ಪುಟ:ಸ್ವಾಮಿ ಅಪರಂಪಾರ.pdf/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

.೧೫೬

ಸ್ವಾಮಿ ಅಪರಂಪಾರ

“ನಾವೀಗ ಹೊರಡತೇವೆ, ಬಸಪ್ಪಾಜಿಯವರೇ. ಮುಂದಿನ ತಾಣದಿಂದ ನಿಮಗೆ ಬರೀ
ತೇವೆ."
ಕಷ್ಟಪಟ್ಟು ಬಸಪ್ಪಾಜಿಯೆಂದ:
"ತಮ್ಮನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಲಾರೆ. ತಾವು ದೇವತಾ ಮನುಷ್ಯ. ನಾವು
ಸಾಮಾನ್ಯ ಮಾನವರು."
"ಅರಮನೆಯಿಂದ ಇಂಗ್ರೇಜಿಯವರಿಗೆ ಸುದ್ದಿ ಹೋಯ್ತೆಂದು ನಿಮಗೆ ವ್ಯಥೆಯೆ?”
"ಆದದ್ದಾಯಿತಲ್ಲ. ಇನ್ನು ಚಿಂತಿಸಿ ಏನು ಫಲ?"
"ನಿಮ್ಮ ರಕ್ಷಣೆ ಮಾಡಿಕೊಳ್ಳಿ. ಮುಂದೆ ಎತ್ತ ಏನೂಂತ ಬೇಗನೆ ತಿಳಿಸತೇವೆ. ಬರಲೆ
ಬಸಪ್ಪಾಜಿ ಅರಸರೆ ?”
ಬಸಪ್ಪಾಜಿಯ ಕಣ್ಣುಗಳು ಹನಿಗೂಡಿದುವು. ಹೊರಕ್ಕೆ ಓಡಿ ಮನೆಯ ಸಮಿಾಪ
ದಲ್ಲೆಲ್ಲೂ ಯಾರೂ ಇಲ್ಲವೆಂಬುದನ್ನು ಖಚಿತಪಡಿಸಿಕೊಂಡು ಬಂದು, ತಲೆಬಾಗಿಲವರೆಗೂ
ಅಪರಂಪಾರನನ್ನು ಹಿಂಬಾಲಿಸುತ್ತ, ಹೆಜ್ಜೆಹೆಜ್ಜೆಗೂ ಆತನೆಂದ:
"ಇನ್ನು ತಮ್ಮ ಭೇಟಿ ಯಾವಾಗಲೊ ? ಯಾವಾಗಲೊ ?"

                       ೫೫

ಕಾಜಗೋಡು ಅಪರಂಪಾರಸ್ವಾಮಿಯ ಮುಖ್ಯ ಠಾಣ್ಯವಾಯಿತು. ಅಲ್ಲಿಂದ ಆತ ತನ್ನ
ಹಿಂಬಾಲಕರಿಗೆ ನಿರೂಪಗಳನ್ನು ಹೊರಡಿಸಿದ.
ಆಂಗ್ಲ ಆಡಳಿತಗಾರರನ್ನು ಕೆಣಕುವ ಕೆಲಸ ಆಗಲೇ ಆರಂಭವಾಗಿತ್ತು.
ಒಂದು ನಿರೂಪದಲ್ಲಿ ಅಪರಂಪಾರನೆಂದ:
"ನಮ್ಮ ತಂಡಗಳು ಹೆದ್ದಾರಿಗಳಲ್ಲೂ ಘಾಟಿ ಮಾರ್ಗಗಳಲ್ಲೂ ಗಸ್ತಿ ತಿರುಗಬೇಕು. ಎಲ್ಲ
ಟಪಾಲುಗಳನ್ನೂ ತಡೆಯಬೇಕು. ಒಂದೇ ಒಂದು ಕಾಗದವಾದರೂ ಆಚೆ ಈಚೆ ಹೋಗ
ತಕ್ಕದ್ದಲ್ಲ. ಹಾಗೆಯೇ ಇರಸಾಲುಗಳನ್ನು ತಡೆಯಬೇಕು. ಬಿಡಿಗಾಸನ್ನೂ ಅಪವ್ಯಯ
ಮಾಡದೆ ಹಣವನ್ನೆಲ್ಲ ದಳಗಳ ಮುಖ್ಯಸ್ಥರು ಜೋಪಾನವಾಗಿಡತಕ್ಕದ್ದು."
ಇನ್ನೊಂದರಲ್ಲಿ ಆತ ಆದೇಶವಿತ್ತ :
ಮಹಾಸಂಭವ ಒಂದರಿಂದ ಸದ್ಯದಲ್ಲೇ ಕೊಡಗು ತಲ್ಲಣಿಸಿ ಹೋಗತದೆ. ಇಲ್ಲಿ ಬೇರೂ
ರಿರುವ ಇಂಗ್ರೇಜಿ ಸರಕಾರ ನಶಿಸಿಹೋಗತದೆ. ಆದರೆ ಈ ಸಂಘರ್ಷದಲ್ಲಿ ಇತ್ತಂಡಗಳಿಗೂ
ಅಪಾರ ನಷ್ಟ ಉಂಟಾಗತದೆ. ಅನೇಕರು ಸಾವುನೋವುಗಳಿಗೆ ಈಡಾಗತಾರೆ. ಲಡಾಯಿಯಲ್ಲಿ
ಇಂಗ್ರೇಜಿಯರ ವಿರುದ್ಧ ನಮ್ಮನ್ನು ಸೇರಬಯಸುವವರೆಲ್ಲ ಇದನ್ನು ನೆನಪಿಡತಕ್ಕದ್ದು.
ಇದು ವಾಸ್ತವ ರಣರಂಗದಲ್ಲಿ ನಡೆಯುವ ಪಡೆಕ್ಕಳಿ. ಇದರಲ್ಲಿ ನಾವು ಗೆಲ್ಲಬೇಕು, ಗೆದ್ದು,
ವೈರಿಯ ಚಾವುಪರೆಯನ್ನು–ಶೋಕವಾದ್ಯವನ್ನು -ನಾವು ಕೇಳಬೇಕು."
ಮತ್ತೊಂದರಲ್ಲಿ ಆತನೆಂದ:
"ಈ ನಿರೂಪವನ್ನು ಓದುವವರಿಗೆಲ್ಲ ನಾವು ಹೇಳುತೇವೆ : ಏಕೆ ಚಿಂತೆಯನು ಮಾಡುವೆ
ಮೂಢ? ವಿಶ್ವನಾಥನಿಹ ಯೋಚನೆ ಬೇಡ. ಆದ್ದರಿಂದ ಏಳಿರಿ! ಅಣಿಯಾಗಿರಿ! ಹೋರಾಡಿರಿ!
ಹಂದೆಯ ಕೈಯಲ್ಲಿ ಚಂದ್ರಾಯುಧವಿದ್ದು ಫಲವೇನು? ಮರ್ಕಟನ ಕೈಯಲ್ಲಿ ಮಾಣಿಕ್ಯ
ವಿದ್ದು ಫಲವೇನು? ಆ ಕಾರಣದಿಂದ, ಮನುಷ್ಯ ಜೀವಿಗಳಾಗಿರಿ ! ಚಂದ್ರಾಯುಧ