ಪುಟ:ಸ್ವಾಮಿ ಅಪರಂಪಾರ.pdf/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೩೬ ಸ್ವಾಮಿ ಅಪರಂಪಾರ

         ಅದನ್ನೆತ್ತಿ ನೋಡಿ ದುಭಾಷಿಯೆಂದ :
         "ಅಪರಂಪಾರಸ್ವಾಮಿಯ ಸಹಿಯಿದೆ, ಖಾವಂದರೆ."
         "ಯಾರು?   ತಡೆ ! ಅಭರಂಭಾರ ಅಂದೆಯಾ?   ಆ ಮನುಷ್ಯ?  ಏಯ್ !  ನೀನು
   ಸ್ವಾಮಿಯ ನಂಟನೊ ?"
          "ವಿರಕ್ತರಲ್ಲಿ ನಂಟಸ್ತನವೆ?   ಹ್ಞಾ , ಒಂದು ರೀತಿಯಲ್ಲಿ ನಾವು  ಆಪ್ತಬಂಧುಗಳು"
    ಎಂದ ಸಿದ್ಧಲಿಂಗ, ದುಭಾಷಿಯ ಹಾಗೂ ಕಾಸ್ಸಾಮೇಜರನ ಮುಖ ನೋಡುತ್ತ.
         ಕಾಸ್ಸಾಮೇಜರನ ಕಣ್ಣುಗಳು ಚುರುಕುಗೊಂಡುವು.
         ಆತನೆಂದ:
         "ಪತ್ರ  ಹಿಂದೂಸ್ಥಾನಿಯಲ್ಲಿದೆಯೋ ಕ್ಯಾನರೀಸಿನಲ್ಲಿದೆಯೊ ?"
         ಕ್ಯಾನರೀಸಿನಲ್ಲಿ"  ಎಂದ, ದುಭಾಷಿ.
         "ಒಂದೊಂದೇ ವಾಕ್ಯ  ಓದಿ ತರ್ಜುಮೆ ಮಾಡು."
        ಸಿದ್ದಲಿಂಗ ನಿಂತಿದ್ದ.
        ಓಲೆಯ ಭಾಷಾಂತರಕ್ಕೆ ಪಠನಕ್ಕೆ ಕಿವಿಗೊಟ್ಟ.
        ಕಾಸ್ಸಾಮೇಜರ್ ಮೇಜನ್ನು ಗುದ್ದಿ ಗದರಿದ :
        ಆ  ಅಭರoಭಾರ ಸ್ವಾಮಿ  ಮೂರ್ಖನಿರಬೇಕು, ಶತಮೂರ್ಖನಿರಬೇಕು, ಅವನು
   ಏನೂಂತ ತಿಳಕೊಂಡಿದ್ದಾನೆ ?"
         ಸಿದ್ಧಲಿಂಗನ ಕಡೆ ನೋಡಿ ಹಿಂದೂಸ್ಥಾನಿಯಲ್ಲಿ ಅವನೆಂದ :
           'ಏಯ್ ! ನಿನಗೆ ಮೊಗಲಾಯಿ ಬರುತದೊ ?
           "ಪರದೇಶೀಯರಾದ ತಮಗೆ ಬರತದೆ. ನನಗೆ ಬರಲಾರದಾ ? ಅಷ್ಟೇ ಅಲ್ಲ, ತಿಳಕೊಳ್ಳಿ 
   ಸಾಹೇಬರೇ. ನೀನು-ನೀವು–ತಾವು ವ್ಯತ್ಯಾಸವೆಲ್ಲ ನನಗೆ ಗೊತ್ತಾಗತದೆ. ಗೌರವದಿಂದ
   ಮಾತನಾಡಿದರೆ ಚೆನ್ನು."
       "ಮುಚ್ಚುಬಾಯಿ! ನಾಲಿಗೆ ಕೆನ್ನೆ ಒಳಗಡೆ ಇಟ್ಟು  ಮಾತಾಡಬೇಡ."
       "ಒಳಗಡೆಯೂ  ಇಡೋದಿಲ್ಲ,  ಉದ್ದವೂ ಬೆಳೆಸೋದಿಲ್ಲ,  ಎಷ್ಟು ಅಗತ್ಯವೋ ಅಷ್ಟೇ
   ಮಾತಾಡತೇನೆ."
         "ನಿನ್ನ ಸ್ವಾಮಿಯ ಹತ್ತರ ಎಷ್ಟು ಫೌಜದೆ ?"
         "ಅಪರಂಪಾರ ಸ್ವಾಮಿಯವರು ಫೌಜುದಾರರಲ್ಲ ಸಾಹೇಬರೇ."
          "ಮತ್ತೆ ? ಅನಾಹುತವಾದೀತು  ಅಂತ  ಎಚ್ಚರಿಕೆ  ಕೊಡುತಾನಲ್ಲ ! ಅವನಿಗೆ ಮತಿ-
      ಭ್ರಮಣೆಯಾಗಿದೆಯೊ ?"
            "ತಿಳಕೊಳ್ಳಿ ! ಅವಾಚ್ಯ  ಪದಗಳನ್ನಾಡಿದರೆ ನಾನು ಕೇಳುವವನಲ್ಲ !"
            "ಇಷ್ಟು  ಧೈರ್ಯ !  ಹುಂ.  ನಿನ್ನನ್ನು  ಕಟ್ಟಿಹಾಕಿ  ಬಂದೀಖಾನೆಯಲ್ಲಿಡತೇವೆ. ಏನು 
       ಮಾಡತೀಯಾ ?"
            ದುಭಾಷಿಯ ಕಡೆ ನೋಡಿ ಸಿದ್ದಲಿಂಗ  ಕನ್ನಡದಲ್ಲಿ  ಅಂದ  :
             "ಜ್ವರವಿಡಿದ ಬಾಯಿಗೆ ನೊರೆವಾಲು ಒಲಿವುದೆ ?"
            ಕಾಸ್ಸಾಮೇಜರ್ ಗರ್ಜಿಸಿದ :
            "ಏನೆಂದ  ಅವನು ?"