ಪುಟ:ಸ್ವಾಮಿ ಅಪರಂಪಾರ.pdf/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸ್ವಾಮಿ ಆಪರ೦ಪಾರ

೨೫

ನಾಡಪ್ರಮುಖರಲ್ಲಿ ಅಸಮಾಧಾನಕ್ಕೆ ಕಾರಣವಾಗಬೇಕಾಗಿದ್ದ ಅಂಶವೂ–ವೀರಪ್ಪ,
ನಂಜುಂಡಪ್ಪರ ಸಾವು–ಮಾತಿನ ಪ್ರವಾಹದಲ್ಲಿ ಹೇಗೆ ಮರೆಯಾಗಿತ್ತು !ಅಂಗ್ರೇಜಿಯವರ
ವಿಷಯದಲ್ಲಿ ಅರಸ ಹಾಗೆ ಶಂಕೆ ವ್ಯಕ್ತಪಡಿಸಬಾರದಾಗಿತ್ತು...ಯೌವನಕ್ಕೂ ವಿವೇಕಕ್ಕೂ
ನಂಟಲ್ಲ–ಅನ್ನೋಣ...ಆದರೂ ಈ ದೊರೆಮಗ ತೋರಿಸಿರುವ ಕೆಚ್ಚು ಸಾಧಾರಣ
ವಾದ್ದಲ್ಲ...
ಕರತಾಡನ ಮುಗಿಯುತ್ತ ಬಂದಿತ್ತು. ತನ್ನ ಕರ್ತವ್ಯದ ಬಗೆಗೆ ಜಾಗೃತನಾದ
ಬೋಪಣ್ಣ ದಿವಾನ ಲಕ್ಷ್ಮೀನಾರಾಯಣನೊಡನೆ ಪಿಸು ನುಡಿದ:
“ತಕ್ಕರು, ಕಾರ್ಯಕಾರರೆಲ್ಲ ಎರಡು ದಿನ ಇದ್ದು ವೀಳ್ಯ ತಗೊಂಡು ಹೋಗಲಿ ಅಂತ
ಅಪ್ಪಣೆ ಕೊಡಿಸೋಣವೊ? ದರಬಾರು ಮುಗಿದಂತಾಯ್ತಲ್ಲ, ಬಿಸಿಲೇರಿದೆ."
"ಹಾಗೇ ಮಾಡಿ" ಎಂದ ಲಕ್ಷ್ಮೀನಾರಾಯಣ, ತನ್ನೆದುರಲ್ಲೇ ಬೆಳೆದು ಅರಸನಾದ
ಚಿಕವೀರರಾಜನನ್ನು ಅಚ್ಚರಿ-ಮೆಚ್ಚುಗೆಗಳ ಮಿಶ್ರನೋಟದಿಂದ ನೋಡುತ್ತ.
ದಿವಾನ ಬೋಪಣ್ಣ ಎದ್ದು ಸಿಂಹಾಸನದ ಕಡೆಗೆ ನಡೆದ, ಅರಸನಿಗೆ ಸಲಹೆ ನೀಡಲು.
ಆದರೆ, ಆತ ತೀರ ಹತ್ತಿರಕ್ಕೆ ಬರುವುದಕ್ಕೆ ಮುನ್ನ ಚಿಕವೀರರಾಜನೇ ನುಡಿದ:
"ಇನ್ನು ಏಳಬಹುದು, ಅಲ್ಲವೆ? ಬಂದವರು ಎರಡು ದಿನ ರಾಜಧಾನಿಯಲ್ಲಿರಲಿ.
ವೀಳ್ಯ-ಉಡುಗೊರೆಗಳನ್ನು ಸ್ವೀಕರಿಸಿ ತಮ್ಮ ಊರುಗಳಿಗೆ ಹೋಗುವರಂತೆ."
