ಪುಟ:ಸ್ವಾಮಿ ಅಪರಂಪಾರ.pdf/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೬೨

ಸ್ವಾಮಿ ಅಪರ೦ಪಾರ

"ಇವನು ಕೈದಿ, ಜೀವಂತ ಹಿಡಿದು ತಂದಿದೇವೆ. ಇದು ಇವನಲ್ಲಿದ್ದ ಕೈಬಂದೂಕು:
ಇಂಗ್ರೇಜಿ ಸರಕಾರಕ್ಕೆ ಸೇರಿದ‍್ದು. ಹುಜೂರ್ ವಿರುದ್ಧ ದಂಗೆಯೆದ್ದರೆ ಏನಾಗತದೇಂತ
ಲೋಕಕ್ಕೆ ತಿಳಿಯಲಿ ಅಂತ ಇವನ ಸಂಗಡಿಗನನ್ನು ಮರಕ್ಕೆ ಕಟ್ಟಿಹಾಕಿದೆವು-”
ಮಧ್ಯೆ ಬಾಯಿಹಾಕಿ ಲೀಹಾರ್ಡಿಯೆಂದ:
"ಅವನು ಯಾರು ? ಯಾಕೆ ಕೊಲ್ಲಲಿಲ್ಲ ?"
"ಒಬ್ಬ ಸಾಮಾನ್ಯ ಸೈನಿಕ,ಅಂಗರಕ್ಷಕ. ಕೊಲ್ಲದೇ ಇದ್ದರೂ ಅವನು ಸತ್ತಹಾಗೆಯೇ.
ಹುಲಿ ಬಂದು ತಿನ್ನುತದೆ. ಇಲ್ಲವಾದರೆ ಉಪವಾಸವಿದ್ದು ಕಣ್ಣು ಮುಚ್ಚುತಾನೆ. ಗುಂಡು
ಹಾರಿಸಬಾರದು, ವಿದ್ರೋಹಿಗಳ ದಂಡಿಗೆ ಸುಳಿವು ಸಿಗಬಾರದು-ಎಂದಿದ್ದಿರಿ. ಹಾಗೆಯೇ
ಮಾಡಿದೇವೆ. ಸದ್ದು ಸಪ್ಪಳವಿಲ್ಲದೆ ಕೆಲಸ ಮುಗಿಸಿದೇವೆ.”
"ಭೇಷಕ್ ! ಭೇಷಕ್ ! ನಿನ್ನನ್ನು ಸುಭೇದಾರನಾಗಿ ಮಾಡುತೇವೆ.”
"ಖಾವಂದರ ಚಿತ್ತ."
ಕೈಕಾಲುಗಳಲ್ಲಿ ಸರಪಣಿಯನ್ನು ಹೊತ್ತು ಅಪರಂಪಾರ ನಿಶ್ಚಲನಾಗಿ ನಿಂತ. ಅದು
ಅರಮನೆಯ ಸಭಾಭವನ. ಆಂಗ್ಲ ಪ್ರಭೃತಿಗಳ ತೈಲಚಿತ್ರಗಳು ಗೋಡೆಗಳಿಂದ ಕೆಳಕ್ಕೆ
ನೋಡಿ, "ನಾವು ಅಜೇಯರು!” ಎಂದು ಸಾರುತ್ತಿದುವು, ಬಿಳಿಯ ಸೈನಿಕರಿಂದ, ಅವರ
ಕರಿಯ ಬೆಂಬಲಿಗರಿಂದ, ದ್ವಾರಗಳು ತುಂಬಿದ್ದುವು.
"ಅಪರಂಪಾರರನ್ನು ಬಂಧಿಸಿದರಂತೆ! ಸ್ವಾಮಿ ಅಪರಂಪಾರರನ್ನು ಬಂಧಿಸಿದರಂತೆ!"
