ಪುಟ:ಸ್ವಾಮಿ ಅಪರಂಪಾರ.pdf/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



೨೮

ಸ್ವಾಮಿ ಅಪರಂಪಾರ

"ಮಹಾಸ್ವಾಮಿಯೇ ಹೇಳಿದಹಾಗೆ ಸಿಂಹದ ಹೊಟ್ಟೆಯಲ್ಲಿ ಹುಟ್ಟಿದ ಸಿಂಹ!”
ಶಂಕರಪ್ಪನದಾದರೂ ಅದೇ ಅಭಿಪ್ರಾಯ.
ಹಾದಿ ಬೇರೆಯಾಗಿ ಶಂಕರಪ್ಪ ತನ್ನ ಮನೆಯ ಕಡೆಗೆ ನಡೆಯತೊಡಗಿದಾಗ ಮಾತ್ರ,
ಭಾವೋದ್ವೇಗ ಉನ್ಮಾದಗಳು ಇಳಿದುವು. ಕಳೆದ ರಾತ್ರೆಯ ಘಟನೆಗಳ ನೆನಪು ತನ್ನ ಸ್ಥಾನ
ದಲ್ಲಿ ಮತ್ತೆ ವಿರಾಜಮಾನವಾಯಿತು.
ಮನೆ ಸೇರಿದಾಗ ಮಾನಸಿಕವಾಗಿಯೂ ದೈಹಿಕವಾಗಿಯೂ ಆತ ಬಳಲಿದ್ದ.
'ಅಪ್ಪಾಜಿ ಅರಸರ ಮಕ್ಕಳು ಮಾರಿಬೇನೆ ತಗಲಿ ತೀರಿಕೊಂಡ್ರು'.
ಅರಸನಾಡಿದ ಆ ಮಾತು ಈಗ ಬೆತ್ತಲೆಯಾಗಿ ಶಂಕರಪ್ಪನನ್ನು ಅಣಕಿಸಿತು. ಅವನ ತಲೆ
ಈಟಿಯ ತೀಕ್ಷ್ಣ ತಿವಿತಗಳಿಗೆ ಗುರಿಯಾಯಿತು.
ಅವನ ಮಕ್ಕಳಾದರೋ ಅಮಿತ ಉತ್ಸಾಹದಲ್ಲಿದ್ದರು. ಅವರು ಮಹಾದ್ವಾರದ
ಹೊರಗೇ ನಿಂತು ಸಂಭ್ರಮದಲ್ಲಿ ಭಾಗಿಗಳಾದವರು. ತಾವು ಕಂಡ ಹೆಬ್ಬುಲಿಗಳನ್ನು ಎಷ್ಟು
ಬಣ್ಣಿಸಿದರೂ ಅವರಿಗೆ ತೃಪ್ತಿ ಇಲ್ಲ.
ಶರಣವ್ವ ಗಂಡನ ಕಡೆ ನೋಡಿ ಅಂದಳು:
“ಊಟಕ್ಕೆ ನೀಡ್ತೀನಿ.ಉಂಡು,ತುಸು ಅಡ್ಡಾಗುವಿರಂತೆ".
"ಹೂಂ" ಎಂದ ಶಂಕರಪ್ಪ.”
...ಮಲಗಿದ ಶಂಕರಪ್ಪನನ್ನು ಗಾಢನಿದ್ರೆ ಆವರಿಸಿತು.
ನಿದ್ದೆಯಲ್ಲಿ ಅವನಿಗೆ ಹೊಸಳ್ಳಿಯ ಕನಸು ಬಿತ್ತು.ತಾನು ಕುದುರೆಯ ಮೇಲೆ
ಕುಳಿತಿದ್ದ.'ಹೊಸಳ್ಳಿಗೆ ನೀನು ಬಂದಿದ್ದನ್ನ ಮರೀಬ್ಯಾಡ! ಎಂದು ಮಲ್ಲಪ್ಪಗೌಡ ಕೂಗಿ
ಹೇಳುತ್ತಿದ್ದ.'ಹ್ಞ ಹ್ಞ' ಎನ್ನುತ್ತ ತಾನು ಕಡಿವಾಣ ಸಡಿಲಬಿಟ್ಟ.ಕುದುರೆ ನೆಲ
ಮುಟ್ಟದೆಯೇ ಹಾರುತ್ತ ಸಾಗಿತು. ಬೆಳಗಾಗುವುದರೊಳಗೆ ದುರ್ಗ ಸೇರಬೇಕು ಎಂಬ
ನಿಶ್ಚಯದಿಂದ ಅಶ್ವದ ಪಾರ್ಶ್ವಗಳನ್ನು ಪದೇ ಪದೇ ಪಾದಗಳಿಂದ ತಿವಿದ, ಆದರೂ
ಸೂರ್ಯೋದಯವಾಗಿಯೇ ಬಿಟ್ಟಿತು. ರಶ್ಮಿಗಳು ಅವನ ಕಣ್ಣುಗಳನ್ನು ಚುಚ್ಚಿದುವು.
ಶಂಕರಪ್ಪ ಕಣ್ಣು ತೆರೆದ ಪಶ್ಚಿಮಾಭಿಮುಖನಾಗಿದ್ದ ಸೂರ್ಯನ ಕಿರಣಗಳು
ಗವಾಕ್ಷಿಯಿಂದ ಒಳಕ್ಕೆ ತೂರಿ ಬಂದಿದ್ದುವು.ಶರಣವ್ವನ ಸ್ವರ ತಲೆವಾಗಿಲಿಂದ ಕೇಳಿ ಬರುತ್ತಿತ್ತು:
"ಅವರು ಮಲಕೊಂಡವರೆ."
ಅಂಗಳದಿಂದೊಂದು ಒರಟು ಧ್ವನಿ ಅನ್ನುತ್ತಿತ್ತು:
"ನಾನು ಅರಮನೆ ವಾಲೆಕಾರ.ತುರ್ತು ಕೆಲಸ. ಎಬ್ಬರ್ಸಿ."
ಕನಸಿನ ಎತ್ತರದಿಂದ ಸಮತಟ್ಟಾದ ನೆಲಕ್ಕೆ ಆಗಲೇ ಇಳಿದಿದ್ದ ಶಂಕರಪ್ಪ ಹೌಹಾರಿ
ಎದ್ದ.
“ಯಾರು? ಒಳಗ್ಬರ್ರಿ..." ಎನ್ನುತ್ತ ಆತ ತಲೆವಾಗಿಲ ಕಡೆ ನಡೆದ.
ಹೊರಗಿದ್ದ ಮನುಷ್ಯನೆಂದ:
"ನಾನಣ್ಣ.ಅರಮನೆ ವಾಲೆಕಾರ. ಇವತ್ತು ಚಂಜೆನಾಗೆ ನೀವು ಬರಬೈಕಂತೆ. ಮಹಾ
ಸ್ವಾಮಿಯವರ ಅಪ್ಪಣೆ. ಓಗಿ ತಿಳಿಸೂಂತ ಕಾರ್ಯಕಾರ ಐಯಣ್ಣ ಅಂದ್ರು." "ಹ್ಞ–ಹ್ಞ...ಬರತೇನೆ, ಬರತೇನೆ" ಎಂದ ಶಂಕರಪ್ಪ.