ಪುಟ:ಸ್ವಾಮಿ ಅಪರಂಪಾರ.pdf/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸ್ವಾమి ಆಪರ೦ಪಾರ

"ಇವತ್ತು ಇಲ್ಲಿದೇನೆ. ನಾಳೆ ಇನ್ನೊಂದೂರಲ್ಲಿ, ಏನಿದ್ದರೂ ನನ್ನತಾಣ ಗುರುಮೂರ್ತಪ್ಪ ತಿಳಿದಿರತಾನೆ."
“ಇಕ್ಕೇರಿ-ಕೊಡಗುಗಳ ಬಾಂಧವ್ಯ ಶಿವಲಿಂಗಸಾಕ್ಷಿಯಾಗಿ ಏರ್ಪಟ್ಟಿದೆ–ಎಂದು ಕೊಳ್ಳೋಣವೆ ನಾಯಕರೆ?"

“ಹೌದು, ಸ್ವಾಮಿಗಳೇ. ಕೊಡಗಿನ ಹೋರಾಟದಲ್ಲಿ ನಾವೂ ಸಹಭಾಗಿಗಳು. ಪರಕೀಯರ ವಿರುದ್ಧ ಶಸ್ತ್ರ ಹಿರಿಯುತೇವೆ ಅಂತ ಶಿವಲಿಂಗಸಾಕ್ಷಿಯಾಗಿ ಪ್ರತಿಜ್ಞೆ ಮಾಡುತಿದೇನೆ." ...ದೀರ್ಘ ಮಾತುಕತೆಯಿಂದ ಇರುಳು ಕಿರಿದಾಯಿತು, ಬೆಳ್ಳಿಮೂಡಿ ಬಿದನೂರಿನ ಹಸುರಿನ ಮೇಲೆ ನಸುಬೆಳಕು ನರ್ತಿಸಿತು.

 ಸೂರಪ್ಪ ನಾಯಕನೂ ಅವನ ಸಂಗಡಿಗರೂ ಆಗಲೇ ಎಚ್ಚತ್ತಿದ್ದರು. ಸೂರಪ್ಪ ಅಪರಂಪಾರನನ್ನೆಬ್ಬಿಸಿ, ಪಾದಮುಟ್ಟಿ, "ಹೊರಡುತೇವೆ, ಅಪ್ಪಣೆಯಾಗಬೇಕು" ಎಂದ.

“ಮಹಾದೇವ ನಿಮ್ಮ ಮೈಗಾವಲಿಗಿರುತಾನೆ" ಎಂದ ಅಪರಂಪಾರ.

ನಾಯಕ ಅಪರಂಪಾರನ ಅಡಿಗಳ ಬಳಿ ಏನನ್ನೋ ಇರಿಸಿದ.

"ಅಲ್ಪ ಕಾಣಿಕೆ. ಸದಾ ತಮ್ಮ ಹತ್ತಿರವಿರಬೇಕು."

ಅಪರಂಪಾರ ಅದನ್ನೆತ್ತಿಕೊಂಡು, ಮಂದಹಾಸ ಸೂಸಿದ.
“ಆಗಲಿ, ಜಂಗಮನ ಜೋಳಿಗೆಯಲ್ಲಿರತದೆ" ಎಂದ.
ಕಾಣಿಕೆ, ಆಂಗ್ಲ ಸಿಪಾಯರ ಕಪ್ತಾನನೊಬ್ಬನನ್ನು ಹೊಡೆದುರುಳಿಸಿ ಸೂರಪ್ಪ ವಶಪಡಿಸಿ ಕೊಂಡಿದ್ದ ಕೈಬಂದೂಕು, ಸೊಗಸಾಗಿತ್ತು.
                             ೪೫

ಗೌರಮ್ಮನೆದು, ಮಗ್ಗುಲಲ್ಲಿ ಮಲಗಿದ್ದ ಮಗಳ ಹೊದಿಕೆಯನ್ನು ಸರಿಪಡಿಸಿದಳು. ಇನ್ನು ಒಂದೆರಡು ವರ್ಷಗಳಲ್ಲೇ ಹದಿನಾರು ತುಂಬುವ ಕೋಮಲಾಂಗಿ, ಯುವರಾಣಿ. ಕಂಡವರು ದೃಷ್ಟಿ ತಾಕೀತೆಂದು ನೆಟಿಕೆ ಮುರಿಯುವಂತಿತ್ತು ಆಕೆಯ ರೂಪರಾಶಿ. ತಾಯಿಯ ಜೀವಕ್ಕೆ ಅಂಟಿಕೊಂಡೇ ಬೆಳೆದ ಈ ಬಳ್ಳಿ ಒಂದು ಇರುಳನ್ನೂ ಆಕೆಯಿಂದ ಬೇರೆಯಾಗಿ ಕಳೆಯದು.

 ಇನ್ನೆರಡು ಘಳಿಗೆ ಬಿಟ್ಟು ಆಕೆ ಎಚ್ಚರಗೊಳ್ಳುವಳು.
 ಎಲ್ಲರಿಗಿಂತ ತಡವಾಗಿ ಏಳುವವನು ಅರಸ.. ಕಣ್ಣು ತೆರೆದೊಡನೆ ಆತ ಮಗಳನ್ನು ಕೂಗಿ ಕರೆಯುವ :

"ಪುಟ್ಟಮ್ಮಾಜೀ..." "ಬಂದೇ ಅಫ್ಫಾಜೀ" ಎಂದು ಮಾರ್ನುಡಿದು, ತಂದೆಯ ಬಳಿ ಸಾರಿ ಹಾಸಿಗೆಯ ಮೇಲೆ ಆಕೆ ಕುಳಿತುಕೊಳ್ಳಬೇಕು.

 ಈ ನತದೃಷ್ಟೆಯ ಹಣೆಯಲ್ಲಿ ಏನು ಬರೆದಿದೆ ಎಂದು ಓದಲೆಳಸುವವನಂತೆ ಅರಸ ಮಗಳ ಮುಖವನ್ನು ದಿಟ್ಟಿಸಬೇಕು: ಮುಂಗುರುಳನ್ನು ನೇವರಿಸಬೇಕು.
  ಆಗ ಮಗಳೆನ್ನುವಳು :
  “ನೀರು ಕಾದದೆ, ಏಳಿ, ಅಫ್ಫಾಜಿ..."