ರಾಜಾಜ್ಞೆ ನ್ಯಾಯೋಚಿತವಾದುದೇ ಆದರೂ ಬೋಪಣ್ಣನ ಪಾಲಿಗೆ ಅನಿರೀಕ್ಷಿತ
ವಾಗಿತ್ತು.ಆತ ತಡೆದು ನಿಂತು, ಚುಟುಕಾಗಿ, “ಅಪ್ಪಣೆ” ಎಂದ.
ರಾಜನ ಆದೇಶವನ್ನು ಬೋಪಣ್ಣ ಸಭೆಗೆ ತಿಳಿಸಿದಾಗ, ಮತ್ತೊಮ್ಮೆ ಹರ್ಷೋದ್ಗಾರ
ಜಯಕಾರಗಳು ಹುಚ್ಚೆದ್ದು ಕುಣಿದುವು.
ಅರಸ ಎದ್ದು ನಿಂತ. ಕೊಂಬು ತಮಟೆಗಳು ಸದ್ದುಮಾಡಿದುವು. ಸಭೆಯೂ ಎದ್ದು
ನಿಂತಿತು. ಜೋಡಿಸಲ್ಪಟ್ಟ ಕೈಗಳನ್ನೂ ಬಾಗಿದ ತಲೆಗಳನ್ನೂ ಚಿಕವೀರರಾಜ ನೋಡಿ,
ಮಂದಸ್ಮಿತನಾದ. ಪ್ರತಿವಂದನೆಯೆಂದು ತಲೆಯನ್ನು ತುಸು ಆಡಿಸಿ, ಚಾಮರಗಳನ್ನೂ
ರಾಜದಂಡವನ್ನೂ ಹಿಂಬಾಲಿಸುತ್ತ ಸಭಾಭವನದಿಂದ ಅರಮನೆಯ ಒಳಭಾಗಕ್ಕೆ ಆತ
ನಿರ್ಗಮಿಸಿದ.
ಮನೆಗೆ ತೆರಳಲು ಅಪ್ಪಣೆ ಕೇಳಲೆಂದು ದಿವಾನದ್ವಯರು ರಾಜನ ಹಿಂದೆ ನಡೆದರು.
ಅನುಮತಿ ಪಡೆದು ಬಂದು, ಪಲ್ಲಕಿಗಳನ್ನೇರಲೆಂದು ಹೊರಗೆ ಸಾಗಿದಾಗ ಬೋಪಣ್ಣ
ತನ್ನ ಸಹೋದ್ಯೋಗಿಯೊಡನೆ ಅಂದ:
“ಈ ಅರಸು ಪಂಜರದ ಗಿಣಿಯಲ್ಲ, ಮಾತು ಕಲಿಸಿಕೊಡಬೇಕಾದ ಅಗತ್ಯ ಕಾಣೆ!”
ಲಕ್ಷ್ಮೀನಾರಾಯಣನೆಂದ:
"ಗಿಣಿ ಅಂದಿರಾ? ಅಲ್ಲ,ಗಿಡುಗ. ಆಕಾಶದಲ್ಲಿ ಸ್ವಚ್ಛಂದವಾಗಿ ಹಾರುವ ಪಕ್ಷಿರಾಜ.”

ಆ ಸಂಜೆ ಅರಮನೆಗೆ ಬರಬೇಕೆಂದು ಶಂಕರಪ್ಪನಿಗೆ ಕರೆಬಂದಿತ್ತು.
ಹೊಸಳ್ಳಿಯಿಂದ ಹೊರಟ ಆತ ಮಡಕೇರಿಯನ್ನು ತಲಪಿದ್ದು ಸೂರ್ಯನುದಿಸಿ ಎರಡು
ಘಳಿಗೆಯಾದಾಗ, ಊರನ್ನು ಬಳಸಿಕೊಂಡು ನಿರ್ಜನ ದಾರಿಯಲ್ಲಿ ಅವನು ಮನೆ ಸೇರಿದ್ದ.