ಪುಟ:ಸ್ವಾಮಿ ಅಪರಂಪಾರ.pdf/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



ಸ್ವಾಮಿ ಅಪರಂಪಾರ

೨೯

ಕಾಲ್ನಡಿಗೆಯಿಂದ ಅರಮನೆಗೆ ಹೋದ ಶಂಕರಪ್ಪ ಮುಖಮಂಟಪದ ಬಳಿ ಪುಟ್ಟಬಸವನ ಕಣ್ಣಿಗೆ ಬಿದ್ದ.
ಬಸವ ಅರಸನ ಓರಗೆಯವನು. ಅನಾಥನಾಗಿದ್ದರೂ ರಾಜಕುಮಾರನ ಒಡನಾಡಿಯಾಗಿ
ಪ್ರಭಾವಶಾಲಿ ವ್ಯಕ್ತಿ ಎನಿಸಿಕೊಂಡವನು. 'ಇವನ ಬುದ್ಧಿ ಬೋ ಚುರುಕು' ಎನ್ನುತ್ತಿದ್ದರು
ಜನ ಆತನ ಬಗೆಗೆ. ಬಸವನನ್ನು ಉದ್ದೇಶಿಸಿ ಶಂಕರಪ್ಪನೆಂದ:
“ಅಡ್ಡಬಿದ್ದೆ."
"ಯಾರೋ ನೀನು ?'
ಬಸವನ ಧ್ವನಿಯಲ್ಲಿ ದರ್ಪವಿತ್ತು.
"ಶಂಕರಪ್ಪ, ಚಾವಡಿಕಾರ."
ಯಾಕೆ ಬಂದೆ ?"
"ಕಾರ್ಯಕಾರ ಐಯಣ್ಣ ಕರೆಕಳಿಸಿದ್ದು."
ಬಸವನ ಮುಖಭಾವದಲ್ಲಿ ಬದಲಾವಣೆಯಾಯಿತು. ತುಟಿಗಳ ಮೇಲೊಂದು ಮುಗುಳು
ನಗೆ ಮಿಂಚಿ ಮಾಯವಾಯಿತು :
"ನೀನಾ? ಹುಂ...ಇಲ್ಲೇ ಇರು."
ಬಸವ ಅರಮನೆಯ ಒಳಗಡೆಗೆ ಹೊರಟುಹೋದ.
ಶಂಕರಪ್ಪ ಕೊಂಚ ಅಳುಕುತ್ತಲೇ ಬಂದಿದ್ದ, ಐಯಣ್ಣನಿಗೆ ತನ್ನ ಮೇಲೇನಾದರೂ
ಸಂದೇಹ ಉಂಟಾಗಿರಬಹುದೇ ಎಂಬ ದಿಗಿಲು.. ಮೈಯೆಲ್ಲ ಕಣ್ಣು, ಮೈಯೆಲ್ಲ ಕಿವಿ.
ಬಸವ "ನೀನಾ!” ಎಂದಾಗ, ಆ ಧ್ವನಿಯಲ್ಲಿ ಮಾಧುರ್ಯ ಕಂಡಂತಾಗಿ, ಶಂಕರಪ್ಪನ
ದುಗುಡ ಸ್ವಲ್ಪ ಕಡಮೆಯಾಯಿತು.
ಆದರದ ಕಾತರ ತುಂಬಿದ ನೋಟದಿಂದ ಅವನು ಐಯಣ್ಣನ ದಾರಿ ಕಾದ.
ಒಂದೋ, ಕೈಗಳಿಗೆ ಬಂಗಾರದ ಕಡಗ : ಇಲ್ಲವೆ, ಕಾಲುಗಳಿಗೆ ಕಬ್ಬಿಣದ ಸಂಕೋಲೆ...
ಕಾಯುತ್ತ, ಮತ್ತೆ ಮತ್ತೆ ಆತ ತನ್ನಷ್ಟಕ್ಕೆ ಅಂದುಕೊಂಡ :
'ಉಡುಗೊರೆ ಸಿಕ್ಕಿತು ಅಂತ ಸಂತೋಷಪಡುತ್ತೇನೆಯೆ? ಇಲ್ಲ, ಹಾಗೆಯೇ, ಸಂಕೋಲೆ
ಬಿತ್ತು ಅಂತ ನಾನು ವ್ಯಥೆಪಡಬಾರದು.'
"ಬಾ ಶಂಕರಪ್ಪ."
ಹಾಗೆ ಕರೆದವನು ಮುಖಮಂಟಪದಲ್ಲಿ ಕಾಣಿಸಿಕೊಂಡ ಐಯಣ್ಣ. ಮಾರ್ದವತೆ
ತು೦ಬಿದ ಧ್ವನಿ
ಪಾದರಕ್ಷೆಗಳನ್ನು ಕಳಚಿ ಶಂಕರಪ್ಪ ಐಯಣ್ಣನನ್ನು ಹಿಂಬಾಲಿಸಿದ.
ಜಗಲಿಯ ಉದ್ದಕ್ಕೂ ನಡೆದು, ಎರಡು ಕೊಠಡಿಗಳನ್ನು ದಾಟಿ, ಗೃಹಾರಾಮದಲ್ಲಿದ್ದ
ಲತಾಮಂಟಪವನ್ನು ಅವರು ತಲಪಿದರು.
ಅಲ್ಲಿ ಅರಸ ಆರಾಮಪೀಠದಮೇಲೆ ಆಸೀನನಾಗಿದ್ದ. ತುಸು ದೂರದಲ್ಲಿ ಅವನ ಇಕ್ಕೆಲ
ಗಳಲ್ಲಿ ತಗ್ಗಾದ ಪೀಠಗಳ ಮೇಲೆ ಬಸವನೂ ಅಬ್ಭಾಸ್ ಅಲಿಯೂ ಕುಳಿತಿದ್ದರು.
ಐಯಣ್ಣ ಲತಾಮಂಟಪದ ಬಾಗಿಲನ್ನು ದಾಟಿ ನಾಲ್ಕು ಹೆಜ್ಜೆ ಮುಂದುವರಿದು ನಿಂತ.