ಪುಟ:ಸ್ವಾಮಿ ಅಪರಂಪಾರ.pdf/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸ್ವಾಮಿ ಅಪರಂಪಾರ

೩೧

ಎಂಥ ಕಟು ಮಾತುಗಳು! ತನ್ನ ಪ್ರೀತಿಯ ರಾಜನ ಪರವಾಗಿ ಯಾರೇ ಆದರೂ ಈ
ರೀತಿ ಆಡಬೇಕೆ? ತನ್ನ ನಿಷ್ಠೆಯನ್ನು ಕುರಿತು ಶಂಕಿಸಬೇಕೆ ಇವರು? ಭೀತನಾಗಿ ಅಲ್ಲ,
ಅವಮಾನಿತನಾಗಿ ಶಂಕರಪ್ಪನ ಮುಖ ಕಪ್ಪಿಟ್ಟಿತು.
ಗದ್ಗದ ಕಂಠದಿಂದ ಅವನೆಂದ:
"ನಮಕ್ ಹರಾಮಿ ಮಾಡಿದ್ರಿ ಅಂದರೆ ಮಹಾಸ್ವಾಮೇರು ನನ್ನ ಚಕ್ಕಳ ಸುಲಿದು
ಎಕ್ಕಡ ಮಾಡಕೋಬಹುದು.”
ಅಬ್ಬಾಸ್ ಅಲಿಯೆಂದ :
"ಎಕ್ಕಡವಂತೆ ಎಕ್ಕಡ ! ನಿನ್ನ ತಲೆ ಉರುಳಾತು ಹುಷಾರ್!"
ಸಣ್ಣನೆ ನಕ್ಕು ಅರಸನೆಂದ:
"ನಮ್ಮ ಸೇವಕರ ವಿಷಯದಲ್ಲಿ ಇಂಥ ನಿಷ್ಟುರ ಮಾತು ಅಗತ್ಯವಿಲ್ಲ, ಅಲ್ಲವೇನಪ್ಪ?
ನೀನು ಇನ್ನು ಹೋಗು. ಐಯಣ್ಣ, ಕೊಟ್ಟಿಗೆಯವನಿಗೆ ಹೇಳಿ ವೀಳ್ಯದೊಟ್ಟಿಗೆ ಸಿಹಿ
ಭೋಜನಕ್ಕೆ ಬೇಕಾಗುವ ಸಾಮಗ್ರಿ ಈ ಚಾವಡಿಕಾರನಿಗೆ ಕೊಡಿಸು.”
ರಾಜ ತೋರಿದ ವಾತ್ಸಲ್ಯ ಶಂಕರಪ್ಪನ ಹೃದಯವನ್ನು ಮುಟ್ಟಿತು. ಆ ಸ್ಪರ್ಶಕ್ಕೆ
ಸಂತಸದ ಕಂಬನಿ ಅವನ ಕಣ್ಣುಗಳಲ್ಲಿ ಚಿಮ್ಮಿತು. ನಾಲ್ಕು ಹೆಜ್ಜೆ ಮುಂದೆ ಸರಿದು ಅರಸನ
ಅಡಿಗಳಿಗೆ ಎರಗಿ ಎದ್ದು.ಆತ ಐಯಣ್ಣನನ್ನು ಹಿಂಬಾಲಿಸಿದ.
ಕೊಟ್ಟಿಗೆಯಿಂದ ದೊರೆತ ದೊಡ್ಡ ಮೂಟೆಯನ್ನು ಭುಜಕ್ಕೇರಿಸಿ ಶಂಕರಪ್ಪ ತನ್ನ ಗೃಹಕ್ಕೆ ಅಭಿಮುಖವಾಗಿ ತೆರಳಿದ.
ಹೆಜ್ಜೆಗಳು ಹಗುರವಾಗಿದ್ದುವು. ಹಕ್ಕಿಯಂತೆ ಹಾರಬೇಕೆನಿಸಿತು ಅವನಿಗೆ.
ಇದ್ದಕ್ಕಿದ್ದಂತೆ ಬಸವ ಆಡಿದ ಒಂದು ಮಾತು ಅವನಿಗೆ ನೆನಪಾಯಿತು :
'ನಿನ್ನೆ ರಾತ್ರಿ ನಡೆದದ್ದನ್ನ ಯಾರಿಗಾದರೂ ಬಾಯಿಬಿಟ್ಟ ಹೇಳಿದಿ ಅಂದರೆ---!'
ಅದನ್ನು ಶಂಕರಪ್ಪ ಮೆಲುಕು ಹಾಕಿದ. ಒಮ್ಮೆಲೆ ಅವನ ಮುಖ ಬೆಳಗಿತು. ನಕ್ಕು,
ತನ್ನಷ್ಟಕ್ಕೆ ಆತನೆಂದ:
'ಅಲ್ಲಾ ! ನಿನ್ನೆ ರಾತ್ರಿ ನಡೆದದ್ದನ್ನ ಯಾರಿಗೇ ಆಗಲಿ ಬಾಯಿಬಿಟ್ಟು ಹೇಳೋದಾದರೂ
ಉಂಟಾ ? '

ಚಿಕವೀರರಾಜ ಮಡಕೇರಿಯಲ್ಲಿ, ತನ್ನ ದಾಯಾದಿ ಸೋದರರ ಸಾವನ್ನು ರಾಜಸಭೆ
ಯಲ್ಲಿ ಜಾಹೀರು ಮಾಡುತ್ತಲಿದ್ದ ವೇಳೆಯಲ್ಲೇ, ಹೊಸಳ್ಳಿಯ ಮಲ್ಲಪ್ಪಗೌಡನ ಮನೆ
ಯಲ್ಲಿ ವೀರಪಾಜಿ ಮೆಲ್ಲಮೆಲ್ಲನೆ ಚೇತರಿಸಿಕೊಳ್ಳುತ್ತಲಿದ್ದ.
ಬೆಳಗಾದೊಡನೆ ಹುಡುಗರು ತಂಗಳುಂಡು, ದನಕರುಗಳನ್ನು ಮೇಯಿಸಲೆಂದು
ಒಯ್ದರು. ತೋಟದಲ್ಲಿ ದುಡಿಯಲೆಂದು ಬಂದ ಆಳುಗಳಿಗೆ ದಿನದ ಕೆಲಸವನ್ನಷ್ಟು ಹೇಳಿ
ಮಲ್ಲಪ್ಪಗೌಡ, ಮೈ ಸ್ವಸ್ಥವಿಲ್ಲವೆಂದು ಕಾರಣ ಕೊಟ್ಟ, ಮನೆಯಲ್ಲೇ ಉಳಿದ. ಅಕ್ಕವ್ವ
ತಾಯ್ತನದ ಕಕ್ಕುಲತೆಯಿಂದ ವೀರಪ್ಪನ ಆರೈಕೆ ಮಾಡಿದಳು.
ಗಂಡನನ್ನು ಅವಳು ಕೇಳಿದಳು :
"ಪಂಡಿತರನ್ನು ಕರೆಸೋದು ಬ್ಯಾಡ ಅಂದಿರಾ ?”