ಪುಟ:ಸ್ವಾಮಿ ಅಪರಂಪಾರ.pdf/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸ್ವಾಮಿ ಅಪರಂಪಾರ

೨೭

“ಇವತ್ತು ದರಬಾರು" ಎಂದು ಹೆಂಡತಿ ನೆನಪು ಮಾಡಿಕೊಡದೇ ಇದ್ದಿದ್ದರೆ ಆತ
ನಿದ್ರಿಸಿಯೂ ಬಿಡುತ್ತಿದ್ದ.
ಇಂಥದನ್ನೂ ತಾನು ಮರೆಯೋದು ಅಂದರೆ? ಶಂಕರಪ್ಪನಿಗೆ ಆಶ್ಚರ್ಯ. ರಾತ್ರೆಯ
ಘಟನೆಗಳು ಅಸಮಾನ್ಯವಾಗಿದ್ದುದರಿಂದಲೇ ತಾನು ಹೀಗೆ ಮಂಕಾಗಿದ್ದೇನೆ–ಎಂದು ಕೊಂಡ.
ಅವನ ಮಕ್ಕಳಾಗಲೇ ರಾಜರು ಕೊಂದು ತಂದಿದ್ದ ಹೆಬ್ಬುಲಿಗಳನ್ನು ಹತ್ತಿರದಿಂದ
ನೋಡಲು ಹೋಗಿದ್ದರು.
ಉಡುಪು ಧರಿಸಿ ಶಂಕರಪ್ಪನೂ ಒಳಕೋಟೆಯ ಕಡೆಗೆ ನಡೆದ.
ಅರಮನೆಯ ಸಂಭ್ರಮ ಅವನ ಮೇಲೆ ಜಾಲ ಬೀಸಿತು.ತನಗಾಗಿದ್ದ ದಣಿವು, ತಾನು
ಮಾಡಿದ್ದ ಕಾರ್ಯ, ಎರಡೂ ಶಂಕರಪ್ಪನ ನೆನಪಿನಿಂದ ಮರೆಯಾದುವು. ಸಹಸ್ರ ಜನರಲ್ಲಿ
ಒಬ್ಬನಾಗಿ ಉತ್ಸಾಹದಿಂದ ಆತ ಅತ್ತಿತ್ತ ಓಡಾಡಿದ.
ಹಿಂದೆ ಎಳೆಯನಾಗಿದ್ದಾಗ ಶಂಕರಪ್ಪ ತನ್ನ ತಂದೆಯ ಮಗ್ಗುಲಲ್ಲಿ ನಿಂತು ಲಿಂಗರಾಜರ
ಪಟ್ಟಾಭಿಷೇಕವನ್ನು ಕಂಡಿದ್ದ. ಮುಂದೆ ಕೆಲ ವರ್ಷಗಳಲ್ಲೇ ತಾನೂ ಚಾವಡಿಕಾರನಾಗಿ
ರಾಜಸಭೆಗಳಲ್ಲಿ ಓಡಾಡಿದ್ದ.ಚಿಕವೀರರಾಜರ ಪಟ್ಟಾಭಿಷೇಕದ ಕಾಲಕ್ಕೆ ಆರೇಳು ವರ್ಷಗಳ
ತನ್ನ ಹಿರಿಯ ಹೈದನೊಡನೆ ಮಹಾದ್ವಾರದ ಬಳಿ ಪಡಿವಳನಾಗಿ ದುಡಿದಿದ್ದ.
ಅಂತಹ ಸಮಾರಂಭಗಳೆಂದರೆ ಶಂಕರಪ್ಪನಿಗೆ ಎಲ್ಲಿಲ್ಲದ ಉತ್ಸಾಹ.ಜನಸಾಗರದಲ್ಲಿ
ಆತನೊಂದು ಅಲೆ. ಇತರರೊಡನೆ ಒಂದಾಗಿ ಕೈತಟ್ಟುವ: ಜಯಕಾರಗಳನ್ನು ಮಾಡುವ.
