ವಿಷಯಕ್ಕೆ ಹೋಗು

ಪುಟ:ಸ್ವಾಮಿ ಅಪರಂಪಾರ.pdf/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೮೨
ಸ್ವಾಮಿ ಅಪರಂಪಾರ


ಗಳಿಗೂ ಪಾದಗಳಿಗೂ ಮೊಳೆಗಳು. ಸೋರುತ್ತಿದ್ದ ರಕ್ತ, ಅಪರಂಪಾರ ಆ ಘಳಿಗೆಯಲ್ಲಿ ತೋರಿದ ನಿಶ್ಚಲತೆಯ ರಹಸ್ಯವೇನು ? ಆ ಅಂತಃಶಕ್ತಿಯ ನೆಲೆ ಯಾವುದು ? ಶ್ರದ್ದೆಯೆ? ಧರ್ಮವೆ ? ದೈವಿಕತೆಯ ಮಟ್ಟವನ್ನು ತಲಪಿದ ಅತಿಮಾನವತ್ವವೆ ?
ರಾಜಕಾರಣಿಗಳಾದ ಸ್ವದೇಶ ಬಾಂಧವರೊಡನೆ ಚರ್ಚಿಸುವ ವಿಷಯವಲ್ಲ ಅದು. ಆದರೂ ಅಂತರಂಗದಲ್ಲಿ, ನಿತ್ಯದ ಚಿಂತನೆಯಲ್ಲಿ ಆ ವಿಷಯ ಅವನನ್ನು ಕಾಡಿತು.
...ಅಪರಂಪಾರ ದೇವರನ್ನು ಕೇಳುತ್ತಿದ್ದ :
“ನಾಳೆ ಬಪ್ಪುದು ನಮಗಿಂದೇ ಬರಲಿ. ಇಂದು ಬಪ್ಪುದು ನಮಗೀಗಲೇ ಬರಲಿ.”
ಆವರೆಗಿನ ಬದುಕನ್ನು ಅವಲೋಕಿಸುತ್ತ ಆತ ಅಂದುಕೊಳ್ಳುತ್ತಿದ್ದ :
“ಕಿಚ್ಚಿಲ್ಲದ ಬೇಗೆಯಲಿ ಬೆಂದೆ, ಏರಿಲ್ಲದ ಗಾಯದಲಿ ನೊಂದೆ...ಹಿಡಿಯಿಲ್ಲದ ಶಸ್ತ್ರ, ಕೀಲಿಲ್ಲದ ಕತ್ತರಿ, ಉಭಯವನೊಡಗೂಡದ ಚಿಮ್ಮಣ, ರೂಹಿಲ್ಲದ ಚಾಣ, ಹಲ್ಲಿಲ್ಲದ ಹಣಿಗೆ ಹಿಡಿದು ಬಂದೆ...ಹೇಡಿ ಬಿರುದ ಕಟ್ಟಿದಂತಾಯಿತನ್ನ ವೇಷ...ಹಗರಣ ನಗೆಗೆಡೆ ಯಾಯಿತ್ತು.”
ತನ್ನನ್ನು ತಾನೇ ಸಂತೈಸುತ್ತಿದ್ದ :
“ಮನುಜ, ನಿನಗಾದ ನೋವಿಂಗೆ ಚಿಂತಿಸುವರೆ ?”

****

“ಸಿಪಾಯಿ ಶಂಭು'ವಾಗಿದ್ದ ಶಂಕರಪ್ಪ, ಆ ರಾತ್ರೆ ಆಂಗ್ಲರ ಕೈಗೆ ಬೀಳಲಿಲ್ಲ. ಅನಂತರವೂ ಅವರಿಗೆ ಸಿಗಲಿಲ್ಲ. ಏನು ನಡೆಯಿತೆಂಬುದರ ಪೂರ್ಣ ವಿವರ ಆತನಿಗೆ ತಿಳಿಯಲು ಒಂದೆರಡು ದಿನ ಬೇಕಾಯಿತು. ತಿಳಿದಾಗ ಅವನು, “ಅಯ್ಯೋ ಶಿವನೇ ! ಹೀಗೂ ಆಯಿತೆ ?” ಎಂದು ಗೋಳಾಡಿದ.
ಮಲ್ಲಪ್ಪ ಇನ್ನಿಲ್ಲ ; ಸ್ವಾಮಿಯ ಕಣ್ಣುಗಳನ್ನು ಕಿತ್ತರು ನಡೆದು ಹೋದ ಆ ಘಟನೆ ಯನ್ನು ನಂಬಲು ಅವನಿಗೆ ಬಹಳ ಹೊತ್ತು ಹಿಡಿಯಿತು.
ಕರಿಯ ಸಿಪಾಯರು ಮಹದೇವ'ನ ಶವವನ್ನು ಮಣ್ಣು ಮಾಡಿದ್ದ ತಾಣವನ್ನು ಶಂಕರಪ್ಪ ಗೊತ್ತುಹಚ್ಚಿದ. ಒಂದು ಇರುಳೆಲ್ಲ ಅಲ್ಲಿದ್ದು ಕಣ್ಣೀರಿನಿಂದ ನೆಲ ತೋಯಿಸಿದ.
ಶಂಕರಪ್ಪ ಇನ್ನು ತುಕ್ಕಡಿಯಲ್ಲಿ ಸಿಪಾಯಿಯಾಗಿ ಇರುವಂತಿಲ್ಲ. ಸೆರೆಮನೆಯೊಳಗೆ ಚಾಕರನಾಗಿ ಇದ್ದರೆ ಒಂದಲ್ಲ ಒಂದು ರೀತಿಯಲ್ಲಿ ಅಪರಂಪಾರಸ್ವಾಮಿಯ ಸೇವೆ ಮಾಡ ಬಹುದು. ಆದರೆ, ತನ್ನನ್ನು ಹಿಡಿಯಬೇಕೆಂದು ಆಜ್ಞೆಯಾಗಿರುವಾಗ, ಅಂತಹ ಹುಚ್ಚು ಸಾಹಸ ತರವಲ್ಲ. ಮುಂದೇನು ಮಾಡಬೇಕು ತಾನು ?
ಮಡಕೇರಿಯಲ್ಲಿ ನೆಲೆಸೋಣವೆಂದರೆ ಅದೂ ಗಂಡಾಂತರದ ಯೋಚನೆಯೇ, ಆತ ಅಪರಂಪಾರನ ಹಿಂಬಾಲಕನಾದುದನ್ನು ಅರಿತ ಕೆಲವರಿದ್ದರು. ಅವರಿಂದ ತನಗೆ ತೊಂದರೆ ಯಾಗಲೂಬಹುದು.
ಮಕ್ಕಳು ದೊಡ್ಡವರಾಗಿದ್ದರು. ಅವರನ್ನು ಸಂಪಾದನೆಯ ದಾರಿಗೆ ಹಚ್ಚಬೇಕು...
ಸಂಸಾರವನ್ನು ಬೆಂಗಳೂರಿಗೆ ಕರೆತಂದರೆ ? ಇಲ್ಲಿಯೇ ತಾನು ಸ್ಥಿರವಾಗಿ ನೆಲಸಿದರೆ ? ನಾಳೆ ಪರಿಸ್ಥಿತಿ ಹೇಗೆ ರೂಪುಗೊಳ್ಳುವುದೋ ಯಾರು ಬಲ್ಲ ? ತಾನು ಇಲ್ಲಿಯೇ ಇರುವುದ ರಿಂದ ಸ್ವಾಮಿಯವರಿಗೆ ತನ್ನಿಂದ ಯಾವುದಾದರೊಂದು ಬಗೆಯ ಸಹಾಯವಾಗಲೂ ಬಹುದು...