ಪುಟ:ಸ್ವಾಮಿ ಅಪರಂಪಾರ.pdf/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೩೦

ಸ್ವಾಮಿ ಅಪರಂಪಾರ

ಹೊಸ್ತಿಲ ಹೊರಗೇ, ಶಂಕರಪ್ಪ ಭಕ್ತಿಯಿಂದ ಕೈಜೋಡಿಸಿದ.
ಕಿರೀಟವಿಲ್ಲದ, ನೀಳಕೂದಲನ್ನು ಹಿಂದಕ್ಕೆ ಬಾಚಿದ, ಸಡಿಲವಾದ ನಿಲುವಂಗಿ ತೊಟ್ಟ,
ಗೌರಾಂಗನಾದ ದೊರೆ, ಸದಾ ಚಲಿಸುವ ಜಾಗೃತ ಕಣ್ಣಾಲಿಗಳು, ರಾಜನ ಸನ್ನಿಧಿಗೆ ಬಂದು
ತಾನು ಪುನೀತನಾದೆ, ಎಂದುಕೊಂಡ ಶಂಕರಪ್ಪ.
ಅರಸ ಕೇಳಿದ:
"ಕರಕೊಂಡು ಬಂದೆಯಾ, ಐಯಣ್ಣ?”
"ಹೌದು, ಮಹಾಸ್ವಾಮಿ."
ಶಂಕರಪ್ಪನನ್ನು ಕುರಿತು ರಾಜನೆಂದ:
"ಇಲ್ಲಿ ಬಾ.”
ಒಲವು ಧ್ವನಿಯಲ್ಲಿ. ಆದರೂ ಶಂಕರಪ್ಪನ ಕಂಕುಳು ಬೆವತಿತು. ಪಾದಗಳೋ ಕೆಳಕ್ಕೆ ಬೇರುಬಿಟ್ಟಿದ್ದುವು.
ಬಸವನೆಂದ:
"ಬಾರಪ್ಪ ಒಳಕ್ಕೆ, ಮಹಾಸಾಮಿಯವರು ಕರೀತವರೆ."
ಶಂಕರಪ್ಪ ಕಷ್ಟಪಟ್ಟ ಕಾಲುಗಳನ್ನು ಕಿತು ಮುಂದಕ್ಕೆ ನಡೆದು, ನಡುಬಾಗಿಸಿ ಅರಸನಿಗೆ
ನಮಿಸಿದ.
ರಾಜನೆಂದ:
"ನೀನು ನಂಬಿಗಸ್ಥ ಅಂತ ಕೇಳಿದೆವು, ಸಂತೋಷ."
ತನ್ನ ಕೊರಳಿನಿಂದ ಪಚ್ಚೆಕಲ್ಲಿನ ಪದಕವಿದ್ದ ಬಂಗಾರದ ಸರವನ್ನು ಅರಸ ಬಿಚ್ಚಿ
ಹಿಡಿದು, ಶಂಕರಪ್ಪನ ಕಡೆಗೆ ಕೈ ಚಾಚಿದ.
"ತಗೋ."
ಶಂಕರಪ್ಪ ದಿಕ್ಕು ತೋಚದೆ ನಿಂತ.
ಅಬ್ಬಾಸ್ ಅಲಿಯೆಂದ:
ಮಹಾಸ್ವಾಮೇರು ಬಹುಮಾನ ಕೊಡತಾ ಅವರೆ, ಇಸಕೋ.”
ಎರಡೂ ಅಂಗೈಗಳನ್ನು ಮುಂದಕ್ಕೆ ಚಾಚಿ ಅರಸನಿತ್ತ ಉಡುಗೊರೆಯನ್ನು ಸ್ವೀಕರಿಸಿ
ಶಂಕರಪ್ಪ ಮತ್ತೊಮ್ಮೆ ವಂದಿಸಿದ.
ಚಿಕವೀರರಾಜ ನುಡಿದ:
"ಇನ್ನು ಮುಂದೆ ಬೇಹಿನ ಚಾವಡಿಯಲ್ಲಿ ನಿನಗೆ ಕೆಲಸ, ಅರಮನೆಯ ಖಾಸಾ ಚಾಕರ ನಾಗಿರಬೇಕು, ತಿಳೀತಾ ?"
ಶಂಕರಪ್ಪ ತೊದಲಿದ :
"ತಿಳೀತು ಮಹಾಸ್ವಾಮಿ."
ಅರಸ ಆಪಾದಮಸ್ತಕವಾಗಿ ಶಂಕರಪ್ಪನನ್ನು ದಿಟ್ಟಿಸುತ್ತಿದ್ದಂತೆ ಬಸವನೆಂದ:
"ನಿನ್ನ ಸ್ವಾಮಿಭಕ್ತಿ ನೋಡಿ ಮಹಾಸಾಮೇರು ಉಡುಗೊರೆ ಕೊಟು, ನೆಪ್ಪಿರಲಿ.
ಅರಮನೆಯ ಅನ್ನ ತಿನ್ನತಾ ಇದೀಯೆ. ನಮಕ್ ಹರಾಮಿ ಮಾಡಿದಿ ಅಂದರೆ ನಿನಗೆ ಶಾಸ್ತಿ
ಆದಾತು.ನಿನ್ನೆ ರಾತ್ರಿ ನಡೆದದ್ದನ್ನ ಯಾರಿಗಾದರೂ ಬಾಯಿಬಿಟ್ಟು ಹೇಳಿದಿ ಅಂದರೆ
ನಿನಗೆ ಎಂಥ ಶಿಕ್ಷೆ ಸಿಕ್ಕಾತು ಗೊತ್ತೇನೊ ?"