ಪುಟ:ಸ್ವಾಮಿ ಅಪರಂಪಾರ.pdf/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

౧೩O ಸ್ವಾಮಿ ಆಪರಂಪಾರ

   ಅದು ವೇಲೂರಿನ ಕೋಟೆಯೊಳಗಿನ ಅರಮನೆ, ಟೀಪೂ ಮಡಿದ ಬಳಿಕ ಆತನ ಸಂಸಾರವನ್ನು ಕೆಲ ವರ್ಷಗಳ ಕಾಲ ಆಂಗ್ಲರು ಅಲ್ಲಿರಿಸಿದ್ದರು. ಟೀಪೂವಿನ ಮಕ್ಕಳು ರಾಜ ಬಂದಿಗಳಾಗಿ ಅಲ್ಲಿ ದಿನ ಕಳೆದಿದ್ದರು. ಚಿಕವೀರರಾಜ ಕೈದಿಯೆ? ಹಾಗೆಂದು ನಿರ್ದಿಷ್ಟವಾಗಿ ಹೇಳುವಂತಿರಲಿಲ್ಲ. ಅರಮನೆಯ ಬಾಗಿಲುಗಳನ್ನು ಆಂಗ್ಲ ಪಹರೆಯಾಳುಗಳು ಕಾಯುತ್ತಿರಲಿಲ್ಲ. ಹಾಗಾದರೆ ಆತ ಸ್ವತಂತ್ರನೇ? ಆ ರೀತಿ ನುಡಿಯುವುದೂ ಕಷ್ಟವೇ. ಕೋಟೆ ಬ್ರಿಟಿಷರ ಅಧೀನದಲ್ಲಿತ್ತು ; ಅದಕ್ಕೆ ಭದ್ರ ಕಾವಲಿತ್ತು. ಮಡಕೇರಿಗಾಗಲೀ ಇನ್ನೆಲ್ಲಿಗೇ ಆಗಲೀ ಇಷ್ಟಬಂದಂತೆ ಹೊರಟು ಹೋಗುವ ಸ್ವಾತಂತ್ರ್ಯ ಅರಸನಿಗಿರಲಿಲ್ಲ.
   ಅರಮನೆಯ ಸುತ್ತಲೂ ಹಲವಾರು ಸಣ್ಣಪುಟ್ಟ ಮನೆಗಳಿದ್ದುವು. ಚಿಕವೀರರಾಜ ನೊಡನೆ ಹೊರಟು ಬಂದಿದ್ದ ಇನ್ನೂರಕ್ಕೂ ಮಿಕ್ಕಿದ ಪರಿವಾರ ಆ ಮನೆಗಳಲ್ಲಿ ಬಿಡಾರ ಮಾಡಿತು. ಕೊಡಗಿನ ಪಡಿವಾಳರೂ ಚಾವಡಿಕಾರರೂ ಅರಮನೆಯಲ್ಲಿ ಓಡಾಡುತ್ತಿದ್ದರು. ಆದರೆ ಒಬ್ಬನೇ ಒಬ್ಬಾತನಲ್ಲೂ ಶಸ್ತ್ರವಿರಲ್ಲಿಲ್ಲ.
 “ಅಕ್ಕಿ ಮತ್ತಿತರ ಸಾಮಗ್ರಿ ಒದಗಿಸುತೇವೆ" ಎಂದಿದ್ದರು ಆಂಗ್ಲ ಅಧಿಕಾರಿಗಳು.
  ಸ್ವಾಭಿಮಾನಿಯಾದ ಚಿಕ್ಕವೀರರಾಜ ನುಡಿದಿದ್ದ:
  "ನಮ್ಮ ವ್ಯವಸ್ಥೆ ನಾವು ಮಾಡಿಕೋತೇವೆ."
  ರಾಜಭಂಡಾರವನ್ನು ತನ್ನ ಜತೆಗೆ ತಂದಿದ್ದ ಅರಸ ತನ್ನ ಘನತೆಗೆ ಕುಂದು ತಂದು ಕೊಳ್ಳಲಿಲ್ಲ.....
 ...ತಂದೆ ಸ್ನಾನದ ಮನೆಗೆ ಹೋದೊಡನೆ ರಾಜಕುಮಾರಿ ತನ್ನ ತಾಯಿ ಇದ್ದಲ್ಲಿಗೆ ನಡೆದಳು.
  ಹಿತ್ತಿಲ ಮರದಲ್ಲೊಂದು ಕಾಗೆ ಒಂದೇ ಸಮನೆ ಕಾಕಾಕಾ ಎನ್ನುತ್ತಿತ್ತು.                       ರಾಣಿ ಗೌರಮ್ಮನೆಂದಳು :
  "ಯಾರೋ ನೆಂಟರು ಬರೋ ಹಂಗದೆ."
  "ನಿನಗೆ ಊರಿನ ಧ್ಯಾನ. ಯಾರು ಬರುತಾರಮ್ಮ ಇಷ್ಟು ದೂರಕ್ಕೆ?" ಎಂದಳು ರಾಜಕುಮಾರಿ.
  ಅಷ್ಟು ಹೊತ್ತಿಗೆ ಪಡಿವಳನೊಬ್ಬ ಬಂದು ನುಡಿದ:
 "ಇಬ್ಬರು ಅಯ್ಯಗೋಳು ತಲೆಬಾಕಿಲ್ನಾಗೆ ನಿಂತವರೆ. ಊರು ಕಡೆ ಮಂದೀಂತ ಆನಿಸತದೆ.”
  "ನೆಂಟರು ಬರಲಿಲ್ಲ. ಸ್ವಾಮಿಗಳು ಬಂದರು. ನಡೆಯವ್ವ" ಎಂದಳು ರಾಣಿ.
  ಗೌರಮ್ಮನೂ ಆಕೆಯ ಮಗಳೂ ತನ್ನ ಅಡಿಗಳಿಗೆ ಎರಗಿದಾಗ ಅಪರಂಪಾರನ ಕಂಠ ಉಮ್ಮಳಿಸಿತು.
 "ಏಳು ತಾಯೀ, ಏಳು ತಂಗೀ. ಮಹಾರಾಣಿ–ಯುವರಾಣಿ ಅಲ್ಲವಾ ? ಮಹಾದೇವ ಕಾಪಾಡುತಾನೆ,ಎಳಿರಿ."
  ಅಪರಂಪಾರನ ಧ್ವನಿ ಕೇಳಿ ಗೌರಮ್ಮನ ಮೈ ಪುಲಕಗೊಂಡಿತು. ಗಡ್ಡ ಮಿಾಸೆಗಳ ವೇಷಧಾರಿಯಲ್ಲ. ಅದೇ ಕಣ್ಣುಗಳು, ಅದೇ ಕಂಠ, ಆ ಠೀವಿಯೀ.
  ನಮಿಸಿದವರನ್ನು ಸಿದ್ಧಲಿಂಗನೂ ಆಶೀರ್ವದಿಸಿದ.

[ಈತನೊಬ್ಬ ಆಗ ಇರಲಿಲ್ಲ.]