ಪುಟ:ಸ್ವಾಮಿ ಅಪರಂಪಾರ.pdf/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ೧೬೬ ಸ್ವಾಮಿ ಅಪರಂಪಾರ

ನಡೆಸಿದ ಯತ್ನ ವಿಫಲವಾಯಿತಲ್ಲ? ಕನ್ನಡ ಜಿಲ್ಲೆಯನ್ನು ಆಂಗ್ಲರ ಹಿಡಿತದಿಂದ ವಿಮುಕ್ತ
ಗೊಳಿಸಲು ಪುಟ್ಟಬಸವ ಮತ್ತು ಸಂಗಡಿಗರು ನಡೆಸಿದ ಪ್ರಯತ್ನಕ್ಕೂ ಅದೇ ಗತಿ
ಯಾಯಿತು.
  ಪುಟ್ಟಬಸವ ಕಲ್ಯಾಣಸ್ವಮಿ ಎಂಬ ಹೆಸರನ್ನು ಹೊತ್ತು, ಸಂಪಾಜೆ ಘಟ್ಟದ ಮಾರ್ಗ
ವಾಗಿ ಸುಳ್ಳಕ್ಕಿಳಿದ. ಅವನ ಸುತ್ತಲೂ ಜಾತಿ ಮತಗಳ ವ್ಯತ್ಯಾಸವಿಲ್ಲದೆ ಜನ ನೆರೆದರು.
ಶಸ್ತ್ರಾಸ್ತ್ರಗಳಿಗಿಂತಲೂ ಅದಮ್ಯ ಉತ್ಸಾಹವೇ ಆ ಪಡೆಯ ಮೂಲನಿಧಿಯಾಗಿತು.
ಬ್ರಿಟಿಷರೂ ಅವರ ಹಸ್ತಕರೂ "ಕಲ್ಯಾಣಪ್ಪನ ದಂಡು ಬಂತು" ಎಂದು ಕಕಾವಿಕ್ಕಿ
ಯಾದರು. ಬೆಳ್ಳಾರೆ, ಪುತ್ತೂರು, ಬಂಟವಾಳಗಳ ದಾರಿಯಾಗಿ ಈ ದಂಡು ಮಂಗಳೂರನ್ನು
ತಲಪಿತು. ಅದನ್ನು ವಶಪಡಿಸಿಕೊಂಡಿತು ಕೂಡಾ. ಆದರೆ ಆಂಗ್ಲರು ತಲಚೇರಿಯಿಂದ
ಸಮುದ್ರಮಾರ್ಗವಾಗಿ ಸೇನಾ ತುಕ್ಕಡಿಯನ್ನು ತಂದರು. ಇತ್ತ ಲೀಹಾರ್ಡಿಯಿಂದ ಅವ
ಮಾನಿತನಾದ ಬೋಪಣ್ಣ, ಬಂಡಾಯಗಾರರ ಹುಟ್ಟಡಗಿಸಿಯೇ ಮಡಕೇರಿಗೆ ಮರಳುವೆ
ಎಂದು ಶಪಥಮಾಡಿ, ಒಂದು ತುಕ್ಕಡಿಯೊಡನೆ ಘಟ್ಟವಿಳಿದು ಬಂದ. ಅವನ ಪಾಲಿಗೆ
ಅದು ಅಗ್ನಿಪರೀಕ್ಷೆ, ಅದರಲ್ಲಿ ಜಯಸಿದಾಗಲೇ ಅವನು ನಿಷ್ಕಳಂಕನೆಂಬುದು ಲೋಕಶ್ರುತ
ವಾಗಬೇಕು! ಹೀಗೆ, ಎರಡು ಕಡೆಗಳಿಂದಲೂ ಕಲ್ಯಾಣಸ್ವಾಮಿಯ ದಂಡನ್ನು ವೈರಿಪಡೆಗಳು
ಘಾಸಿಗೊಳಿಸಿದುವು. ಅಡಕೊತ್ತಿ ಒತ್ತಿತು. ಅಡಕೆ ಹೋಳು ಹೋಳಾಯಿತು, ಚೂರು
ಚೂರಾಯಿತು.
