ಪುಟ:ಸ್ವಾಮಿ ಅಪರಂಪಾರ.pdf/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



 ೧೪೬             
                ಸ್ವಾಮಿ ಅಪರಂಪಾರ
  "ಖಂಡಿತ ತಾಯಿಾ. ಪೊನ್ನಪ್ಪ ಬೋಪಣ್ಣ ಈ ಕೆಲವರನ್ನ ಬಿಟ್ಟರ ಉಳಿಕೆ ಎಲ್ಲರ ಬೆಂಬಲವೂ ಸ್ವಾಮಿಯವರಿಗದೆ."
  "ಆ ಚನ್ನಬಸಪ್ಪಂದೇನಾದರೂ ಸುದ್ದಿ ಉಂಟಾ? ಅಪ್ಪಂಗಳ ಜಹಗೀರಿಗೆ ತಿರುಗಿ ಬರತಾನಂತಾ ?"
  "ಆತ ಕೊಡಗಿನ ಒಳಗೆ ಓಗಕೂಡದೂಂತ ಕುಂಪಣಿಯವರು ತಾಕೀತು ಮಾಡವರಂತೆ, ಇಬ್ಬರನ್ನೂ ಬೆಂಗಳೂರಿಗೆ ಕರಕೊಂಡು ಓಗವರಂತೆ. ಅವರ ಸಂಗಾತ ಇಲ್ಲಿಂದ ಓಡ್ಹೋಗಿ ದ್ರಲ್ಲ ಚಾವಡಿಕಾರರು-ಅವರೆಲ್ಲಾ ಇಂಗ್ರೇಜಿ ದಂಡಿನಲ್ಲಿ ಭರ್ತಿಯಾದರಂತೆ."
  “ಆರಸಾಗಬೇಕೂಂತಿದ್ದ. ಇನ್ನು ಅವರ ಆಳಾಗಿ ಬದುಕತಾನೆ. ಅಯ್ಯೋ..." ಎಂದು, ಗಂಗಮ್ಮ ಉದ್ಗರಿಸಿ, ಅಡುಗೆಯವಳೇನು ಮಾಡುತ್ತಿರುವಳೆಂದು ನೋಡಲು ಒಳ ಹೋದಳು. 
 ಮಾನಾಡದೆ ನಿಂತಿದ್ದ ಹರೆಯದ ಹೆಣ್ಣು. ದೈವ ಮುನಿಯದೇ ಇದ್ದಿದ್ದರೆ ರಾಣಿಯೂ ಆಗುತ್ತಿದ್ದಳೇನೊ. ತಾನು ಯಾಕೆ ಇನ್ನೂ ಇಲ್ಲೇ ಇರಲಿ ?–ಎಂದುಕೊಂಡು ಧರ್ಮಪ್ಪ ನೆದ್ದ.
  "ಹೋಗುತೀಯಾ?" ಎಂದು ರಾಜಮ್ಮಾಜಿ ಕೇಳಿದಳು. ಆ ಧ್ವನಿಯಲ್ಲಿ ಮಾಧುರ್‍ಯವೂ ಇತ್ತು, ಗಾಂಭೀರ್‍ಯವು ಇತ್ತು.
  "ಹೊರಡತೀನಿ, ಅಮ್ಮಣ್ಣಿ."
  "ಸ್ವಾಮಿಯವರನ್ನ ಮತ್ತೆ ಯಾವತ್ತು ಕಾಣತೀಯಾ?"
  "ಇನ್ನೂ ಮೂರು ಹೋಬಳಿ ಸುತ್ತಬೇಕು. ಹೆಚ್ಚೆಂದರೆ ಇನ್ನೆಂಟು ದಿವಸ ಬೇಕೇನೊ?”
  ಈಕೆ ಹೀಗೆ ಯಾಕೆ ಕೇಳಿದಳು?–ಎಂದು ಯೋಚಿಸುವುದಕ್ಕೂ ಧರ್ಮಪ್ಪನಿಗೆ ಆಸ್ಪದ ಕೊಡದೆ, ರಾಜಮ್ಮಾಜಿಯೆಂದಳು:
  "ಒಂದು ಕೆಲಸ ಮಾಡತೀಯಾ ?"
  "ಅಪ್ಪಣೆಯಾಗಲಿ, ಅಮ್ಮಣ್ಣಿ." 
  ರಾಜಮ್ಮಾಜಿ ತನ್ನ ಕೊರಳಿನಿಂದ ಎರಡೆಳೆಯ ರತ್ನಹಾರವೊಂದನ್ನು ತೆಗೆದು, "ಇದನ್ನ ತಗೋ. ಸ್ವಾಮಿಯವರಿಗೆ ಮುಟ್ಟಿಸು" ಎಂದಳು.
  ಹಾರ ಬಿಸಿಲಲ್ಲಿ ಚಕಚಕಿಸಿತು. ಧರ್ಮಪ್ಪ ಎರಡೂ ಕೈಯೊಡ್ಡಿ ಅದನ್ನು ಸ್ವೀಕರಿಸಿದ.
  "ಯಾರು ಕೊಟ್ಟರೂಂತ ಹೇಳಲಿ?”
  "ಅಪ್ಪಂಗಳದ ಸೊಸೆ ಕೊಟ್ಟಳು ಅನ್ನು."
  "ಆಗಲಿ, ಅಮ್ಮಣ್ಣಿ."
  "ಇನ್ನು ಈ ಕಡೆ ಯಾವತ್ತು ಬರತೀಯಾ?"
  "ಗೊತ್ತಿಲ್ಲ, ಅಮ್ಮಣ್ಣಿ. ಲಡಾಯಿ ಲಗೂ ಶುರು ಆಗ್ಬೌದು. ಅದು ಮುಗಿದ ಮೇಲೇ ಬಂದೇನು ಅನಿಸತದೆ."
  "ಯಾವತ್ತಾದರೂ ಸರಿ. ಈ ಕಡೆ ಬಂದಾಗಲೆಲ್ಲ ಉಂಡು ಹೋಗುವಿಯಂತೆ."
  ಧರ್ಮಪ್ಪ ಹಾರವನ್ನು ರುಮಾಲಿನ ತುದಿಯಲ್ಲಿ ಕಟ್ಟಿ, ಅಂಗಿಯೊಳಗೆ ಬಿಟ್ಟ, ತುಸು ತಲೆಬಾಗಿ ವಂದಿಸಿದ. ರಾಜಮ್ಮಾಜಿ ಯಾವ ಪ್ರತಿಕ್ರಿಯೆಯನ್ನೂ ವ್ಯಕ್ತಪಡಿಸಲಿಲ್ಲ. ದ್ವಾರದ ಚೌಕಟ್ಟಿಗೊರಗಿ ಆಕೆ ನಿಂತಳು.