ಪುಟ:ಸ್ವಾಮಿ ಅಪರಂಪಾರ.pdf/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ಸ್ವಾಮಿ ಅಪರಂಪಾರ ವಾಗಿಯೇ ದೊರೆಯನ್ನು ಕೋಪಾವಿಷ್ಟನನ್ನಾಗಿ ಮಾಡಿತು. ಆದರೂ ಆತ, ಚನ್ನಬಸಪ್ಪ ತನ್ನ ತಂಗಿಯ ಪತಿ ಎಂಬ ಕಾರಣದಿಂದ ಸಂಯಮ ತಳೆದ. ಒಮ್ಮೆ ತಂಗಿ ದೇವಮ್ಮಾಜಿ ಬಂದಿದ್ದಾಗ, ಅರಸ ಆಕೆಗೆ ಅಂದ : "ಒಸಿ ನಾಲಿಗೆ ಬಿಗಿ ಹಿಡೀಬೇಕು ಅಂತ ನಿನ್ನ ಗಂಡನಿಗೆ ಹೇಳು." ಇದನ್ನು ಕೇಳಿದಾಗ ಚನ್ನಬಸಪ್ಪ, "ಇವನು ಬಾಳ ಕುದುರ್ಕೊ೦ಡ" ಎಂದು ರೇಗಾಡಿದ. ಆ ವೇಳೆಗಾಗಲೇ ಈಸ್ಟ್ ಇಂಡಿಯಾ ಕಂಪೆನಿ, ಭಾರತದ ಬಹುಭಾಗದಲ್ಲಿ ಬಲವಾಗಿ ಬೇರುಬಿಟ್ಟಿತು. ಟೀಪೂ ಹತನಾದ ಬಳಿಕ ಆಂಗ್ಲರ ರಾಜ್ಯವಿಸ್ತರಣಕಾರ್ಯ ಸುಗಮವಾಯಿತು, ದೇಶೀಯ ಭಾಷೆಗಳನ್ನರಿಯದ ಪರಕೀಯ ಜನ ಆರು ಸಾವಿರ ಮೈಲುಗಳ ದೂರದಿಂದ ಬಂದು ರಾಜ್ಯ ಕಟ್ಟಿದ ರೀತಿ ಅದ್ಭುತವಾಗಿತ್ತು. ಆ ಅವಧಿಯಲ್ಲಿ ಕಿತ್ತೂರಿನ ಸ್ವತಂತ್ರ ರಾಜ್ಯದ ಪತನವಾಯಿತು. ಅದು, ಕೊಡಗಿನ ಉತ್ತರಕ್ಕೆ ಸುಮಾರು ನೂರು ಹರದಾರಿಗಳ ದೂರದಲ್ಲಿದ್ದ ಅರಸೊತ್ತಿಗೆ ರಾಣಿ ಚನ್ನಮ್ಮ ಆಂಗ್ಲರಿಗೆ ಶರಣೆನ್ನದೆ ಅಸಮ ಸಾಹಸದಿಂದ ಕಾದಿದಳು. ಸ್ವಕೀಯರೇ ಒಬ್ಬಿಬ್ಬರ ದ್ರೋಹ ಚಿಂತನೆ ಚೆನ್ನಮ್ಮನ ಪರಾಭವವನ್ನು ಸುಲಭಗೊಳಿಸಿತು. ಐದುವರ್ಷ ಆಂಗ್ಲರಸೆರೆಯಲ್ಲಿದ್ದು ರಾణి ಅಸುನೀಗಿದಳು. ಕಿತ್ತೂರಿನ ಕಥೆಯನ್ನು ಕೇಳಿದ ಚಿಕವೀರರಾಜ ತನ್ನ ಕುಡಿಮಿಾಸೆಯನ್ನು ತಿರುವಿ ನುಡಿದ: "ಕೊಡಗಿನ ತಂಟೆಗೆ ಈ ಜನ ಬರಲಿ. ಆಗ ತೋರಿಸೇವು"! ಕಿತ್ತೂರಿನ ಪ್ರಕರಣದ ಬಳಿಕ ಚನ್ನಬಸಪ್ಪನ ಯೋಚನೆ ನಿರ್ದಿಷ್ಟವಾದ ಹೊಸತೊಂದು ದಾರಿಯನ್ನು ಹಿಡಿಯಿತು: ಇಂಗ್ಲಿಷರ ನೆರವು ಪಡೆದು ಅರಸನನ್ನು ತಾನು ಉರುಳಿಸಬೇಕು. ಅದಕ್ಕಾಗಿ, ಕ್ರೌರ್ಯವೇ ಮತ್ತಿತರ ಆರೋಪಗಳನ್ನು ಚಿಕವೀರರಾಜನ ಮೇಲೆ ಹೊರಿಸಿ, ಮೈಸೂರಿನ ಆಂಗ್ಲ ರೆಸಿಡೆಂಟನಿಗೆ ಅವನು ಪತ್ರಗಳನ್ನು ಬರೆದ. ಚಿಕವೀರರಾಜ ತನ್ನ ದಾಯಾದಿಗಳಾದ ವೀರಪ್ಪ-ನಂಜುಂಡಪ್ಪರನ್ನು ಕೊಲ್ಲಿಸಿದನೆಂಬುದು ಆ ಆರೋಪಗಳಲ್ಲಿ ಒಂದು. ಈ ಮಧ್ಯೆ ವೀರಪ್ಪ ಸತ್ತಿಲ್ಲವೆಂಬ ಕಿಂವದಂತಿಯೊಂದು ಹುಟ್ಟಿ ರೆಕ್ಕೆಪುಕ್ಕ ಬಲಿತು, ಕೊಡಗಿನ ಉದ್ದಗಲಕ್ಕೆ ಸಂಚಾರ ಮಾಡಿತು, ಬೇಹಿನ ಚಾವಡಿಯಲ್ಲಿ ಊಳಿಗದವನಾಗಿ ನೇಮಕಗೊಂಡ ಶಂಕರಪ್ಪನಾಗಲೀ ಹೊಸಳ್ಳಿಯ ಮಲ್ಲಪ್ಪಗೌಡನಾಗಲೀ ನಂಜರಾಜಪಟ್ಟಣದ ಸಿದ್ಧಲಿಂಗನಾಗಲೀ ಆ ಕಿಂವದಂತಿಗೆ ಮೂಲವಾಗಿರಲಿಲ್ಲ ಕುಚೋದ್ಯಕ್ಕೆಂದು ಯಾವನೋ ಹಾರಿಬಿಟ್ಟ ಊಹಾಪೋಹ ಬೃಹದಾಕಾರ ತಳೆದಿತ್ತು. ಅಪ್ಪಂಗಳಕ್ಕೆ ಈ ಸುದ್ದಿ ಮುಟ್ಟಿದಾಗ ಅದನ್ನು ನಂಬಲು ಚನ್ನಬಸಪ್ಪ ಸಿದ್ಧನಿರಲಿಲ್ಲ. ಗದ್ದುಗೆಗೆ ಇನ್ನೊಬ್ಬ ಪ್ರತಿಸ್ಪರ್ಧಿ ಇರುವನೆಂಬ ಅಂಶ ಅವನಿಗೆ ಅಪ್ರಿಯವಾಗಿತ್ತು. ಆದರೆ, ತನ್ನ ಮನಃಕ್ಲೇಶದ ಮಡುವಿನಲ್ಲಿ ಮುಳುಗುತ್ತಿದ್ದ ಗಂಗಮ್ಮ ಆ ಕಡ್ಡಿಗೆ ಆತು ಕೊಂಡಳು. ಲೋಕದ ದೃಷ್ಟಿಯಲ್ಲಿ ವಿಧವೆಯಾಗಿದ್ದ ರಾಜಮ್ಮಾಜಿ ಈಗ ಹುಡುಗಿಯಲ್ಲ, ಯುವತಿ. ತಾಯಿಯಾಡಿದ ಪಿಸುನುಡಿ, ಮುಚ್ಚಿಕೊಂಡಿದ್ದ ಅವಳ ಹೃದಯದ ಗವಾಕ್ಷಿ ಗಳನ್ನು ಮೆಲ್ಲನೆ ತೆರೆಯಿತು. ಬಾಲ್ಯದ ಮಾಯಾಲೋಕದಲ್ಲಿ ತಾನು ಕಂಡ ಪತಿ ಬದುಕಿ ಇರಬಹುದೆಂಬ ಆಸೆ ಕೊನರಿ, ಆತ ಬದುಕಿ ಇರುವನೆಂಬ ನಂಬುಗೆಯಾಗಿ ಮಾರ್ಪಟ್ಟಿತು. ಮಲೆತಿರಿಕೆಬೆಟ್ಟದ ತಪ್ಪಲಿನಿಂದ ಅಪ್ಪಂಗಳಕ್ಕೆ ಬಂದು ಸೇರಿದ ಮೊದಲ ಒಂದೆರಡು