನಪ್ಪ. ಎಲ್ಲೀದು ವಿಶ್ರಾಂತಿ?
ಇಕಾ, ದಾಸೋಹ ಪಾದಪೂಜೆ ಒಂದೂ ಬ್ಯಾಡ. ನಿಂತ ಕಾಲಲ್ಲೆ ಹೊರಡು. ನನ್ನ  
ಸಂಗಾತ ನೀನು ಮಡಕೇರಿ ತನಕ ಬರಬೇಕು. ಯಾಕೆ? ಏನು ?–ಅಂಬೋದೆಲ್ಲಾ ದಾರಿ 
ಯಾಗೆ ಹೇಳತೀನಿ."
   ...ದಾರಿಯಲ್ಲಿ ಮಲ್ಲಪ್ಪ ಕೇಳಿದ: 
   "ನಮ್ಮ ವೀರಪ್ಪಾಜಿಯವರನ್ನ ಆಮ್ಯಾಕೆ ಕಂಡದ್ದುಂಟಾ ಅಯ್ಯನವರೆ ?"
   "ಶ್! ಅಪರಂಪಾರಸ್ವಾಮಿಯವರನ್ನ ಅನ್ನು."
   "ಹಂಗಾರೆ ದೊರೆ ಮಗ ಜಂಗಮ ಆದದ್ದು ದಿಟಾನೇ. ಎಲ್ಲೋ ಪುಕಾರು ಕೇಳಿದ್ದೆ.” 
   "ಅವರು, ಜಂಗಮರಲ್ಲಿ ದೊರೆ ಮಗ. ಅವರ ಸಹವಾಸದೋಷದಿಂದ ನಾನು ಈ
ಸ್ಥಿತಿಗೆ ಇಳಿದಿದೀನಿ. ನಾ ಅರಮನೆಗೆ ಹೋಗತಿರೋದು ಶಿವಕಥೆ ಮಾಡೋದಕ್ಕಲ್ಲ,
ರಾಜಕಾರ್ಯನಿಮಿತ್ತ."
   ಮಲ್ಲಪ್ಪನಿಗೆ ಸಂತೋಷ. ಅದರ ಬೆನ್ನಲ್ಲೇ ದಿಗಿಲು. 
   "ಚೆಂದಾಕಿದಾರೆ,ಅಲ್ಲವರಾ?" 
   "ಹ್ಞ. ಅರಸನಿಗೆ ಒಂದು ಸುದ್ದಿ ಮುಟ್ಟಿಸಿ ಬಾ ಅಂತ ಅವರೇ ಕಳಿಸಿದ್ರು." 
   "ಅಂಗಾ ? ಅರಮನೆಗೆ ಒಂದ್ಸಾರ್ತಿ ಅಪರಂಪಾರ ಸೋಮಿಯೋರು ಬಂದಿದ್ರು,
ಸಿಟ್ಟಮಾಡ್ಕೊಂಡು ಓದ್ರು–ಅಂತ ಕೇಳಿವ್ನಿ."
   "ಎಲ್ಲಿಯ ಸಿಟ್ಟು, ಕಾಮಕ್ರೋಧಗಳನ್ನು ಜಯಿಸಿದ ಪುರುಷಶ್ರೇಷ್ಠನಿಗೆ ?" 
   ಅಪರಂಪಾರ ಕಳುಹಿಸುವ ವಾರ್ತೆ ಏನು ಅಂತ ಮಲ್ಲಪ್ಪ ಕೇಳಲಿ, ಎಂದು ಸಿದ್ಧಲಿಂಗ 
ಕಾದು ನೋಡಿದ. ನಿರಾಸೆಯಾಯಿತು. ಕಡೆಗೆ ಅವನೇ ಅ೦ದ :
   "ಇಂಗ್ರೇಜಿಯವರು ದಂಡಯಾತ್ರೆಗೆ ತಯಾರು ಮಾಡತಾ ಇದಾರೆ. ಅದನ್ನ ಅರಸನಿಗೆ ತಿಳಿಸಬೇಕಾಗದೆ.”
   "ಅಂಗಾರೆ ಲಡಾಯಿ ಕಂಡಿತ ಅನ್ನಿ. ಇವತ್ತು ನಾಳೆಯಲ್ಲಿ ಜಮ್ಮ ಕೊಡವರಿಗೆಲ್ಲ ಕರೆ ಬರಬೌದು."
   "ಯುದ್ಧ ಅಂದರೆ ಸಾಕು, ಬಾಹು ಸ್ಫುರಿಸತದೆ, ಅಲ್ಲವಾ?"
   "ಅಂಗಲ್ಲ, ಅಯ್ಯನವರೆ. ಅರಸರ ಅನ್ನ ತಿನ್ನತೀವಿ. ಅವರ ಸೇವೆ ಮಾಡೋ ಸಮಯ ಬಂದಾಗ ಸಂತೋಸ ಆಗತದೆ."
  ...ಮಡಕೇರಿಯಲ್ಲಿ ಇವರಿಬ್ಬರು ಚಾವಡಿಕಾರ ಶಂಕರಪ್ಪನನ್ನು ಕಂಡರು. ಸಿದ್ಧಲಿಂಗ
ಸ್ವಾಮಿ ಅಪರಂಪಾರರ ದೂತ ಎಂದು ತಿಳಿದಾಗ ಅವನು ಹಿಗ್ಗಿದ ; ಬಸವನಿಗೆ ಸುದ್ದಿ 

ಮುಟ್ಟಿಸಿದ.

   ಸ್ವಲ್ಪ ಹೊತ್ತಿನಲ್ಲೆ ಚಿಕವೀರರಾಜೇಂದ್ರನ ಸಮ್ಮುಖಕ್ಕೆ ಸಿದ್ಧಲಿಂಗನನ್ನು ಒಯ್ದರು. 
   "ಅರಸನಿಗೆ ಜಯವಾಗಲಿ, ಶುಭವಾಗಲಿ ; ವೈರಿಕುಲ ಅಳಿಯಲಿ" ಎಂದು ಸಿದ್ಧಲಿಂಗ ಹರಸಿದ.
   ನಡೆದು ನಡೆದು ಪಾದಗಳು ಊದಿಕೊಂಡಿದ್ದ, ಮೈಯೆಲ್ಲ ಧೂಳು ತುಂಬಿದ್ದ, ಜಂಗಮ 
ನತ್ತ ನೋಡಿ ಚಿಕವೀರರಾಜನೆಂದ:
   "ಅಯ್ಯನವರು ಶ್ರೀರಂಗಪಟ್ಟಣದಿಂದ ಬಂದಿರಂತೆ."