ಪುಟ:ಸ್ವಾಮಿ ಅಪರಂಪಾರ.pdf/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೩೨ ಸ್ವಾಮಿ ಅಪರಂಪಾರ

 "ಮಾತು ಕೊಡುತೇನೆ. ಕೊಟ್ಟದಕ್ಕೆ ತಪುವುದಿಲ್ಲ."
 "ಪ್ರಜೆಗಳು ಬಂದು ಕರೆಯುವಾಗ ಮಡಕೇರಿಗೆ ಮರಳಿ ನೀನು ಅಧಿಪತಿಯಾಗ ಬೇಕು."
 ಅಪರಂಪಾರ ನುಡಿದುದನ್ನು ಮೆಲುಕು ಹಾಕುತ್ತ ಅರಸನೆಂದ:
 “ಕೊಡಗಿಗೆ ಎಂಥ ಗತಿ ಪ್ರಾಪ್ತವಾಗಿದೆ ಅಂಬೋದನ್ನು ತಾವು ಬಲ್ಲಿರಿ."
 "ಸುಖವಳಿದು ಕಷ್ಟವಾಯ್ತೆಂದು ನೀನು ಅಳಲದಿರು. ಮೊದಲು ಸುಖಿಗಳು ಅತಿ ಕಷ್ಟಪಡಲಿಲ್ಲವೆ ಅರಸ?"
 “ನಿಜ...ದ್ರೋಹಿಗಳ ಛದಿಸಂಧಾನದಿಂದ ಹೀಗಾಯಿತು, ಸ್ವಾಮಿಗಳೆ." 
 “ಮಾರಿಯ ಪೂಜಿಸಿ ಮಸಣಕ್ಕೆ ಹೋಗಿ ಗೋರಿಗೊಳಿಸಿ ಕುರಿಯ ಕೊರಳನೆ ಕೊಯಿ ದುಂಬ ಕ್ರೂರಕರ್ಮಿಗಳು ಅವರು. ಆ ಜನಕ್ಕೆ ಮಹಾದೇವ ಶಾಸ್ತಿ ಮಾಡುತಾನೆ."
 ಗೌರಮ್ಮ ಒಳಬಾಗಿಲ ಬಳಿ ಕಾಣಿಸಿಕೊಂಡು ತಗ್ಗಿದ ಧ್ವನಿಯಲ್ಲಿ ಅಂದಳು :
 "ಶಿವಪೂಜೆಗೆ ಅಣಿಮಾಡಲೆ?"

ಚಿಕವೀರರಾಜನೆ೦ದ :

 "ಹ್ಞ.. ಹ್ಞ.....ಸೋಮಯ್ಯನನ್ನೂ ಐಯಣ್ಣನನ್ನೂ ಕರೆಸಬೇಕು...ತಿಮ್ಮಣ್ಣಗೌಡನಿಗೂ ಹೇಳಿಕಳಿಸಬೇಕು. ಏ, ಯಾರಲ್ಲಿ ?"
 ಅಪರಂಪಾರನೆಂದ :
 "ಮಹಾರಾಜ, ನಾವಾಡಿದ್ದು ನಮ್ಮ ನಮ್ಮಲ್ಲೇ ಇರಬೇಕು."
 “ಆಗಲಿ,ಆಗಲಿ.”

...ಪೂಜೆಯಾಯಿತು. ಪ್ರಸಾದವಾಯಿತು. ಹಗಲು ಕಳೆದು ಇರುಳು ಬಹಳ ಹೊತ್ತಿನ ವರೆಗೆ ಮಾತುಕತೆ ನಡೆಯಿತು. ಕೊನೆಯಲ್ಲಿ ಚಿಕವೀರರಾಜನೆಂದ:

 "ನನ್ನನ್ನು ಬೇಸರ ಕವಿದಿತ್ತು, ಈ ಜೀವನದಲ್ಲಿ ಪುನಃ ಚೇತನ ತುಂಬಿದಿರಿ."

ಅಪರಂಪಾರ ಮುಗುಳುನಕ್ಕ.

 "ಹರನೀವ ಕಾಲಕ್ಕೆ ಸಿರಿ ಬೆನ್ನಲ್ಲಿ ಬಕ್ಕು. ಹರಿದು ಹೆದ್ದೊರೆ ಕೆರೆಯ ತುಂಬಿದಂತಯ್ಯ. ನೆರೆಯದ ವಸ್ತು ನೆರೆವುದು ನೋಡಯ್ಯ. ಅರಸು, ಪರಿವಾರ, ಕೈವಾರವಯ್ಯ..."
 "ಸಂಪತ್ತು ಸೌಭಾಗ್ಯಗಳ ಯೋಚನೆ ನಾನು ಮಾಡುತಾ ಇಲ್ಲ, ಸ್ವಾಮಿಗಳೆ, ವೀರನಂತೆ ಕಾದಿ ಹಾಲೇರಿ ವಂಶಕ್ಕೆ ತಟ್ಟಿದ ಕಳಂಕವನ್ನು ಹೋಗಲಾಡಿಸಬೇಕು ಅನ್ನೋದೊಂದೇ ನನ್ನ ಹಂಬಲ."
 ಅರಸನನ್ನೊಮ್ಮೆ ದಿಟ್ಟಿಸಿ ನೋಡಿ ಅಪರಂಪಾರನೆಂದ:
"ಇಂಗ್ರೇಜಿಯವರೀಗ ಹೊಲಬು ತಪ್ಪಿದ ಮೃಗ. ಕೊಡಗಿನ ಕಾಡಿನಿಂದ ಅದಕ್ಕೆ ವಿಮೋಚನೆ ಇಲ್ಲ. ಅದು ಬಲೆಗೆ ಬೀಳುತದೆ. ನಿನ್ನ ಹಂಬಲ ಈಡೇರುತದೆ."
                        ೪೯
 ಅಪರಂಪಾರ ವೇಲೂರನ್ನು ಬಿಟ್ಟು ಹೊರಟ ಕೆಲ ದಿನಗಳಲ್ಲಿ ಮೈಸೂರನ್ನು ತಲಪಿದ. ಟಪಾಲಿನಲ್ಲಿ, ಕಾಸ್ಸಾ ಮೇಜರನನ್ನು ಯೋಚನೆಗೀಡುಮಾಡಿದ ಒಂದು  ವರದಿಯಿತ್ತು.