ಪುಟ:ಸ್ವಾಮಿ ಅಪರಂಪಾರ.pdf/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸ್ವಾಮಿ ಅಪರಂಪಾರ

೧೬೩

“ಬಾಯ್ಯುಚ್ಚು !”
ಅಪರಂಪಾರನೆಂದ:
“ಶಿವ-ಶಿವ-ಶಿವ...”
ಲೀಹಾರ್ಡಿ ಆಜ್ಞಾಪಿಸಿದ :
“ಇವನನ್ನು ಕೋಟೆಮನೆಯೊಳಗಿಡಿ ! ಸಂಕೋಲೆ ಬಿಚ್ಚಬಾರದು ! ಮಾಯವಾದಾನು !
ಹುಷಾರ್ ! ಅದೇನು ಗದ್ದಲ ಹೊರಗೆ ? ಆ ಕುರಿಗಳನ್ನ ಚದರಿಸಿ. ತಂಟೆಮಾಡಿದವರನ್ನು
ಹಿಡಿದುಹಾಕಿ !”
ಮದಗಜದಂತೆ ನಡೆಯುತ್ತಿದ್ದ ಅಪರಂಪಾರನನ್ನು ಅರಮನೆಯ ಹೆಬ್ಬಾಗಿಲಿನಿಂದ
ಹೊರತಂದರು.
ಅರ್ಥವಿಲ್ಲದ ಆರ್ತ ಪದವೊಂದು ಜನಜಂಗುಳಿಯಿಂದ ಹೊರಟಿತು. ಅವರ ನಿಟ್ಟುಸಿರು
ಭೋರೆಂದಿತು.
ಅಪರಂಪಾರನನ್ನು ಕೋಟೆ ಮನೆಯ ಕಡೆಗೆ ಒಯ್ದರು. ಸ್ವಾತಂತ್ರ್ಯ ಹೋರಾಟದ
ಶಿಲ್ಪಿಯನ್ನು ತನ್ನೊಳಗೆ ಬಚ್ಚಿಟ್ಟು ಕಾರಾಗೃಹದ ಬಾಗಿಲು ಮುಚ್ಚಿಕೊಂಡಿತು...
... ಕೋಟೆಮನೆ. ನೀರು ಆಹಾರ ಇಲ್ಲದೆ ನರಳಿದ ನೆಲ.
ಅಲ್ಲಿ ಅಂಗಾತ ಮಲಗಿದ್ದ ಅಪರಂಪಾರನನ್ನು ಆ ನೆನಪು ಕಾಡಿತು.
ಯಾವ ಯುಗದ ಮಾತು ಅದು ?...ಆಗ ತಾನು ಜೀವದಾನ ಪಡೆಯದೆ ಇರುತ್ತಿದ್ದರೇ
ಒಳಿತಾಗುತ್ತಿತ್ತೇನೋ ?
ಒಳಿತಾಗುತ್ತಿತ್ತೆ ? ಆಗ ತಾನು ಹುಳುವಾಗಿ ಸಾಯುತ್ತಿದ್ದೆ.
ಈಗ ? ಸತ್ತರೂ ಸರಿಯೆ. ತಾನು ಹುಲಿ__ಹುಲಿ.

೫೯

ಅಪರಂಪಾರ ಸಂಘಟಿಸಿದ್ದ ಸ್ವಾತಂತ್ರ್ಯ ಸಂಗ್ರಾಮ ವಿಫಲವಾಯಿತು.
ಗೌಡಹಳ್ಳಿಯ ಶಿಬಿರಕ್ಕೆ ಸ್ವಾಮಿ ಬಾರದುದನ್ನು ಕಂಡು ಅಪ್ಪಯ್ಯ ಭಟರನ್ನು
ಪುಷ್ಕರಿಣಿಯ ಕಡೆಗೆ ಹಟ್ಟಿದ. ಅವರು ಕಟ್ಟುಗಳನ್ನು ಬಿಚ್ಚಿ, ಶಂಕರಪ್ಪನನ್ನು ಕೆಳಗಿಳಿಸಿ,
ಶೈತ್ಯೋಪಚಾರ ಮಾಡಿ ಶಿಬಿರಕ್ಕೆ ಕರೆತಂದರು.
ಕೆಟ್ಟ ಸುದ್ದಿ ಎಷ್ಟು ಮುಚ್ಚಿಟ್ಟರೂ ಅಂಟುಜಾಡ್ಯದಂತೆ ಹಬ್ಬಿತು. ವೀರರ ಎದೆ ಕಲ್ಲಾಯಿತು ; ಅಳ್ಳೆದೆಯವರು ಅದುರಿದರು.
ಅಪರಂಪಾರನನ್ನು ಹಿಡಿದೊಯ್ದವರು ಕುಂಪಣಿ ಸರಕಾರದ ಚಾಕರರೇ; ಹಿಂದಿನ
ರಾತ್ರೆ ತಾನು ಮಾತನಾಡಿಸಿದ ಮಂಜಣ್ಣ ಅವರಲ್ಲೊಬ್ಬ ; ಹಿಂದುಮುಂದು ನೋಡದೆ
ಸಿಂಹದ ಬಾಯಿಗೆ ಸ್ವಾಮಿಯವರನ್ನು ತಾನು ಒಡ್ಡಿದಂತಾಯಿತು ಎಂದು ಅಪ್ಪಯ್ಯ
ಪರಿತಪಿಸಿದ. ತನ್ನ ದುಃಖವನ್ನು ಹೊರಗೆ ತೋರ್ಪಡಿಸದೆ, ಮಲ್ಲಪ್ಪಗೌಡನ ಹಿರಿತನದಲ್ಲಿ
ನಾಲ್ವರು ಅಶ್ವಾರೋಹಿಗಳನ್ನು ಮಡಕೇರಿಯ ಕಡೆಗೆ ಆತ ಕಳುಹಿದ.
ಅವನೆಂದ:
“ಬಿರುಗಾಳಿಯಂತೆ ಹೋಗಿ; ಆ ಧೂರ್ತರನ್ನು ತಡೆದು ನಿಲ್ಲಿಸಿ, ಸ್ವಾಮಿಯವರನ್ನ
ಬಿಡಿಸಿಕೊಳ್ಳೋಕಾಗತದೊ ನೋಡಿ.”