   ಕಲ್ಯಾಣಸ್ವಾಮಿಯನ್ನೂ ಅವನ ಜತೆಗಾರನಾಗಿದ್ದ ಲಕ್ಷ್ಮಪ್ಪ ಬಂಗರಾಜನನ್ನೂ
ಮಂಗಳೂರಿನ ಬಳಿ ಗಲ್ಲಿಗೇರಿಸಿದರು. ಬೇರೆಯೂ ಹದಿನಾಲ್ಕು ಜನರಿಗೆ ಗಲ್ಲಾಯಿತು.
ಇನ್ನೂ ಅನೇಕರಿಗೆ ಕಾರಾಗೃಹವಾಸ ಲಭಿಸಿತು. ಚೆಟ್ಟಿಯನ್ನೂ ಕರ್ತುವನ್ನೂ ಸಾಗರದಾಚೆ
ಸಿಂಗಾಪುರಕ್ಕೆ ಒಯ್ದರು.
   ಆಂಗ್ಲರ ಒಟ್ಟು ವಿಜಯಕ್ಕೆ ಮುಖ್ಯ ಕಾರಣರು : ಪೊನ್ನಪ್ಪ ಮತು ಬೋಪು.
ಅವರು ಬಗೆಬಗೆಯಾಗಿ ಕಂಪೆನಿ ಸರಕಾರದಿಂದ ಸನ್ಮಾನಿತರಾದರು. ಪೊನ್ನಪ್ಪನ ಗೌರವಾರ್ಥ
ಕೊಡಗಿನ ಒಂದೂರು ಪೊನ್ನಂಪೇಟೆಯಾಯಿತು. ಹಲವರಿಗೆ ಜಹಗೀರುಗಳು ದೊರೆತುವು.
  ಲೀಹಾರ್ಡಿ ದಿವಾನದ್ದಯರನ್ನು ಕರೆಸಿ ನುಡಿದ :
  "ಗವರ್ನರ್ ಸಾಹೇಬರು ನಿಮ್ಮಿಬ್ಬರನ್ನೂ ತಾರೀಪು ಮಾಡಿ ಬರೆದಿದ್ದಾರೆ. ಯುದ್ದ
ದಲ್ಲಿ ನಮ್ಮ ಪರವಾಗಿ ಸತ್ತವರ ಕುಟುಂಬಗಳಿಗೆ ಮೂರು ತಲೆಗಳ ಮಾಸಾಶನ ಕೊಡ 
ಬೇಕು ಅಂತ ಆಜ್ಞಾಪಿಸಿದ್ದಾರೆ."
  ಪೊನ್ನಪ್ಪನೆಂದ:
  "ಘನತೆವೆತ್ತ ಗವರ್ನರ್ ಸಾಹೇಬರು ದಯಾಳುಗಳು!"
  "ಅಷ್ಟೇ ಅಲ್ಲ, ಕಾಟಕಾಯಿ ಅಡಗಿಸೋದರಲ್ಲಿ ಭಾಗಿಯಾದವರಿಗೆ ಸರಪಣಿ ಸಮೇತ
ಚಿನ್ನದ ಪದಕ ಕೊಡಬೇಕಂತ ಮಾಡಿದೇವೆ."
  "ಕೊಡಗಿನ ಪ್ರಜೆಗಳಿಗೆ ಇದರಿಂದ ಹರ್ಷವಾಗತದೆ."
  "ಆ ಪದಕದ ಒಂದು ಮೈಯಲ್ಲಿ 'For distinguished conduct  and loyalty to the British Government.Coorge,April 1837' ಅಂತ ಬರೆಸೋಣ, ಇನ್ನೊಂದು ಮೈಯಲ್ಲಿ ಅದರ ಕ್ಯಾನರೀಸ್ ತುರ್ಜುಮೆ ಹಾಕಿಸೋಣ."