ಪುಟ:ಸ್ವಾಮಿ ಅಪರಂಪಾರ.pdf/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೩೪ ಸ್ವಾಮಿ ಅಪರಂಪಾರ ಲೀಹಾರ್ಡಿಯೆಂದ:

“ಅವನು ಎಲ್ಲಿದಾನೇಂತ ನಮ್ಮ ಗೂಢಚಾರರು ಕಂಡುಹಿಡಿಯಲಿ."
                    *    *    *
...ಆ ವೇಳೆಗೆ ಅಪರಂಪಾರ ಕಾಜಗೋಡನ್ನು ತಲಪಿ ಅಪ್ಪಯ್ಯನ ಅತಿಥಿಯಾಗಿದ್ದ. ಅಪ್ಪಯ್ಯ ಆ ನಾಡಿನ ಪ್ರಮುಖ. ಆಂಗ್ಲರಿಗಿದಿರಾದ ಹೋರಾಟದಲ್ಲಿ ಭಾಗಿಯಾಗಲು ಹಾತೊರೆಯುತ್ತಿದ್ದ ಮನುಷ್ಯ.
 ಅಲ್ಲಿ ಅಪರಂಪಾರ ಮೈಸೂರು ರಾಜ್ಯದ ಆಡಳಿತಗಾರ ಕಾಸ್ಸಾಮೇಜರನಿಗೆ ಕಳುಹ ಲೆಂದು ಸುದೀರ್ಘ ಪತ್ರವೊಂದನ್ನು ಸಿದ್ಧಗೊಳಿಸಿದ.
 ಅದರಲ್ಲಿ ಮುಖ್ಯವಾಗಿದ್ದುದು, ದಕ್ಷಿಣ ಭಾರತದ ಮೂರು ರಾಜ್ಯಗಳ ಮೈಸೂರು, ಬಿದನೂರು, ಕೊಡಗುಗಳ—ಇತಿಹಾಸದ ಸಿಂಹಾವಲೋಕನ ; ಪರದೇಶದಿಂದ ಬಂದು ಹಿಂದೂಸ್ಥಾನದ ಭೂಭಾಗಗಳನ್ನು ಪದಕ್ರಾಂತ ಮಾಡುವ ನೀತಿ ತಪ್ಪೆಂಬ ವಿನಮ್ರ ಸೂಚನೆ; ಈ ರಾಜ್ಯಗಳನ್ನು ನ್ಯಾಯವಾದ ಹಕ್ಕುದಾರರಿಗೆ ಮರಳಿ ಕೊಟ್ಟು ಬಂದವರು ತಮ್ಮ ದೇಶಕ್ಕೆ ಹಿಂತೆರಳಿ, ಮಿತ್ರರಾಗಿ ಉಳಿಯಬೇಕೆಂಬ ಕರೆ; ಇಲ್ಲದೆ ಹೋದರೆ ಅನಾಹುತ ಸಂಭವಿಸುವುದೆಂಬ ಎಚ್ಚರಿಕೆ.
 ಅಪರಂಪಾರ ಆ ಪತ್ರಕ್ಕೆ 'ಹಾಲೇರಿ ಸಂಸ್ಥಾನದ ರಾಜಗುರು' ಎಂದು ಸಹಿ ಹಾಕಿದ.
 ಅಪ್ಪಯ್ಯನನ್ನು ಆತ ಕೇಳಿದ: 
 “ಯಾರ ವಶ ಕೊಟ್ಟ ಕಳಿಸೋಣ ?" 
 ಸಿದ್ದಲಿಂಗನೆಂದ: 
 “ಸಂಜಯ ನಾನಾಗತೇನೆ, ಸ್ವಾಮಿಗಳೆ." 
 "ಅವರು ಹಿಡಿದು ಹಾಕಿದರೊ ?"
 “ಅಷ್ಟೇ ತಾನೇ? ನನಗೇನು ಹೆಂಡಿರೆ, ಮಕ್ಕಳೆ–ಅನ್ನಕ್ಕಿನ್ನೇನು ಗತಿ ಅಂತ ಅಳೋದಕ್ಕೆ?"
 “ಸರಿಯಪ್ಪ, ಮೊದಲು ಬಸಪ್ಪಾಜಿ ಅರಸರನ್ನು ಕಂಡು ವಿಷಯ ತಿಳಿಸಿ, ಕಾಸ್ಸಾಮೇಜರನ ಭೇಟಿಗೆ ನೀವು ಹೋಗಬೇಕು."
 "ಹ್ಞು. ಬೇಕಿದ್ದರೆ, ಮದರಾಸಿಗೂ ಹೋಗಿಬರತೇನೆ. ಅವರಾಚೆಯವನು ಕಲಕತ್ತೆಯಲ್ಲಿದಾನಂತಲ್ಲ, ಅಲ್ಲಿಗೂ ಹೋಗತೇನೆ. ಆಜ್ಞಾಪಿಸುವಿರಾದರೆ ಸಮುದ್ರೋಲ್ಲಂಘನವನ್ನೂ ಮಾಡತೇನೆ." 
 "ಚೇಳಿನ ಮಂತ್ರವನ್ನು ಈಗ ಪಠಿಸುತಿದೇವೆ. ಹಾವಿನ ಹುತ್ತಕ್ಕೆ ಮುಂದೆ ಕೈ ಹಾಕೋಣ."
                           ೪೭
 “ಸುಮಾರು ಒಂದು ವರುಷವಾಗತಾ ಬಂತು; ಹೋದವರ ಸುದ್ದಿ ಇಲ್ಲ–ಅಂತ ಸ್ವಲ್ಪ ವಿವಂಚನೆಯಾಗಿತ್ತು.ಅಂತೂ ಬಂದಿರಲ್ಲ, ದಯಮಾಡಿಸಿ, ದಯಮಾಡಿಸಿ" ಎಂದು ಬಸಪ್ಪಾಜಿ ಅರಸು ಸಿದ್ದಲಿಂಗನ ಕೈಹಿಡಿದು ಒಳಕ್ಕೆ ಕರೆದೊಯ್ದ.
 ಇಕ್ಕೇರಿ-ವೇಲೂರುಗಳಿಗೆ ಅಪರಂಪಾರ ಕೈಗೊಂಡ ಪ್ರವಾಸ, ಕಾಜಗೋಡಿನಲ್ಲಿ