ಪುಟ:ಸ್ವಾಮಿ ಅಪರಂಪಾರ.pdf/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸ್ವಾಮಿ ಅಪರಂಪರ

ತಾಯಿಯ ದೃಷ್ಟಿ ಅವಳನ್ನು ತಲಪುವುದಕ್ಕೂ ಸರಿಹೋಯಿತು. ಬೆಂಕಿ ಬಿದ್ದ ಮನೆಯೊಳಗಿಂದ ತೊಟ್ಟಿಲಕೂಸನ್ನು ತರಲು ಧಾವಿಸುವವಳಂತೆ ಗಂಗಮ್ಮ ಮಗಳೆಡೆಗೆ ನುಗ್ಗಿ ಅವಳನ್ನು ಭದ್ರವಾಗಿ ಎದೆಗವಚಿಕೊಂಡಳು.

      “ಕಂದಾ! ಕಂದಾ! ಏನಾಗೋಯ್ತು ಮಗಳೇ! ಅಯ್ಯೋ! ಹಯೋ !" 
      ಗಂಗಮ್ಮನ ಪಾದಗಳೀಗ ಕುಸಿದುವು. ಬಿಗಿಹಿಡಿದಿದ್ದ ಮಗಳೊಡನೆ ಆಕೆ ಧೊಪ್ಪನೆ ಬಿದ್ದಳು.
      ತಾಯಿಯ ಆರ್ತನಾದದಿಂದ, ಯಾಕೆ? ಏನು? ಎಂದು ತಿಳಿಯದಿದ್ದರೂ ಹೆತ್ತವಳ ದುಃಖದಲ್ಲಿ ಭಾಗಿಯಾಗುತ್ತ ಮಗಳೂ ಆರಂಭಿಸಿದ ರೋದನದಿಂದ, ಅಪ್ಪಂಗಳದ ಅರಮನೆಯ ಆ ಮೂಲೆ ಪ್ರತಿಧ್ವನಿಸಿತು. 
      ದೇವಮ್ಮಾಜಿಗೂ ದುಃಖವಾಯಿತು. ಅವಳು ಸಂತೈಸಲೆತ್ನಿಸಿದಳು :
     "ಸುಮ್ಕಿರಿ ! ಸುಮ್ಕಿರಿ !"
      ವೇಗವಾಗಿ ಹೆಜ್ಜೆಗಳನ್ನಿಡುತ್ತ ಚನ್ನಬಸಪ್ಪ ಅಲ್ಲಿಗೆ ಬಂದು, ಬಾಗಿಲ ಹೊರಗೆ ನಿಂತು, ಅಂದ :
      "ಅಳಬಾರದು, ಅಳಬಾರದು." 
      ಗಂಗಮ್ಮನನ್ನೂ ರಾಜಮಾಜಿಯನ್ನೂ ಅಲ್ಲಿಗೆ ತಂದುಬಿಟ್ಟವರಿಗೆ ಸಂದರ್ಭ ತಿಳಿಯಿತು. ಅವರ ಮುಖ್ಯಸ್ಥ ಬಂದು ಚನ್ನಬಸಪ್ಪನೊಡನೆ ಇಳಿದನಿಯಲ್ಲಿ ಅಂದ:
     "ಅಪ್ಪಣೆ ಕೊಡಬೇಕು. ನಾವು ಈಗಲೇ ಮಡಕೇರಿಗೆ ಹೋಗತೀವಿ." 
     ಚನ್ನಬಸಪ್ಪ ಸಿಟಾಗಿ, “ಏನಂದೆ?" ಎಂದು ಗದರಿದ. 
     ಆ ಸಂಕಟದ ಮಧ್ಯೆಯೂ ದೂತನ ವಿನಂತಿಯನ್ನು ಕೇಳಿಸಿಕೊಂಡ ಗಂಗಮ್ಮ ಏಳಲೆತ್ನಿ ಸುತ್ರ ಚೀರಿದಳು :
    "ಹೋಗುವವರು ನಾವು. ನಮ್ಮನ್ನ ವಾಪಸ್ಸು ಹಳ್ಳಿಗೆ ಮುಟ್ಟಿಸಿ ನೀ ಬೇಕಾದಲ್ಲಿಗೆ ಓಗಪ್ಪ."
    "ಆಕಡೆಗಿರು. ಇತ್ತ ಬರಬಾರದು : ಅರಮನೆ ಹೆಣ್ಣುಮಕ್ಕಳು ಇರುವಲ್ಲಿಗೆ ಚಾಕರರು ಬರತಾರಾ? ನಡಿಯೋ!" ಎಂದು ಚನ್ನಬಸಪ್ಪ ಹುಬ್ಬೇರಿಸಿ ನುಡಿದ. 
    ದೂತರ ಮುಖ್ಯಸ್ಥನೆಂದ:
    "ನಾವಿಲ್ಲಿ ಇರಬಾರದು ಧಣಿಗಳೆ. ಹೊರಡತೇವಿ. ತಪ್ಪೆನಿದ್ದರೂ ಉಡೀಲಿ ಹಾಕ್ಕೊ ಬೇಕರಾ.” 
    "ಹೋಗು! ಹಾಳಾಗೊಗು ನಿನ್ನ ಕೆಟ್ಟ ಮೋರೆ ತಗೊಂಡು!"
    ಹೊರಟುಹೋದ ದೂತನನ್ನೊಮ್ಮೆ ಕೆಂಗಣ್ಣಿನಿಂದ ನೋಡಿ, ಗಂಗಮ್ಮನ ಕಡೆ ತಿರುಗಿ, ರಮಿಸುವ ಧ್ವನಿಯಲ್ಲಿ ಚನ್ನಬಸಪ್ಪನೆಂದ: 
   "ಛು! ಛು! ನೀವು ಯಾವ ಚಿಂತೇನೂ ಮಾಡಬಾರದು. ನಾವಿಲ್ಲವಾ? ನಾವಿಲ್ಲವಾ?"
                                                                      ೧೪
    ಮಾರನೆಯ ದಿನ ಕೊಡಗಿನ ರಾಣಿ ಗೌರಮ್ಮ ಅಪ್ಪಂಗಳಕ್ಕೆ ಬಂದಳು. ಅನ್ನ ನೀರು ಮುಟ್ಟದೆ ಇರುಳೆಲ್ಲ ರೋದಿಸಿ ಯೋಚಿಸಿ ಬೆಂಡಾಗಿದ್ದ ಗಂಗಮ್ಮ ಅದೇ