ಜನಜಂಗುಳಿಯ ಅಂಟುಜಾಡ್ಯಕ್ಕೆ ಅವನು ಸುಲಭ ಬಲಿ.ಸಾರಾಯಿಯ ಅಮಲಿಗಿಂತ
ತೀವ್ರತರವಾಗಿರುತ್ತಿತ್ತು. ಅಂತಹ ಘಳಿಗೆಯಲ್ಲಿ ಆತ ಅನುಭವಿಸುತ್ತಿದ್ದ ಉತ್ಕಟಭಾವ.
ಕೊಂಬು ತಮಟೆಗಳ ಸಪ್ಪಳಕ್ಕೆ ಅವನ ಮೈ ಯಾವಾಗಲೂ ಪುಲಕಗೊಳ್ಳುತ್ತಿತ್ತು.
ಚಿಕವೀರರಾಜೇಂದ್ರ ದರಬಾರನ್ನು ಪ್ರವೇಶಿಸಿ,ವಂದನೆ ಸ್ವೀಕರಿಸಿ,ಸಿಂಹಾಸನದ ಮೇಲೆ
ಮಂಡಿಸಿದ ಠೀವಿ ಅವನನ್ನು ಮಂತ್ರಮುಗ್ಧನನ್ನಾಗಿ ಮಾಡಿತು. ಬೋಪಣ್ಣ ಮಾತನಾಡಿ
ದಾಗಲೂ, ಕೆಲ ಮುಖ್ಯ ವಿಷಯಗಳನ್ನು ಕುರಿತು ಅರಸ ಅಪ್ಪಣೆ ಕೊಡಿಸಿದಾಗಲೂ
ಶಂಕರಪ್ಪ ಮೈಮರೆತು ತಲೆದೂಗಿದ. "ಆಣ್ ಪೊತ್ತಿತ್ ಚಾವಂಡು' ಎಂದು ಅರಸ
ನೆಂದಾಗ, ಇತರರ ಜತೆ ತಾನು 'ವ್ಹಾ!ವ್ಹಾ! ಎಂದು ಉದ್ಗರಿಸಿದ.ಮಾರಿ ಬೇನೆ ತಗಲಿ
ಅಪ್ಪಾಜಿ ಅರಸರ ಮಕ್ಕಳು ಸತ್ತರು ಎಂದು ರಾಜ ತಿಳಿಸಿದಾಗ, ಜನಸಮುದಾಯದೊಡನೆ
ತಾನೂ ದುಃಖೋದ್ಗಾರವೆತ್ತಿದ. ಅರಸನ ವೀರೋಚಿತ ಮಾತುಗಳಿಂದ ಅವನ ಬಾಹುಗಳು
ಸ್ಫುರಿಸಿದುವು. ಕೊಂಬುತಮಟೆಗಳ ಸದ್ದು ದರಬಾರು ಮುಗಿಯಿತೆಂದು ಸಾರಿದಾಗ, ಅರಸ
ನಿರ್ಗಮಿಸಿದಾಗ, ಆವರೆಗಿನ ಅನುಭವಕ್ಕೆ ಕಿರೀಟಪ್ರಾಯವಾಗಿ ಶಂಕರಪ್ಪನ ಕಣ್ಣುಗಳಿಂದ
ಆನಂದಬಾಷ್ಪ ಸುರಿಯಿತು.
ದರಬಾರು ಮುಗಿದಮೇಲೆ ಜನಸಂದಣಿ ಬೇರೆ ಬೇರೆ ದಾರಿಗಳಲ್ಲಿ ಹಲವು ಉಪನದಿ
ಗಳಾಗಿ ಹರಿಯಿತು. ಮಕ್ಕಳು ಶಂಕರಪ್ಪನನ್ನು ಕೂಡಿಕೊಂಡರು.
ಸಾಮಾನ್ಯ ಪ್ರಜೆಗಳೆಲ್ಲರ ಪ್ರತಿಕ್ರಿಯೆಯೂ ಒಂದೇ ಆಗಿತ್ತು:
“ತಂದೆಗೆ ತಕ್ಕ ಮಗ!!"
ಹಲವರೆಂದರು: