ಪುಟ:ಸ್ವಾಮಿ ಅಪರಂಪಾರ.pdf/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



೨೬

ಸ್ವಾಮಿ ಅಪರಂಪಾರ

ಗಂಡ ರಾತ್ರೆ ಎದ್ದು ಹೋದ ಬಳಿಕ ಶರಣವ್ವ ಬಹಳ ಹೊತ್ತು ಎಚ್ಚರವಾಗಿಯೇ
ಇದ್ದಳು.ಮಲಗಿದ್ದ ಮಕ್ಕಳ ಬಳಿ ಆಕೆ ಗೋಡೆಗೊರಗಿ ಕುಳಿತಳು. ಅಲ್ಲಿಯೇ ತೂಕಡಿಕೆ
ಬಂತು. ಒಮ್ಮೆ ಬಾಗಿಲು ತಟ್ಟಿದ ಸದ್ದು ಕೇಳಿಸಿದಂತಾಗಿ ಗಕ್ಕನೆ ಎದ್ದಳು. ಗವಾಕ್ಷಿಯಿಂದ
ಹೊರನೋಡಿದಳು.ಯಾರೂ ಇರಲಿಲ್ಲ.'ಇಲ್ಲ, ನನಗೆ ಭ್ರಮೆ. ಇವರು ಬರುವ ಸುಳಿ
ವಿಲ್ಲ.ಬೆಳಗಾಗತದೋ ಏನೋ.ಮಲಕೊಳ್ಳೋದು ವಾಸಿ' ಎಂದುಕೊಂಡು, ಮಕ್ಕಳ
ಮಗ್ಗು ಲಲ್ಲಿ ಪವಡಿಸಿದಳು.
ರಾತ್ರೆ ನಿದ್ರಾಭಂಗವಾಗಿದ್ದರೂ ಬೆಳಿಗ್ಗೆ ಎಂದಿನಂತೆ ಬೇಗನೆ ಅವಳಿಗೆ ಎಚ್ಚರವಾಯಿತು.
ರಾಜಕಾರ್ಯದಮೇಲೆ ಹೋದ ಗಂಡ ಬಳಲಿ ಬರುತ್ತಾನೆ: ಸ್ನಾನಕ್ಕಿರಲಿ-ಎಂದು
ಬಿಸಿನೀರು ಕಾಯಿಸಿದಳು.ಅಕ್ಕಿಯ ಹಿಟ್ಟು ಕಲಸಿ ರೊಟ್ಟಿ ತಟ್ಟಿದಳು.
ಊಹೂಂ.ಬೆಳಗಾದರೂ ಕೈಹಿಡಿದವನ ಸುಳಿವಿಲ್ಲ.ಮಕ್ಕಳೆದ್ದುವು.ಹಿರಿಯವನು
ಕೇಳಿದ:
“ಅಪ್ಪಾವರೆಲ್ಲಿ?"
“ಈಗ ಬರ್ತಾರೆ. ನೀವೆಲ್ಲಾ ಮುಖ ತೊಳಕೊಳ್ಳಿ" ಎಂದಳು ತಾಯಿ.
ಸೂರ್ಯನ ಕಿರಣಗಳು ಮಡಕೇರಿಯ ಸಂದಿಗೊಂದಿಗಳನ್ನು ಹೊಕ್ಕಾಗ ಶರಣವ್ವನ
ಹೃದಯ ಡವಡವನೆ ಹೊಡೆದುಕೊಳ್ಳತೊಡಗಿತು.
ಅಷ್ಟೇ ತೀವ್ರವಾಗಿತು, ಮತ್ತೆ ಸ್ಪಲ್ಪ ಹೊತ್ತಿನಲ್ಲೇ ಗಂಡ ಬಂದಾಗ ಆದ
ಆನಂದಾನುಭವ.
ಕುದುರೆಯನ್ನು ಮನೆಯ ಮಾಡದ ಮರೆಯಲ್ಲಿ ಕಟ್ಟುತ್ತ, ಶಂಕರಪ್ಪನೆಂದ:
"ಇವನಿಗೆ ತಿನಿಸು ನೀರು ಕೊಡು."
ಮೊದಲ ಆರೈಕೆ ಬಾಳ್ವೆಯ ಜತೆಗಾರನಾದ ಕುದುರೆಗೆ.
ಗಂಡ ಮೈಗೆ ನೀರೆರೆದುಕೊಳ್ಳುತ್ತಿದ್ದಾಗ ಶರಣವ್ವ ಕೇಳಿದಳು:
"ದೂರ ಹೋಗಿದ್ರಾ ?”
"ಹೂಂ.”
"ಭಾರೀ ಜಂಬ್ರನಾ ?"
"ಹೂಂ."
ಇಂಥ ಉತ್ತರವೆಂದರೆ, ವಿವರವಾಗಿ ಮಾತನಾಡಲು ಗಂಡನಿಗೆ ಮನಸ್ಸಿಲ್ಲ, ಅದು
ರಹಸ್ಯದ ರಾಜಕಾರ್ಯ,ಎಂದರ್ಥ.ಆಗ ಒತ್ತಾಯಪಡಿಸಿ ಕೇಳುವವಳೂ ಅವಳಲ್ಲ.
ಆದರೂ ತನ್ನ ಮನಸ್ಸಮಾಧಾನಕ್ಕಾಗಿ ಒಂದು ಉತ್ತರದ ಅಗತ್ಯ ಆಕೆಗಿತ್ತು.
"ಏನಾದರೂ ಅಪಾಯವಿತ್ತಾ?"
"ಅಂಥದೇನಿರ್ಲಿಲ್ಲ" ಎಂದ ಶಂಕರಪ್ಪ.
ಹೆಂಡತಿಯನ್ನು ಆತ ಕೇಳಬೇಕಾಗಿದ್ದ ಒಂದು ಪ್ರಶ್ನೆಯೂ ಇದ್ದಿತು.
"ನನ್ನನ್ನು ಕೇಳ್ಕೊಂಡು ಯಾರಾದರೂ ಬಂದಿದ್ದರಾ?"
"ಇಲ್ಲ"ಎಂದಳು ಶರಣವ್ವ, ಬಾಳೆ ಎಲೆಯ ಮೇಲೆ ರೊಟ್ಟಿಗಳನ್ನು ಒಟ್ಟುತಾ.
ಉಪಾಹಾರ ಮುಗಿಸಿದ ಶಂಕರಪ್ಪನಿಗೆ ನಿದ್ದೆಹೋಗುವ ಮನಸ್ಸಾಯಿತು.