ಪುಟ:ಸ್ವಾಮಿ ಅಪರಂಪಾರ.pdf/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ಸ್ವಾಮಿ ಅಪರಂಪಾರ

   ರಾಜಮ್ಮಾಜಿ ದೀರ್ಘವಾಗಿ ನಿಟ್ಟುಸಿರುಬಿಟ್ಟಳು. ಬಿಗಿದ ತುಟಿಗಳನ್ನು ಅವಳು ಎರಡು
ಮಾಡಲಿಲ್ಲ.
                      *  *  *
   ನಂಜರಾಜಪಟ್ಟಣದಲ್ಲಿ, ಸುದ್ದಿ ಮುಟ್ಟಿದ ದಿನ ಪೂಜಾವಿಧಿಗಳನ್ನು ಪಂಚಾಕ್ಷರಿ ಮರೆತ.
   ಕಳೆದ ಕೆಲ ದಿವಸಗಳಿಂದ ಶಿವಾಚಾರ್ಯರ ದೇಹಸ್ಥಿತಿ ಉಲ್ಬಣಿಸಿತು.
   ಹೇಳಲೋ ಬೇಡವೋ ಎಂದು ಬಹಳ ಹೊತು ಅನಿಶ್ಚಿತತೆಯಲ್ಲಿ ಕಳೆದು ಕಡೆಗೆ
ಪಂಚಾಕ್ಷರಿಯೆಂದ:
   "ಗುರುಗಳೇ, ಮಡಕೇರಿಯಿಂದ ಅಶುಭವಾರ್ತೆ ಬಂದಿದೆ."
   ಶಿವಾಚಾರ್ಯರು ಮೌನವಾಗಿ ಶೂನ್ಯದತ್ತ ಬಿರುನೋಟ ಬೀರಿ, ಬಳಿಕ ಮೆಲ್ಲನೆ ತುಟಿ
ತೆರೆದು, "ನಾನು ಬಲ್ಲೆ" ಅಂದರು.
   ಅದೇ ಅವರಾಡಿದ ಕೊನೆಯ ಮಾತಾಯಿತು.
                              *  *  *
   ಆ ಘಟನೆ ನಡೆದುದು ಕ್ರಿಸ್ತಶಕ ಸಾವಿರದ ಎಂಟುನೂರ ಮೂವತ್ತೇಳರಲ್ಲಿ. ಅಂದರೆ
ಶಾಲಿವಾಹನ ಶಕ ಸಾವಿರದ ಏಳನೂರ ಐವತ್ತೊಂಬತ್ತು_ಹೇವಳಂಬಿ ಸಂವತ್ಸರ.
   ಬಂಡಾಯದ ಪ್ರಮುಖರಿಗೆಲ್ಲ ಆಜೀವ ಕಾರಾಗೃಹವಾಸ ವಿಧಿಸಲ್ಪಟ್ಟಿತು. ಕೆಲವರಿಗೆ
 ನಾಲ್ಕು, ಆರು, ಹತು ವರ್ಷಗಳ ಶಿಕ್ಷೆಯಾಯಿತು. ಬೇರೆ ಕೆಲವರು ತಪ್ಪಿಸಿಕೊಂಡರು.
   ಅಪರಂಪಾರಸ್ವಾಮಿಯನ್ನು ಬೆಂಗಳೂರಿಗೆ ಒಯ್ದರು, ಎತ್ತಿನ ಬಂಡಿಯಲ್ಲಿ ರಾಜಕೈದಿ.
ಸುತ್ತಲೂ ಆಂಗ್ಲ ಕುದುರೆ ಸವಾರರು. ಅದರ ಹಿಂದೆ ಹಾಗೂ ಮುಂದೆ ಕರಿಯ
ಸಿಪಾಯರು. ಮಡಕೇರಿಯ ಜನರಿಗೆ ಸುಳಿವು ಸಿಗಬಾರದೆಂದು ಇವರ ಪಯಣ ಇರುಳಲ್ಲಿ
ಹೊರಟಿತು.
   ಪೆರಿಯಾಪಟ್ಟಣದ ಹತ್ತಿರ ಇವರು ತಂಗಿದಾಗ, ಗಾಡಿಯ ತಟಿಕೆಯ ಸಂದಿಯೊಳಗಿಂದ
ಯಾರೋ ಆಗಾಗ್ಗೆ ಇಣಿಕಿ ನೋಡುತ್ತಿದ್ದಂತೆ ಅಪರಂಪಾರಸ್ವಾಮಿಗೆ ಭಾಸವಾಯಿತು.
   ಆತ ತಟಿಕೆಯ ಬದಿಗೆ ಸರಿದು, ತೂತಿನಿಂದ ಹೊರ ನೋಡಿದ. ಎಲ್ಲರೂ ಸಮವಸ್ತ್ಯ
ಧರಿಸಿದ್ದ ಸಿಪಾಯರೇ.
   ಮತ್ತೊಮ್ಮೆ ಒಂದು ಕಣ್ಣು ತಟಿಕೆಯ ಬಳಿ ಬಂತು.
   ಸ್ವರವೊಂದು ಕೇಳಿಸಿತು:
   "ಮಲ್ಲಪ್ಪಣ್ಣನೂ ನಾನೂ ಜತೆಯಾಗೇ ಅದೇವೆ."
   ಕಣ್ಣು ದೂರ ಸರಿಯಿತು. ಅಪರಂಪಾರ ದಿಟ್ಟಿಸಿ ನೋಡಿದ, ಕುಂಪಣಿ ಸಿಪಾಯರ
ಉಡುಪೇ.
   "ಶಂಕರಪ್ಪನದಲ್ಲವೆ ಸ್ವರ?” ಎಂದುಕೊಂಡ, ಅಪರಂಪಾರಸ್ವಾಮಿ.
   ಆತ ಅಂತರ್ಮುಖಿಯಾಗಿ ಶಿವಧ್ಯಾನದಲ್ಲಿ ನಿರತನಾದ.
                              ೬೦
   ಹೇವಿಳಂಬಿ, ದಕ್ಷಿಣ ಭಾರತದಲ್ಲಿ ಬ್ರಿಟಿಷರ ಆಳ್ವಿಕೆ ಬಲಗೊಂಡುದನ್ನು ಕಂಡ ಸಂವತ್ಸರ.
   ಕೊಡಗು ಮೈಸೂರುಗಳಿಂದ ಪರಕೀಯರನ್ನು ಹೊಡೆದೋಡಿಸಲು ಅಪರಂಪಾರಸಾಮಿ