ಪುಟ:ಸ್ವಾಮಿ ಅಪರಂಪಾರ.pdf/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸ್ವಾಮಿ ಅಪರಂಪಾರ

೧೫೭.

ಪ್ರಯೋಗಿಸಿರಿ ! ನಿಮ್ಮ ವೀರಮುಖ ಕಾಂತಿಯನ್ನು ದರ್ಪಣದಲ್ಲಿ ನೋಡಿರಿ! ಸ್ವಾತಂತ್ರ್ಯ
ವೆಂಬ ಮಾಣಿಕ್ಯದ ಬೆಲೆಯನ್ನು ಅರಿಯಿರಿ!"
ಈ ಕರೆಗಳಿಗೆ ಕೊಡಗಿನ ಪ್ರಜೆಗಳು ಓಗೊಟ್ಟರು.
ಮಾಸಗಳು ಉರುಳಿದುವು. ಪ್ರಜಾವಿರೋಧದ ಪ್ರಖರತೆ ಹೆಚ್ಚುತ್ತ ನಡೆಯಿತು.
ಅಭಿಯೋಗದ ದಿನ ಇನ್ನು ದೂರವಿರದು–ಎಂದು ಎಲ್ಲರೂ ಅಂದುಕೊಂಡರು.
ಒಂದು ದಿನ ದೀರ್ಘ ಶಿವಧ್ಯಾನದ ಬಳಿಕ ಅಪರಂಪಾರ ಕೇಳಿದ:
"ಈ ದಿನ ಯಾವ ವಾರ ? ಯಾವ ತಿಥಿ ?"
-ಉತ್ತರ ಪಡೆದ ಬಳಿಕ ಕೈಬೆರಳುಗಳಲ್ಲಿ ಎಣಿಕೆ ಹಾಕಿ ಆತನೆಂದ.
"ದಂಡಯಾತ್ರೆಗೆ ದಿನ ಗೊತ್ತುಮಾಡಿದೇನೆ. ಓಲೆಕಾರರನ್ನು ಕರೆಯಿರಿ!"
ಒಬ್ಬ ಪುಟ್ಟಬಸವನಲ್ಲಿಗೆ, ಇನ್ನೊಬ್ಬ ಸೂರಪ್ಪನಾಯಕನಲ್ಲಿಗೆ, ಮತ್ತೊಬ್ಬ ವೇಲೂರಿಗೆ
ಚಿಕವೀರರಾಜನಲ್ಲಿಗೆ, ನಾಲ್ಕನೆಯವನು ಬಸಪ್ಪಾಜಿ ಅರಸನಲ್ಲಿಗೆ, ಮತ್ತೆ ಹಲವರು ಬೇರೆ
ಬೇರೆ ನಾಡುಗಳ ಪ್ರಮುಖರಲ್ಲಿಗೆ, ದಳನಾಯಕರಲ್ಲಿಗೆ, ಅಶ್ವಾರೋಹಿಗಳಾಗಿ ದಂಡಯಾತ್ರೆ
ಆರಂಭವಾಗುವ ದಿನ ತಿಳಿಸಲೆಂದು ಧಾವಿಸಿದರು.
ಅತ್ಯಂತ ಸಂಕ್ಷಿಪ್ತವಾಗಿತ್ತು ಆ ಸಂದೇಶ. ಅದರಲ್ಲಿದ್ದುದಿಷ್ಟೆ:
"ಅಕ್ಷತೃತೀಯೆ--”
ಎಲ್ಲೆಡೆಗಳಲ್ಲೂ ಆ ಪದ ಮೊಳಗಿ ಮಾರ್ಮೊಳಗಿತು:
“ಅಕ್ಷತೃತೀಯೆ, ಅಕ್ಷತೃತೀಯೆ."

                            ೫೬

ಕಾಜಗೋಡಿನಲ್ಲಿ ಒಂದು ಸಾವಿರ ಯೋಧರು ನೆರೆದರು, ಕೆಲವರು ಅಶ್ವಾರೋಹಿಗಳು :
ಉಳಿದವರೆಲ್ಲ ಪದಾತಿಗಳು. ಬಂದೂಕುಗಳು ಕೆಲವರಲ್ಲಿ; ಖಡ್ಗ ಢಾಲುಗಳು ಬೇರೆ ಕೆಲವ
ರಲ್ಲಿ: ಈಟಿ ಭರ್ಚಿಗಳು ಇನ್ನಿತರರಲ್ಲಿ: ಬಿಲ್ಲು ಬಾಣಗಳು ನಿಷ್ಣಾತ ಬೇಡರ ವಶದಲ್ಲಿ.
ಅಕ್ಷತೃತೀಯೆಗೆ ಹಿಂದಿನ ಇರುಳು ಅಪ್ಪಯ್ಯನ ಮನೆಯ ಒಂದು ಕೊಠಡಿಯಲ್ಲಿ.
ಅಪರಂಪಾರಸ್ವಾಮಿಯೂ ಅಪ್ಪಯ್ಯನೂ ದಂಡಯಾತ್ರೆಯ ವೇಗ ದಾರಿಗಳನ್ನು ಇತ್ಯರ್ಥ
ಪಡಿಸಿದರು.
ಕಾಜಗೋಡಿನಿಂದ ನಸುಕಿನಲ್ಲಿ ಹೊರಟು ಹಾರಂಗಿಯತ್ತ ಸಾಗಬೇಕು. ಮಧ್ಯಾಹ್ನದ
ಊಟ ವಿಶ್ರಾಂತಿ ಗೌಡಳ್ಳಿಯಲ್ಲಿ. ಹಾರಂಗಿಯಲ್ಲಿ ವೆಂಕಟಪ್ಪನ ನೇತೃತ್ವದಲ್ಲಿರುವ ದಂಡನ್ನು
ಕೂಡಿಕೊಳ್ಳುವುದು. ಅಲ್ಲಿಂದ ಮಡಕೇರಿಗೆ ಬೇರೆ ಬೇರೆ ಕಡೆಗಳಿಂದ ಬಂದ ಯೋಧರೆಲ್ಲ
ದಾರಿಯಲ್ಲಿ ಸೇನೆಯನ್ನು ಸೇರಿಕೊಳ್ಳಬೇಕು. ಘಟ್ಟದ ಕೆಳಗಿನ ಕೆಲಸ ಮುಗಿಸಿ ಪುಟ್ಟಬಸವನೂ
ಸಂಗಡಿಗರೂ ಮಡಕೇರಿಗೆ ಬರಬೇಕು. ನಿರ್ಣಾಯಕ ಕಾಳಗ ರಾಜಧಾನಿಯಲ್ಲಿ.
ಅಪರಂಪಾರನೆಂದ :
“ಗೌಡಳ್ಳಿಯ ದಾರಿಯಲ್ಲಿ ಕೊಳ ಪುಷ್ಕರಿಣಿ ಯಾವುದೂ ಇಲ್ಲವಾ ? ನಾವೊಂದಿಷ್ಟು
ಸ್ನಾನ ಶಿವಪೂಜೆ ಮುಗಿಸಿ ಶಿಬಿರವನ್ನು ಸೇರಬಹುದು.”
ಅಪ್ಪಯ್ಯನೆಂದ: