ಪುಟ:ಸ್ವಾಮಿ ಅಪರಂಪಾರ.pdf/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸ್ವಾಮಿ ಅಪರಂಪಾರ

೩೩

ಮಲ್ಲಪ್ಪನೆಂದ :
"ಅವರು ಇಲ್ಲಿಲ್ಲ. ನೀವು ನಿಶ್ಚಿಂತೆಯಾಗಿರಬೇಕು."
“ಇದು ಬಂದೀಖಾನೆ ಅಲ್ಲ ?"
"ಅಲ್ಲ, ಹಿತವರ ಮನೆ."
ಹಾಗೆಂದು ತಾನಾಗಲೇ ಊಹಿಸಿದ್ದೆ ಎನ್ನುವಂತಿತು ವೀರಪ್ಪನ ಮುಖಭಾವ.
ಕಾಲದ ಮರೆಯಲ್ಲಿ ಅಡಗಿದ್ದುದನ್ನು ಕೆದಕಿ, ಕಳೆದ ಘಟನೆಗಳನ್ನು ನೆನಪಿಗೆ ತಂದು
ಕೊಳ್ಳಲು ಆತ ಯತ್ನಿಸಿದ. ಎಲ್ಲವೂ ಮಸಕುಮಸಕಾಗಿತು. ತೃಪ್ತಿಯಾಗಲಿಲ್ಲ. ಯೋಚಿ
ಸಲು ಮಾಡಿದ ಯತ್ನದಿಂದ ಅವನಿಗೆ ದಣಿವಾಯಿತು. ಮಂಪರು ಬಂದಂತಾಗಿ ನಿದ್ದೆ
ಆವರಿಸಿತು.
ಸಂಜೆಯಾಯಿತು. ಆಳುಗಳು ವರದಿಯೊಪ್ಪಿಸಿ ತೆರಳಿದರು. ದನಕರುಗಳು ಹಟ್ಟಿಗೆ
ಬ೦ದುವು, ಹುಡುಗರು ಉ೦ಡು ಮಲಗಿದರು.
ಆ ಇರುಳು ಮಲ್ಲಪ್ಪ ಅಕ್ಕವ್ವರ ಪಾಲಿಗೆ ಅರ್ಧ ಎಚ್ಚರದ ಅರ್ಧ ನಿದ್ರೆಯ ರಾತ್ರೆ.
ಮೊದಲು ಇಬ್ಬರೂ ಮಗ್ಗುಲಲ್ಲಿ ಕುಳಿತರು. ಬಳಿಕ ಒಬ್ಬರಾದ ಮೇಲೊಬ್ಬರು ಸರದಿಯಾಗಿ
ಕಾವಲಾದರು.
ವೀರಪ್ಪನದು ಗಾಢ ನಿದ್ರೆ, ಬೆಳಗಿನ ಜಾವವಷ್ಟೇ ಆತ ಎಚ್ಚರಗೊಂಡ, ದೀಪದ ಬೆಳಕಿ
ನಲ್ಲಿ ತೂಕಡಿಸುತ್ತ ಕುಳಿತ ಮಲ್ಲಪ್ಪನನ್ನು ನೋಡಿ ಆತ ಕೇಳಿದ:
“ಎಷ್ಟನೇ ಪ್ರಹರ ?”
"ಕೋಳಿ ಕೂಗಿಯಾಯಿತು" ಎಂದ ಮಲ್ಲಪ್ಪ.
"ನಂಜುಂಡ ಇಲ್ಲ ಅಲ್ಲವಾ ?"
"ಇಲ್ಲ, ಸೋಮಿಯೋರೆ, ಏನಾರ ಬೇಕೆ?"
“ಬೇಡ."
ಮಲ್ಲಪ್ಪನಿಗೆ ಧೈರ್ಯ ಬಂತು. ಇನ್ನು ಅಪಾಯವಿಲ್ಲ: ಈ ಹಗಲು ಈತ ಎದ್ದು
ಕುಳಿತುಕೊಳ್ಳುತ್ತಾರೆ---ಎನಿಸಿತು.
ಬೆಳಿಗ್ಗೆ ವೀರಪ್ಪ ಹಕ್ಕಿಗಳ ಇಂಚರಕ್ಕೆ ಕಿವಿಗೊಟ್ಟ. ಹಸು ಹೋರಿಗಳು ಹಟ್ಟಿಯಿಂದ
ಅಂಬಾ ಅಂದುವು ದೂರದಲ್ಲೆಲ್ಲೋ ಹೊಲದ ಅಂಚಿನಲ್ಲಿ ಯಾವನೋ ಹಾಡುತ್ತಿದ್ದ.
ಕ್ಷೀಣವಾಗಿ ಕೇಳಿಸುತ್ತಿದ್ದ ಆಲಾಪನೆ ಸುಶ್ರಾವ್ಯವಾಗಿತ್ತು. ಪದಗಳು ಸ್ಪಷ್ಟವಾಗಿರಲಿಲ್ಲ.
ಮಲ್ಲಪ್ಪ ಹತ್ತಿರ ಬಂದಾಗ, ತಾನು ಏಳಬೇಕು, ಶೌಚಕ್ಕೆ ಹೋಗಬೇಕು---ಎಂದು
ವೀರಪ್ಪ ಸನ್ನೆ ಮಾಡಿದ.
"ಸೋಮಿಯೋರು ಏಳಬಾರ್ದು" ಎಂದ ಮಲ್ಲಪ್ಪ.
ಅಕ್ಕವ್ವ ಮಣ್ಣಿನ ಮಡಕೆಯನ್ನು ತಂದಿರಿಸಿ ಕದವೆಳೆದುಕೊಂಡು ಹೊರಟುಹೋದಳು...
...ವೀರಪ್ಪನಿಗೆ ಸ್ವಲ್ಪ ಹಾಯೆನಿಸಿತು.
ಕಣ್ಣೆವೆಗಳನ್ನು ಮುಚ್ಚಿಯೇ ಒಂದೆರಡು ಸಾರೆ ನೀಳವಾಗಿ ಉಸಿರೆಳೆದು ಬಿಟ್ಟ, ವೀರಪ್ಪನೆಂದ:
"ಶಿವಗೆ ಕರುಣೆ ಇಲ್ಲ.ಸಾವು ಬರಲಿ ಎಂದಿದ್ದೆ; ಆದರೂ ಬದುಕಿ ಉಳಿದೆ.”
ಕಂಪಿಸುವ ಧ್ವನಿಯಲ್ಲಿ ಮಲ್ಲಪ್ಪನೆಂದ:
3