ಪುಟ:ಸ್ವಾಮಿ ಅಪರಂಪಾರ.pdf/೨೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



            ಸಾಮಿ ಅಪರಂಪಾರ   ೨೦೫

ರಾಜಮ್ಮಾಜಿ ಎದೆಯ ಎಡಭಾಗವನ್ನು ಎರಡೂ ಕೈಗಳಿಂದ ಒತ್ತಿಕೊಂಡೇ, “ನೋವು! ನೋವು!" ಎನ್ನುತಾ ಹೊರಳಾಡಿದಳು.

ಒಂದರ್ಧ ಘಳಿಗೆಯ ಯಾತನೆ. ನೋಡುತ್ತಿದ್ದ ಮೂವರೂ ಅಸಹಾಯರಾಗಿ ನಿಂತರು. ರಾಜಮ್ಮಾಜಿ ಬೊಗಸೆ ಬೊಗಸೆಯಾಗಿ ರಕ್ತ ಕಾರಿದಳು. ಮುಂದೆ ಸ್ವಲ್ಪ ಹೊತ್ತಿನಲ್ಲಿಯೇ ಎಲ್ಲವೂ ಶಾಂತವಾಯಿತು.

...ಅರಮನೆ ಎಂಬ ಹೆಸರಿದ್ದ ಅಪ್ಪಂಗಳದ ಆ ಮನೆಯ ವಿಸ್ತಾರವಾದ ಹಿತ್ತಿಲ ಒಂದು ಮೂಲೆಯಲ್ಲಿ. ಕಂದೀಲ, ಬೆಳಕಿನಲ್ಲಿ, ನೆಲವನ್ನು ವೃದ್ಧ ಆಳವಾಗಿ ಅಗೆದ.

ಚನ್ನಬಸಪ್ಪನೂ ದೇವಮ್ಮಾಜಿಯೂ ಶವವನ್ನು ವಿಾಯಿಸಿ ಅಲಂಕರಿಸಿದರು. ಅವರೇ ಅದನ್ನು ಹೊತ್ತು ಭೂಮಿತಾಯಿಯ ಮಡಿಲಿಗೆ ಅರ್ಪಿಸಿದರು.

ಹಿಂತಿರುಗಿದ ಬಳಿಕ ದೇವಮ್ಮಾಜಿ ಆಳಿಗೆ ಅಂದಳು : "ನೀನೇ ಬಂದು ಈ ನೆಲ ಎಲ್ಲ ಸ್ವಚ್ಛ ಮಾದಪ್ಪ,ಮಡಿಯೊ ? ಪೊಲೆಯೊ? ? —ಬೆಂಕಿ ಹಾಕ. ಬಾ ಒಳಕ್ಕೆ."

               *      *      *

ಬೆಂಗಳೂರಲ್ಲಿ ಶಂಕರಪ್ಪನ ಜೀವನ ಹೆಚ್ಚು ಹೆಚ್ಚು ದುಸ್ತರವಾಗುತ್ತ ಸಾಗಿತ್ತು. ಮಕ್ಕಳು ಬೇರೆ ಬೇರೆಯಾಗಿ ತಮ್ಮ ಸಂಸಾರಗಳನ್ನು ಸಾಕಿಕೊಂಡಿರುತ್ತಿದ್ದರು. ವೃದ್ಧ ದಂಪತಿ ತಮ್ಮ ಪಾಡಿಗೆ ತಾವು ಇರಬೇಕಾಗಿ ಬಂತು. ಕಡಲೆಪುರಿ ವ್ಯಾಪಾರದಿಂದ ಬರುವುದು ಒಪ್ಪೊತ್ತಿಗೂ ಸಾಲುತ್ತಿರಲಿಲ್ಲ. ಕೊಡಗಿನಲ್ಲಿ ಕಾಫಿ ತೋಟಗಳು ಆರಂಭವಾಗಿರುವುದೂ ಎಷ್ಟು ಜನರಿಗೆ ಬೇಕಾದರೂ ಕೆಲಸ ದೊರೆಯುತ್ತಿರುವುದೂ ಎಲ್ಲರ ಬಾಯಲ್ಲೂ ಕೇಳಿಬರುತ್ತಿದ್ದ ಸುದ್ದಿಯಾಗಿತ್ತು. ತಾನೂ ಒಮ್ಮೆ ನೋಡಿ ಬರಬೇಕೆಂಬ ಆಸೆ ಶಂಕರಪ್ಪನಿಗೆ. ಊರು ಬಿಟ್ಟು ಮೂವತ್ತು ವರ್ಷಗಳಿಗೆ ಮೇಲಾಯಿತಲ್ಲ? ಇನ್ನು ಜನರಿಗೆ ತನ್ನ ಗುರುತು ಸಿಗುತ್ತದೆನ್ನುವುದು ಸುಳ್ಳು.

ಎರಡೇ ವಾರದೊಳಗೆ ಬರುತೇನೆ. ನೀನು ಹಿರೇ ಮಗನ ಮನೇಲಿರು. ಸೊಸೆ ಬೇಡ ಅಂದರೆ ಕಿರೇ ಮಗನಲ್ಲಿಗೆ ಹೋಗು" ಎಂದು ಹೆಂಡತಿಯನ್ನು ಒಪ್ಪಿಸಿ, ಶಂಕರಪ್ಪ ಕೊಡಗಿಗೆ ಹೊರಟ.

ಬಳಸು ದಾರಿಯಾದರೇನಂತೆ ? ಅಪ್ಪಂಗಳಕ್ಕೆ ಹೋಗಿಯೇ ಆತ ಮಡಕೇರಿ ಸೇರಬೇಕು. ಅವನ ಹರಕು ಕೋಟಿನ ಒಳಜೇಬಿನಲ್ಲೊಂದು ಹೊರೆಯಿತ್ತು. ಸಾಧ್ಯವಾದರೆ ಅಪ್ಪಂಗಳದಲ್ಲಿ ಅದನ್ನು ಇಳಿಸಬೇಕೆಂಬ ಅಪೇಕ್ಷೆ ಅವನದು.

ಪಾಳುಬಿದ್ದಿದ್ದ ಅಪ್ಪಂಗಳದ ಅರಮನೆಯ ಮುಂದೆ ಚಪ್ಪಡಿ ಕಲ್ಲಿನ ಮೇಲೆ ವೃದ್ಧ ಆಳು ಕುಳಿತಿದ್ದ. ಶಂಕರಪ್ಪ ಕೇಳಿದ: “ಎಲ್ಲರೂ ಚೆಂದಾನಾ ?" ವೃದ್ಧ ಮಾತನಾಡಲಿಲ್ಲ. “ರಾಜಮ್ಮಾಜಿಯೋರು ಒಳಗದಾರಾ?" “ಏನು ಜಂಬ್ರ ?" "ಒಸಿ ಮಾತಾಡಬೇಕಿತ್ತು."