ಪುಟ:ಸ್ವಾಮಿ ಅಪರಂಪಾರ.pdf/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸ್ವಾಮಿ ಅಪರಂಪಾರ ದೇವಮ್ಮಜಿಯೂ ಬಾಲ್ಯದ ಸುಮಾರು ಮೂರು ಸಂವತ್ಸರಗಳನ್ನು ಅಲ್ಲಿಯೇ ಕಳೆದವರು. ದೂರವೋ ಒಂದೇ ಹರಿದಾರಿ ಮಡಕೇರಿಯಿಂದ. ಈಗಾ ಆ ಅರಮನೆಯನ್ನು ಜಹಗೀರನ್ನೂ ಅಳಿಯನಿಗೆ ಉಡುಗೊರೆಯಾಗಿ ಕೊಟ್ಟು ಮಗಳೊಡನೆ ಅಲ್ಲಿಗೆ ಕಳುಹುವ ಯೂಚನೆ ಲಿಂಗರಾಜನಿಗೆ ಸಮಂಜಸವಾಗಿ ಕಂಡಿತು.

    ಹಾಗೆ ಚನ್ನಬಸಪ್ಪನೂ ದೇವಮಾಜಿಯೂ ಅಪ್ಪಂಗಳಕ್ಕೆ ಹೋದರು. ದೇವಮಾಜಿಗೆ ಆ ದೂರ, ನಡುಮನೆಗೂ ಅಂಗಳಕ್ಕೂ ಇರುವ ಅಂತರ ಎಷ್ಟೋ ಅಷ್ಟೆ. ಹಗಲಿರಲಿ ಇರುಳಿರಲಿ, ತಾಯಿ ಮನೆಯ ನೆನಪಾದರೆ ಸಾಕು ಒಡತಿಯನ್ನು ಹೊತ್ತು ಬೋವಿಗಳು ಮಡಕೇರಿಗೆ ಓಡಬೇಕಾಗುತ್ತಿತು. ಮಡದಿಯನ್ನು ಚನ್ನಬಸಪ್ಪ ಕುದುರೆಯ ಮೇಲೆ ಕುಳಿತು ಹಿಂಬಾಲಿಸುತ್ತಿದ್ದ.
    ಆದರೆ, ತವರು ತವರಲ್ಲ ಎನ್ನುವ  ಸ್ಥಿತಿ ದೇಮ್ಮಾಜಿಯ ಪಾಲಿಗೆ ಬಹಳ ಬೇಗನೆ ಉಂಟಾಯಿತು. ತಂದೆಯ ದೇಹಾಂತ, ಆ ಶೋಕವನ್ನು ತಾಳಲಾರದೆ ವಜ್ರದ ಪುಡಿ. ತಿಂದು ತಾಯಿಯ ಮರಣ, ಇವು ರಾಜಕುಮಾರಿಯ ಕನಸಿನಲೋಕಕ್ಕೆ ಕೊಳ್ಳಿ ಇಕ್ಕಿದುವು. ಅಪ್ಪಂಗಳವನ್ನೆ ತನ್ನ ಮನೆ ಎಂದು ದೇವಮಾಜಿ ಕಾಣುವಂತಾಯಿತು....
    ...ಆ ಅಪ್ಪಂಗಳವನ್ನೀಗ ಗಂಗಮ್ಮನೂ ರಾಜಮಾಜಿಯೂ ಬಂದು ತಲಪಿದರು. ಒಂದು ಹಗಲು ಒಂದು ಇರುಳು ನಡೆದು ಮೂರನೆಯ ಪೂರ್ವಾಹ್ನ ನೇಸರು ಕೆಂಡವಾಗು ವುದಕ್ಕೆ ಮುಂಚೆಯೇ ಅವರು ಅಲ್ಲಿಳಿದರು.
    ಯಾವಾಗ ಎಂದು ನಿರ್ದಿಷ್ಟವಾಗಿ ತಿಳಿದಿರದಿದ್ದರೂ ಇವರು ಬರುತ್ತಾರೆ ಎನ್ನುವುದು ದೇವಮಾಜಿಗೆ ಗೊತ್ತಿತು. ಓಲೆಕಾರನೊಬ್ಬ ರಾಜಧಾನಿಯಿಂದ ಬಂದು ಆ ಸುದ್ದಿಯನ್ನು ತಿಳಿಸಿಹೋಗಿದ್ದ. ಅವಳಿಗಾಗಲೀ ಚನ್ನಬಸಪ್ಪನಿಗಾಗಲೀ ಅದು ಬಗೆಹರಿಯದ ಸಮಸ್ಯೆ. ಇವರನ್ನೀಗ ಅರಸು ಕರೆಸುವುದರಲ್ಲಿ ಯಾವ ಗೂಢವಿದ್ದೀತು?
   ದೇವಮಾಜಿ ಅಂದಳು.:
   "ನಾವು ಇಲ್ಲಿ ನಮ್ಮಷ್ಟಕ್ಕೆ ಸುಖವಾಗಿರೋದು ಅಣ್ಣನಿಗೆ ಇಷ್ಟವಿಲ್ಲ, ಇವರ ಕರಕರೆ ಒಂದಿರಲಿ ಅಂತ ಕಳಿಸತಿದಾನೆ. ಗಂಡ ಸತ್ತ ಹುಡುಗಿ ಇಲ್ಲಿಗೆ ಬರೋ ಅಗತ್ಯವಾದರೂ ಎನು ?"
   ಆ ಮನೋಭೂಮಿಕೆಯಲ್ಲಿ ನಿಂತೇ ದೇವಮಾಜಿ ಬಂದವರನ್ನು ಇದಿರ್ಗೊಂಡಳು.
   ಮೇನೆಯಿಂದಿಳಿದ ಗಂಗಮ್ಮ ದೊರೆಮಗಳನ್ನು ಗೌರವ ತೋರಿಸಿ ಮಾತನಾಡಿಸಿದಳು.
  "ಚಂದಾಕಿದೀರ ?” ಎಂದು ಕೆಳಿದಳು.
   ತಾನು ಹೀಗೆ ಕೇಳುವ ಬದಲು ಇವಳೇ ಪ್ರಶ್ನಿಸುತ್ತಿದ್ದಾಳಲ್ಲಾ_ಎಂದು ದೇವಮ್ಮಾಜಿಗೆ ಆಶ್ಚರ್ಯ.
   ಅದಕ್ಕೂ ಹೆಚ್ಚಿನ ಅಚ್ಚರಿಗೆ ರಾಜಮ್ಮಾಜಿ ಕಾರಣಳಾದಳು.
   ತನ್ನ ಜೊತೆಗಾರನೆಲ್ಲಾದರೂ ಕಾಣಿಸುವನೇನೋ ಎಂದು ಚಿಗರೆಗಣ್ಣುಗಳನ್ನು ಅತ್ತಿತ್ತ ಹೊರಳಿಸಿದ. ದೇವಮಾಜಿಯನ್ನು ಕಂಡೊಡನೆ ನಾಚಿ ಮುದ್ದೆಯಾದ, ರಾಜಮಾಜಿಯ ಹಣೆಯಮೇಲೆ ಕುಂಕುಮವಿತು!
   ದೇವಮ್ಮಾಜಿ ಅವಾಕ್ಕಾಗಿ ನಿಂತಳು.