ಪುಟ:ಸ್ವಾಮಿ ಅಪರಂಪಾರ.pdf/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೩೨

ಸ್ವಾಮಿ ಅಪರಂಪಾರ

ಹಾಗೆ ಕೇಳಿದುದು ಎರಡನೆಯು ಬಾರಿ.
ಮಲ್ಲಪ್ಪ ಖಚಿತ ಮಾತುಗಳಲ್ಲಿ ಉತ್ತರವಿತ್ತ :
"ಬ್ಯಾಡ ಅಂತ ಒಮ್ಮೆ ಹೇಳಲಿಲ್ಲವಾ? ಅನ್ನಾಹಾರ ಇಲ್ದೆ ಹಿಂಗಾಗಿದೆ. ಇನ್ನೊಂದು
ದಿವಸದ ಒಳಗೆ ಸರಿ ಹೋಗುತಾರೆ."
ಒಳಗಿನ ಸಂಕಟ ಅಕ್ಕವ್ವನನ್ನು ಮಾತಾಡಗೊಟ್ಟಿತು:
"ನಿಮಗೆ ಭಯ. ಕಳಿಸಿಕೊಡೋ ಏಚ್ನೆ ಒಂದನ್ನೆ ಮಾಡತಾ ಇದೀರಾ...”
ಒತ್ತರಿಸುತ್ತಿದ್ದ ಭಾವನೆಗಳನ್ನು ಅದುಮಿ ಮಲ್ಲಪ್ಪನೆಂದ:
"ಸಾಕು. ನಾನೂ ಮನುಸ್ಯನೇ, ಮರ ಅಲ್ಲ."
ತನ್ನ ಮಾತು ಒಂದು ತೂಕ ಹೆಚ್ಚಾಯಿತೆಂದು ವ್ಯಥೆಗೊಂಡು ಅಕ್ಕವ್ವನೆಂದಳು.
"ಏನೋ ಅಂದುಬುಟ್ಟೆ, ಮನಸ್ಸಿಗೆ ಹಚ್ಚಕೋಬ್ಯಾಡಿ, ರಾಜಕಾರ್ಯ ಹೆಣ್ಣು ಹೆಂಗಸಿ
ಗೇನು ತಿಳೀತದೆ? ನಿಮಗೆ ಹಾಗೆ ಸರಿತೋರತ್ತೋ ಹಂಗೆ ಮಾಡಿ."
“ಅವರಿಗೆ ಎಚ್ಚರವಾದಾಗ ಹೇಳು. ಒಂದಿಷ್ಟು ಗಂಜಿ ನೀರು ಕುಡಿಸೋಕೆ ನೋಡಾನ."
"ಹೂ೦."
ನಿಂಬೆಹಣ್ಣಿನ ರಸದ ಸೇವನೆಯ ಬಳಿಕ ನಿದ್ದೆ ಹೋದ ವೀರಪ್ಪ ನಾಲ್ಕು ಘಳಿಗೆ ಬಿಟ್ಟು
ಪುನಃ ಎಚ್ಚರಗೊಂಡಾಗ, ಅಕ್ಕವ್ವ ಕೇಳಿದಳು :
"ಗಂಜಿ ನೀರು ತರಲಾ?"
ವೀರಪ್ಪನ ಕಣ್ಣುಗಳು ಶೂನ್ಯ ನೋಟದಿಂದ ಅಕ್ಕವ್ವನನ್ನು ದಿಟ್ಟಿಸಿ,ಬಳಲಿ, ಮತ್ತೆ
ಮುಚ್ಚಿಕೊಂಡುವು-ಕ್ಷಣ ಹೊತ್ತು, ಹೊರಳುವ ಶಕ್ತಿ ಇರಲಿಲ್ಲ ಆ ನಾಲಿಗೆಗೆ. ಒಣಗಿ
ಹಿಪ್ಪೆಯಾಗಿದ್ದ ತುಟಿಗಳಷ್ಟೇ ಏನನ್ನೋ ಬಯಸಿ ಚಲಿಸಿದುವು.
ಗಂಡನನ್ನು ಅಕ್ಕವ್ವ ಒಳಕ್ಕೆ ಕರೆದಳು. ಆಕೆಯೂ ಮಲ್ಲಪ್ಪನೂ ಬಾಳೆಎಲೆಯ ಕಿಣ್ಣ
ದಲ್ಲಿ ತುಸು ಗಂಜಿನೀರನ್ನು ವೀರಪ್ಪನಿಗೆ ಕುಡಿಸಿದರು.
ಎರಡು ಗುಟುಕು ಒಳಗೋಗಿತ್ತಷ್ಟೆ, ಇನ್ನು ಬೇಡವೆಂದು ಆ ಜೀವ ತಲೆಯಲ್ಲಾಡಿಸಿತು.
ಮತ್ತೆ ನಿದ್ದೆ.
ಮಧ್ಯಾಹ್ನ ಮಲ್ಲಪ್ಪ ಉಂಡ, ಅಕ್ಕವ್ವನೂ ಊಟದ ಶಾಸ್ತ್ರ ಮುಗಿಸಿದಳು.
ಸಂಜೆ ವೀರಪ್ಪನಿಗೆ ಎಚ್ಚರವಾದಾಗ ನಿಶ್ಯಕ್ತಿಯಿಂದ ಮುಖ ಮ್ಲಾನವಾಗಿದ್ದರೂ,
ಬಳಲಿಕೆ ಪರಿಹಾರವಾದ ಕಳೆ ಇತ್ತು, ಮಲ್ಲಪ್ಪನನ್ನೂ ಅಕ್ಕವ್ವನನ್ನೂ ದಿಟ್ಟಿಸಿ ನೋಡಿದ
ಬಳಿಕ, ವೀರಪ್ಪನ ಹಣೆ ನಿರಿಗೆಗಟ್ಟಿತು. ತಲೆಯನ್ನು ಅತ್ತಿತ್ತ ಹೊರಳಿಸಲೆತ್ನಿಸುತ್ತ ಆತ
ಯಾರನ್ನೋ ಅರಸುತ್ತಿದ್ದ...
"ನೀರು."
ಸ್ಪಷ್ಟವಾಗಿ ಕೇಳಿಬಂತು ಪದ.
ಮಗುವಿಗೆ ಹಾಲುಣಿಸುವ ಗಿಂಡಿಯಲ್ಲಿ, ಕಾಸಿ ತಣಿಸಿದ ನೀರನ್ನು ಅಕ್ಕವ್ವ ಕುಡಿಸಿದಳು.
ಕುಡಿದು ಸ್ವಲ್ಪ ಹೊತ್ತಿನ ಬಳಿಕ ವೀರಪ್ಪನ ಗಂಟಲಲ್ಲಿ ಗೊರಗೊರ ಸದ್ದಾಯಿತು.
ದಂಪತಿ ಕಾತರಗೊಳ್ಳುತ್ತಿದ್ದಂತೆಯೇ ವೀರಪ್ಪನ ನಾಲಿಗೆ ಮಿಸುಕತೊಡಗಿ ಕ್ಷೀಣ ಧ್ವನಿ
ಕೇಳಿಸಿತು:
"ನಂಜುಂಡ ಎಲ್ಲಿ ?"