ಪುಟ:ಸ್ವಾಮಿ ಅಪರಂಪಾರ.pdf/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



ಕೊಡಗಿನ ರಾಜಧಾನಿಯಾದ ಮಡಕೇರಿ ಮಲಗಿ ನಿದ್ರಿಸುತ್ತಿತ್ತು. ಊರು ಕನವರಿಸು
ತ್ತಿತ್ತೇನೋ ಎನ್ನುವಂತೆ ಕುಡುಕನೊಬ್ಬ ಬೀದಿಯಲ್ಲಿ ತೂರಾಡುತ್ತ ವಿಕಾರ ಸ್ವರಗಳನ್ನು
ಹೊರಡಿಸುತ್ತಲಿದ್ದ.
ಲಿಂಗರಾಜನ ಮಗ ಚಿಕವೀರರಾಜ ತಂದೆಯ ಮರಣದ ಬಳಿಕ ರಾಜ್ಯದ ಗದ್ದುಗೆ
ಯನ್ನೇರಿ ಮೂರು ತಿಂಗಳು ಕಳೆದಿದ್ದುವು. ಅದು ಶಾಲಿವಾಹನ ಶಕ ಸಾವಿರದೇಳುನೂರ
ನಾಲ್ವತ್ತೆರಡನೆಯ ವರ್ಷ: ವಿಕ್ರಮ ಸಂವತ್ಸರ. ಪಟ್ಟಾಭಿಷೇಕ ಸಮಾರಂಭದ ಸಡಗರವೆಲ್ಲ
ಮುಗಿದು ನಿತ್ಯದ ಜೀವನ ಕ್ರಮಕ್ಕೆ ರಾಜ್ಯ ಮರಳಿತ್ತು.
ನಾಲ್ಕು ದಿನಗಳಿಗೆ ಹಿಂದೆ ಮೃಗಯಾ ವಿನೋದಕ್ಕೆ ತೆರಳಿದ್ದ ಅರಸು ಆ ಸಂಜೆಯಷ್ಟೇ
ರಾಜಧಾನಿಗೆ ಹಿಂತಿರುಗಿದ್ದ. ಯುದ್ಧದಲ್ಲಿ ಜಯಿಸಿ ಬಂದವರ ಉತ್ಸಾಹದಿಂದ,ಬೇಟೆಯ
ಪರಿವಾರ ಪೌರರ ಕಣ್ಣಿಗೆ ಹಬ್ಬದೂಟವನ್ನು ಬಡಿಸುತ್ತ, ಕೋಟೆಯನ್ನು ಹೊಕ್ಕಿತ್ತು.
ಯುವಕ ಚಿಕವೀರರಾಜನ ಗುಂಡುಗಳಿಗೆ ಬಲಿಯಾದ ನಾಲ್ಕು ಹೆಬ್ಬುಲಿಗಳು ಬೇಟೆಯ
ಭಟರು ಹೊತ್ತ ಬಿದಿರುಗಳ ಮೇಲಿಂದ ಜನರನ್ನು ನೋಡುತ್ತಿದ್ದುವು. ರಾಜಬೀದಿಯಲ್ಲಿ
ಪ್ರಜಾಸಮುದಾಯದ ವಂದನೆ–ಜಯಕಾರಗಳನ್ನು ಸ್ವೀಕರಿಸುತ್ತ ಅಶ್ವಾ ರೂಢನಾದ ಅರಸು
ಅರಮನೆಯ ಕಡೆಗೆ ಸಾಗಿದ.ಅಪ್ರತಿಮ ಗುರಿಕಾರರಾದ ಚೆಟ್ಟಿ–ಕರ್ತು ಸೋದರರು,
ಅಂತರಂಗದ ಸಖನಾದ ಪುಟ್ಟಬಸವ, ಮೂವರು ನಾಲ್ವರು ಕಾರ್ಯಕಾರರು, ರಾಜನನ್ನು
ಹಿಂಬಾಲಿಸಿದರು. ತುತೂರಿಯ ಸ್ವಾಗತ ಕೇಳಿಬಂದಂತೆ, ಕುದುರೆಗಳು ನಡಿಗೆಯ ಗತಿ
ಯನ್ನು ಕುಂಠಿತಗೊಳಿಸಿದುವು.
ಚಿಕವೀರರಾಜ ಬೇಟೆಯ ಸಂಗಡಿಗರನ್ನು ಬೀಳ್ಕೊಟ್ಟು, ತನ್ನ ದರ್ಶನಕ್ಕಾಗಿ ಕಾದಿದ್ದ
ರಾಣಿಯೊಡನೆ ಕುಶಲ ಮಾತುಗಳನ್ನಾಡಿದ. ಸ್ನಾನದ ಮನೆಗೆ ನಡೆದು ತೈಲಾಭ್ಯಂಜನದಿಂದ
ಮೈಯ ದಣಿವಾರಿಸಿಕೊಂಡು, ಭೋಜನಗೃಹವನ್ನು ಪ್ರವೇಶಿಸಿದ.
ಆ ರಾತ್ರಿ ಎಂದಿನ ಕಟ್ಟಳೆಗಿಂತ ತುಸು ಬೇಗನೆ ರಾಣೀವಾಸದಲ್ಲಿ ದೀಪ ಆರಿತು...
ಜನವೆಲ್ಲ ನಿದ್ದೆ ಹೋದಂತೆ ಕಂಡರೂ ಕೋಟೆಯ ದಕ್ಷಿಣ ಭಾಗದಲ್ಲಿದ್ದ ಸೆರೆಮನೆಯಲ್ಲಿ
ಹೊಂಗೆ ಎಣ್ಣೆಯ ದೀಪ ಮಂದ ಪ್ರಕಾಶದಿಂದ ಉರಿಯುತ್ತಿತು.ಅಭಿಷಿಕ್ತನಾದೊಡನೆಯೇ
ಅರಸ ಹಿಡಿದು ತಂದಿರಿಸಿದ್ದ ಮಿಕಗಳೆರಡು ಒಂದು ಕೊಠಡಿಯಲ್ಲಿ ಕೊನೆಯುಸಿರನ್ನೆಳೆಯು
ತ್ತಿದುವು. ಎಳೆಯರಿಬ್ಬರು ಅನ್ನಾಹಾರಗಳಿಲ್ಲದೆ ಆಗಲೇ ಒಂದು ತಿಂಗಳು ದಾಟಿತ್ತು.
ಬೇಟೆಗೆ ಹೊರಡುವುದಕ್ಕೆ ಮುನ್ನ ಬಸವ ಆಣತಿಮಾಡಿದ್ದ:
“ಈ ಹೊತ್ತಿನಿಂದ ನೀರೂ ನಿಲ್ಲಿಸಿಬಿಡಿ."
ತುತೂರಿಯ ಸದ್ದು ರಾಜನ ಪುನರಾಗಮನವನ್ನು ಸಾರಿತ್ತು.ಇರುಳಿನ ಸರದಿಯ
ಕಾವಲುಗಾರರ ತಂಡ ಸೆರೆಮನೆಗೆ ಬಂದಿತು.ಇಂದು ಆ ಪಾದಗಳಲ್ಲಿ ಹೆಚ್ಚಿನ ಚುರುಕು.
ಅವರ ಮುಖ್ಯಸ್ಥ ಸ್ವಲ್ಪ ಕುತೂಹಲದಿಂದ ಆ ಇಬ್ಬರು ಕೈದಿಗಳನ್ನು ಕುರಿತು ವಿಚಾರಿಸಿದ:
"ಏನಂತವೆ ?"
ಉತ್ತರ: