ಪುಟ:ಸ್ವಾಮಿ ಅಪರಂಪಾರ.pdf/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ೮೮ ಸ್ವಾಮಿ ಅಪರಂಪಾರ

     ರಾಜನ ಬದಲು ಐಯಣ್ಣನೂ, ಆತನನ್ನು ಹಿಂಬಾಲಿಸಿ ಶಂಕರಪ್ಪನೂ ಅಪರಂಪಾರನ 

ಹಿಂದೆ ಓಡಿದರು.

    ಓಡುತ್ತ, ಮುಂದಿದ್ದ ಅಪರಂಪಾರನಿಗೆ ಕೇಳಿಸುವಂತೆ ಐಯಣ್ಣ ವಿನಂತಿಮಾಡಿದ:
    "ಅಯ್ಯನವರೆ, ಮಹಾಸೋಮಿಯೋರು ಕರೀತಾ ಅವರೆ, ಬರ್ರೀ."
     ಅಪರಂಪಾರ ಮಹಾದ್ವಾರವನ್ನು ದಾಟಿದ. ಅವನನ್ನು ಹಿಂಬಾಲಿಸಿ ಬಂದಿದ್ದ 

ಮಡಕೇರಿಯ ಪೌರರು ಅಲ್ಲಿದ್ದರು. ಜನರ ಗುಂಪು ಸೀಳಿಕೊಂಡು ದಾರಿಮಾಡಿಕೊಟ್ಟಿತು.

     ಮುಂದುವರಿದ ಅಪರಂಪಾರ ಸರಕ್ಕನೆ ಹೊರಳಿ ನೋಡಿ ಅಂದ : 
    "ಇನ್ನೊಮ್ಮೆ ಖಂಡಿತ ಬಂದು ನೋಡತೀವಿ ಅಂತ ನಿಮ್ಮ ಅರಸನಿಗೆ ಹೇಳ್ರಪ್ಪಾ."
    ಅಪರಂಪಾರನ ದೃಷ್ಟಿ ಶಂಕರಪ್ಪನ ಮೇಲೆ ಒಂದು ಕ್ಷಣ ಹೆಚ್ಚಾಗಿ ನೆಟ್ಟಿತು.
    ಹಾವುಗೆಗಳು ಸದ್ದುಮಾಡುತ್ತ ತಮ್ಮ ಪಯಣವನ್ನು ಮುಂದುವರಿಸಿದುವು.
                             ೨೭
     ಶಾಲಿವಾಹನ ಶಕ ೧೭೫೩ ಖರ ಸಂವತ್ಸರದಲ್ಲಿ [ಕ್ರಿಸ್ತಶಕ ೧೮೩೧] ದಕ್ಷಿಣ ಭಾರತ 

ದಲ್ಲಿ ನಡೆದೊಂದು ಘಟನೆ. ಸ್ವತಂತ್ರರಾಗಿ ಉಳಿಯ ಬಯಸಿದ ಹಿಂದೂಸ್ಥಾನದ ಅರಸರನ್ನೆಲ್ಲ ಅಧೀರರನ್ನಾಗಿ ಮಾಡಿತು. ಅದು, ಮೈಸೂರಿನ ಅರಸ ಮುಮ್ಮಡಿ ಕೃಷ್ಣರಾಜ ಒಡೆಯನ ಪದಚ್ಯುತಿ, ಆವರೆಗೂ ಮೈಸೂರು ರಾಜ್ಯದಲ್ಲಿ ಸೂತ್ರಧಾರ ಮಾತ್ರರಾಗಿದ್ದ ಆಂಗ್ಲರು, ಇನ್ನು ನಾಯಕ ಪಾತ್ರವೂ ತಮ್ಮದೇ ಎಂದರು.ಕೃಷ್ಣರಾಜನ ಮೇಲೆ ಅವರು ಹೊರಿಸಿದ ಆರೋಪಗಳು ಮೂರು : ದುರಾಡಳಿತ, ಅದಕ್ಷತೆ, ದುಂದು ವೆಚ್ಚ–-ಟೀಪೂವಿನ ಪತನದ ಬಳಿಕ ನಾಲ್ಕು ವರ್ಷದ ಎಳೆಯ ಮಗುವಿಗೆ--ಯದುವಂಶದ ಕೃಷ್ಣರಾಜನಿಗೆ--ಆಂಗ್ಲರು ಪಟ್ಟ ಕಟ್ಟಿದ್ದರು. ನಿಜ. ಆದರೆ ಆ ಗೊಂಬೆಯರಸ ಮೂವತ್ತೈದರ ಪ್ರಜ್ಞಾವಂತನಾದಾಗ ಬಿಳಿಯರು ಯೋಚನೆಗೀಡಾದರು. ರಾಜ್ಯದ ರೈತಾಪಿ ವರ್ಗದಲ್ಲಿ ಅಶಾಂತಿ ಇದ್ದಿತು. ಜನರ ಸ್ವಾತಂತ್ರ್ಯಾಕಾಂಕ್ಷೆ ಕಮರಿರಲಿಲ್ಲ, ಹಿಂದೆ ತಮ್ಮ ಕೈಗೊಂಬೆಯಾಗಿದ್ದ ರಾಜ ಈಗ ಬಂಡಾಯಗಾರರ ತಾಳಕ್ಕೆ ತಕ್ಕಂತೆ ಕುಣಿದರೆ? ಅವನನ್ನು ಮೂಲೆಗೊತ್ತಿ ಅಧಿಕಾರ ಸೂತ್ರಗಳನ್ನು ತಾವೇ ವಹಿಸಿಕೊಳ್ಳುವುದು ಮೇಲು

-–ಎಂದು ಅವರಿಗೆ ತೋರಿತು.

ಅಲ್ಲದೆ ಆ ಕ್ರಮ, ಭಾರತದಾದ್ಯಂತ ತಮ್ಮ ಆಡಳಿತವನ್ನು ಕ್ರೋಡೀಕರಿಸುವ

ಯೋಜನೆಯ ಒಂದಂಗವೊ ಆಗಿತ್ತು.
  ಅಷ್ಟಾದ ಮೇಲೆ ಅವರ ಕಣ್ಣಲ್ಲಿ ಉಳಿದ ಪುಟ್ಟದೊಂದು ಕಸವೆಂದರೆ ಕೊಡಗು.
  ಆ ರಾಜ್ಯದ ನಾಲ್ಕು ದಿಕ್ಕುಗಳಲ್ಲೂ ಬ್ರಿಟಿಷರ ಆಳ್ವಿಕೆಯಿತ್ತು, ನಡುವೆ ಅದೊಂದೇ

ಕರಿಯ ಮಚ್ಚೆ, ಅದನ್ನಷ್ಟು ತೊಡೆದರೆ ಯಶೋದುಂದುಭಿಯಲ್ಲಿನ ಅಪಶ್ರುತಿ ಕೊನೆಗಾಣು ವುದು : ಜಂಬೂದ್ವೀಪದ ದಕ್ಷಿಣಾರ್ಧದಲ್ಲಿ ಅವರ ಕೇತು ಪಟ ಸರ್ವತ್ರ ವಿರಾಜಮಾನ ವಾಗುವುದು.

   ಕೊಡಗನ್ನು ಕಬಳಿಸುವ ರಾಜಕೀಯ ತೀರ್ಮಾನವನ್ನು ಈಸ್ಟ್ ಇಂಡಿಯಾ ಕಂಪೆನಿ

ರಹಸ್ಯವಾಗಿ ಸ್ವೀಕರಿಸಿದ ಮೇಲೆ, ಅದನ್ನು ಕೃತಿಗಿಳಿಸುವ ರಾಜನೈತಿಕ ಕಸರತ್ತುಗಳು ಒಂದೊಂದಾಗಿ ಆರಂಭವಾದುವು.