ಪುಟ:ಸ್ವಾಮಿ ಅಪರಂಪಾರ.pdf/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ಸಾಮಿ ಅಪರಂಪಾರ ೧೩೧

 ಗೌರಮ್ಮನೆದ್ದು, ತಲೆಯ ಮೇಲಣ ಸೆರಗನ್ನು ಸರಿಪಡಿಸಿ, ಪರೀಕ್ಷಿಸುವ ನೋಟದಿಂದ ಅಪರಂಪಾರನನ್ನೊಮ್ಮೆ ನೋಡಿ ಅಂದಳು :
 "ಮಡಕೇರಿಯ ಅರಮನೆಗೊಮ್ಮೆ ಸ್ವಾಮಿಗಳು ದಯೆಮಾಡಿಸಿದ್ದ ನೆನಪು.”
 "ಹೌದು, ತಾಯಿಾ. ಆಗ ಕರೆಸಿ ಬಂದೆವು ; ಈಗ ನಾವಾಗಿಯೇ ಬಂದಿದೀವಿ."
 "ತಾವು ದಾಸೋಹ ಸ್ವೀಕರಿಸದೇ ಹೋದಿರಿ. ಕೊಡಗಿನ ರಾಜ್ಯಲಕ್ಷ್ಮಿಯೂ ಹೊರಟು ಹೋದಳು."
 "ಅದಕ್ಕೂ ಇದಕ್ಕೂ ಏನು ಸಂಬಂಧವಮ್ಮ?..."

ಸಿದ್ಧಲಿಂಗನೆಂದ : “ಸ್ವಾಮಿಗಳು ಪ್ರಸನ್ನರಾಗಿ ಬಂದಿದಾರೆ. ಇನ್ನು ರಾಜ್ಯಲಕ್ಷ್ಮಿಯೂ ಬರತಾಳೆ, ರಾಣಿ ಯವರೆ."

 ಗೌರಮ್ಮನ ಕಣ್ಣುಗಳು ಅಶ್ರುಭರಿತವಾದುವು.
 "ತಾವು ಕೂತುಕೋಬೇಕು. ಸನ್ನಿಧಿಗೆ ಸುದ್ದಿ ಮುಟ್ಟಿಸಿ ಬರತೇನೆ" ಎಂದು ನುಡಿದು ಗೌರಮ್ಮ ಮಗಳೊಡನೆ ಒಳ ಹೋದಳು.
 ಅರಸ, ಬಹಳ ಕಾಲ ಅಗಲಿದ್ದ ಬಂಧುವನ್ನು ಕಾಣಬಂದವನಂತೆ ಆನಂದೋದ್ವೇಗದಿಂದ, ನಡುಹಜಾರಕ್ಕೆ ಬಂದ. ಅಪರಂಪಾರನನ್ನು ಕಂಡೊಡನೆ, 'ಇವರು ಅವರೇ ಏನು?' ಎಂದು ಕಕ್ಕಾವಿಕ್ಕಿಯಾಗಿ ನಿಂತ.
 ಯಾವ ರಕ್ಷೆಯೂ ಇಲ್ಲದ ಅಸಹಾಯ ತಾನು ಎಂಬಂತೆ ಅಪರಂಪಾರನಿಗೆ ಒಂದು ಕ್ಷಣ ಭಾಸವಾಯಿತು. ವಿಶ್ವವ್ಯಾಪಾರವೆಲ್ಲ ಸ್ತಬ್ದವಾಗಿದೆ, ತಾನೊಂದು ಶಿಲಾಮೂರ್ತಿ–ಎಂದು ಅವನಿಗೆ ಅನಿಸಿತು. 
ಆದರೆ ಮರುಕ್ಷಣದಲ್ಲೆ, ಅರಸ ಅವನ ಪಾದಗಳನ್ನು ಮುಟ್ಟಿದ.

ಅಪರಂಪಾರ ಜಾಗೃತನಾಗಿ ಸಲಿಗೆಯ ಧ್ವನಿಯಲ್ಲಿ ಅಂದ :

 "ಏಳು ಮಹರಾಜ.” -
 ಆ ಸ್ವರ ಕೇಳಿ, ಅರಸನ ಮನಸಿನ ತುಮುಲ' ಕೊನೆಗಂಡಿತು, ಆತ ಸಿದ್ಧಲಿಂಗನಿಗೂ ನಮಿಸಿ, ಎದು ನಿಂತು, ವಿನೀತನಾಗಿ ನುಡಿದ: 
 "ಸ್ವಾಮಿಗಳೇ, ಅಧಿಕಾರ ಅನಶ್ವರ ಅಂತ ನಾನು ಭಾವಿಸಿದ್ದ ಘಳಿಗೆಯಲ್ಲಿ ಹಿಂದೆ ಒಮ್ಮೆ ಬಂದಿದ್ದಿರಿ. ತಾವು ನನ್ನ ದಾಯಾದಿ ವೀರಪ್ಪನಿರಬಹುದು ಎಂಬ ಶಂಕೆ ಯೊಂದಿತ್ತು, ಸ್ವಲ್ಪ ಉದ್ಧಟನಾಗಿ ನಾನು ವರ್ತಿಸಿದೆ. ತಪ್ಪನ್ನು ಉಡಿಯಲ್ಲಿ ಹಾಕಿ ಕೊಂಡು ಮತ್ತೆ ಇಷ್ಟು ದೂರ ಬಂದಿದೀರಿ, ನಾನು ಭಾಗ್ಯಶಾಲಿ.”
 ಕವಿದು ಬರುತ್ತಿದ್ದ ಕತ್ತಲನ್ನು ಪ್ರಯತ್ನಪೂರ್ವಕವಾಗಿ ದೂರ ಸರಿಸುತ್ತ ಅಪರಂಪಾರ ನೆಂದ :
 “ಹಳೆಯ ಮಾತು ಇನ್ಯಾತಕ್ಕೆ ಅರಸ? ಶಿವನು ಗುರುವಾಗಿ ಬಂದಾಗ ತನುವನ್ನು ನೀಡಬೇಕು; ಶಿವನು ಲಿಂಗವಾಗಿ ಬಂದಾಗ ಮನವನ್ನು ನೀಡಬೇಕು: ಶಿವನು ಜಂಗಮ ನಾಗಿ ಬಂದಾಗ ಧನವನ್ನು ನೀಡಬೇಕು. ಬಲ್ಲೆಯಾ?"
 “ಇಲ್ಲಿರುವುದೆಲ್ಲ ನಿಮಗರ್ಪಿತ, ಸ್ವಾಮಿಗಳೇ, ಅಪ್ಪಣೆಯಾಗಲಿ." 
 "ಆದರೆ ಈ ಜಂಗಮನಿಗೆ ಬೇಕಾಗಿರುವುದು ನಿನ್ನ ಧನವಲ್ಲ, ನಿನ್ನಿಂದ ಒಂದು ವಾಗ್ದಾನ."