ಸುದ್ದಿ ದಳುರಿಯಾಗಿ ಮಡಕೇರಿಯಲ್ಲಿ ಹಬ‍್ಬಿತ್ತು. ಜನ ಅರಮನೆಯ ಎದುರು
ಸಹಸ್ರಗಟ್ಟಲೆಯಲ್ಲಿ ನೆರೆಯತೊಡಗಿದ್ದರು. ಒಳಗಿನ ಬೇಗುದಿ ಅಸಹಾಯವಾಗಿ ಹೆಪ್ಪ
ಗಟ್ಟುತ್ತಲಿತ್ತು. ಜನರ ಮುಖಗಳು ನಿಸ್ತೇಜವಾಗಿದ್ದುವು.
ಬಂಧನದಲ್ಲಿ ಅಪರಂಪಾರನ ಧೀಮಂತ ವ್ಯಕ್ತಿತ್ವ ಇಮ್ಮಡಿಸಿತ್ತು. ಮುಷ್ಟಿಯ ಆಘಾತ
ದಿಂದ ಬೀಗಿಕೊಂಡಿದ್ದ ತುಟಿಗಳು, 'ಈತ ಅದಮ್ಮ' ಎಂಬ ಭಾವನೆಗೆ ಪುಟಗೊಡುತ್ತಿದ್ದುವು.
ಲೀಹಾರ್ಡಿ ಆಣಕಿಸಿದ:
“ಏಯ್, ಫಕೀರ್ ! ಏನಾಯಿತು ನಿನ್ನ ಬಂಡಾಯ?"
ಅಪರಂಪಾರ ಅವನನ್ನು ದಿಟ್ಟಿಸಿ ನೋಡಿದನೇ ಹೊರತು ಉತ್ತರವೀಯಲಿಲ್ಲ.
"ಮಾತಾಡೋ ! ಶಿವದ್ಯಾನಮಾಡತಾ ಇದೀಯೇನು? ಮೈಸೂರಿನವನಿಗೆ ಸಿಂಹಾಸನ,
ಇಕ್ಕೇರಿಯವನಿಗೆ ಪಟ್ಟ, ಚಿಕವೀರರಾಜನಿಗೆ ಗಾದಿ__ಕೊಡಿಸಿದೆಯಾ?"
ಅಪರಂಪಾರ ತುಟಿಗಳನ್ನು ತೆರೆದ:
“ಈ ಪ್ರಶ್ನೆಗೆ ಈ ಮೂರು ದೇಶಗಳ ಪ್ರಜೆಗಳು ಉತ್ತರ ಕೊಡುತಾರೆ, ಪ್ರಶ್ನಿಸು
ವವನು ನೀನು ಯಾರು ? ನಿನ್ನ ಅಧಿಕಾರವನ್ನು ನಾನು ಮಾನ್ಯ ಮಾಡುವುದಿಲ್ಲ. ದಿವಾನ
ರನ್ನು ಕರೆಸು.”
“ಎಲಾ! ಏಕವಚನ ! ನೀನು ರಾಜಗುರು ಅಲ್ಲವಾ? ದಿವಾನರನ್ನು ಕರೆಸಬೇಕೆ?
ಅವರು ನಮ್ಮ ತುಕಡಿ ಜತೆಗೆ ಹಾರಂಗಿಗೆ ಹೋಗಿದಾರೆ! ತಿಳೀತೇನು ? ನಿನ್ನ ಭಕ್ತಾದಿ
ಗಳನ್ನು ಹಿಡಿಯೋದಕ್ಕೆ !”
"ಹುಲುಮಾನವ! ಬಹಳ ಹಾರಾಡಬೇಡ! ಮಹಾದೇವನಿಚ್ಛೆ ಇದ್ದಂತಾಗದೆ!"
ಅಪರಂಪಾರನ ಎಡಬಲಗಳಲ್ಲಿದ್ದ ಸಿಪಾಯರು ಗದರಿದರು :