ಪುಟ:ಸ್ವಾಮಿ ಅಪರಂಪಾರ.pdf/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೯೬ ಸ್ವಾಮಿ ఆಪರoಪಾರ

 ಗಂಡನೂ ಕೊಡಗನ್ನು ಬಿಟ್ಟು ಬಂದರಾದೀತೆಂದು ಗುಟ್ಟಾಗಿ ಮೊದಲು ಸೂಚಿಸಿದ್ದವರೇ
 ಆಂಗ್ಲರು. ರೆಸಿಡೆಂಟನಿಗೆ ಪರಮಾನಂದವಾಯಿತು. ಅತಿಥಿಗಳ ಬಿಡಾರಕ್ಕಾಗಿ ಎಲ್ಲ
 ಅನುಕೂಲತೆಗಳೂ ಇದ್ದ ಮನೆಯೊಂದನ್ನು ಆತ ಒದಗಿಸಿಕೊಟ್ಟ.
   ಜತೆಗೆ ಭರವಸೆಯನ್ನೂ ಇತ್ರ :
   "ನೀವೇನೂ ಚಿಂತಿಸಬೇಡಿ. ಚಿಕವೀರರಾಜನು ದುಷ್ಟನೂ ಅನರ್ಹನೂ ಅಂಬೋದಕ್ಯೆ
 ಒಳ್ಳೆಯವರಾದ ನೀವು ಓಡಿಬಂದಿರುವುದೇ ಸಾಕ್ಷಿ ಬೇಗನೆ ಅವನನ್ನು ಗಾದಿಯಿಂದ
 ಇಳಿಸುತ್ತೇವೆ."
   ಚನ್ನಬಸಪ್ಪ ಯಾಚಿಸಿದ :
   "ಕೊಡಗಿನ ಸಿಂಹಾಸನಕ್ಕೆ ನಮ್ಮ ಹೆಂಡತಿ ಹಕ್ಕುದಾರಳು ಅಂಬುವದನ್ನು ಖಾವಂದರು
 ಒಪ್ಪಬೇಕು."
   "ಹ್ಞು -ಹ್ಞು. ಸಕಾಲದಲ್ಲಿ ಯೋಗ್ಯವಾದ್ದನ್ನೇ ಮಾಡುತ್ತೇವೆ. ಮದರಾಸ್ ಗವರ್ನರಿಗೆ
 ಬರೆಯುತ್ತೇವೆ."
   ಚಿಕವೀರರಾಜನ ಪತ್ರ ಕಾಸ್ಸಾಮೇಜರನ ಕೈಸೇರಿತು. ಅದನ್ನು ಆತ ಮದರಾಸಿಗೆ
 ಕಳುಹಿದ. ಆಗ ಸರ್ ಫ್ರೆಡರಿಕ್ ಆದಮ್ ಮದರಾಸಿನ ಗವರ್ನರ್. ಆತ ಚಿಕವೀರ
 ರಾಜನಿಗೆ ಉತ್ತರ ಬರೆದ. ಭಾವೀ ಘಟನೆಗಳಿಗೆ ಮುನ್ಸೂಚಿಯಾಗಿತು ಆ ದೀರ್ಘ ಓಲೆ.
   ದಕ್ಷ ರಾಜ್ಯಾಡಳಿತದ ಸೂತ್ರಗಳನ್ನು ವಿವರಿಸಿ, ಅವುಗಳಿಗೆ ಅನುಗುಣವಾಗಿ ಚಿಕವೀರ
 ರಾಜ ವರ್ತಿಸಬೇಕೆಂದು ಅದರಲ್ಲಿ ಕೇಳಲಾಗಿತು, ಈಸ್ಟ್ ಇಂಡಿಯಾ ಕಂಪೆನಿ ಸರಕಾರ
 ಹಿಂದೆಯೇ ಆಜ್ಞಾಪಿಸಿದ್ದಂತೆ ಕೊಡಗಿನಲ್ಲಾಗುವ ಪ್ರತಿಯೊಂದು ಮರಣದಂಡನೆಯ
 ಬಗೆಗೂ ಅರಸ ಕಂಪನಿ ಸರಕಾರಕ್ಕೆ ವರದಿ ಕೊಡಬೇಕು: ಕಂಪನಿ ಸರಕಾರದ ಅಪೇಕ್ಷೆಗೆ
 ವಿರುದ್ಧವಾಗಿ ರಾಜ ವರ್ತಿಸಬಾರದು__ಎಂದು ಆ ಓಲೆಯಲ್ಲಿ ತಿಳಿಸಲಾಗಿತು. ಗವರ್ನರನ
 ಆದೇಶದಂತೆ ಕಾಸ್ಸಾಮೇಜರ್ ರಾಜನೊಡನೆ ಮುಖತಃ ಮಾತನಾಡುವುದಕ್ಕಾಗಿ ಮಡಕೇರಿಗೆ
 ಬರುವುದಾಗಿ ಅದರಲ್ಲಿ ಸೂಚಿಸಲಾಗಿತ್ತು.
   ಆ ಓಲೆಯ ದಿನಾಂಕ : ಸಾವಿರದ ಎ೦ಟುನೂರ ಮೂವತ್ತಮೂರನೆಯ ಇಸವಿ
 ಜನವರಿ ಹದಿನೆಂಟನೆಯ ತಾರೀಖು.
   ಆ ತಿಂಗಳ ಕೊನೆಯ ವಾರದಲ್ಲಿ ಕಾಸ್ಸಾಯೇಜರ್ ಮಡಕೇರಿಗೆ ಆಗಮಿಸಿದ. ಆಂಗ್ಲ
 ಮಿತ್ರರ ಆತಿಥ್ಯಕ್ಕೆಂದೇ ದೊಡ್ಡವೀರರಾಜೇಂದ್ರ ಕಟ್ಟಿಸಿದ್ದ ಭವ್ಯ ಅತಿಥಿಗೃಹದಲ್ಲಿ ಆತನ
 ಬಿಡಾರಕ್ಕೆ ಚಿಕವೀರರಾಜೇಂದ್ರ ಏರ್ಪಾಟು ಮಾಡಿದ.
   ಆ ವೇಳೆಯಲ್ಲಿ ಹಲವು ಚಟುವಟಿಕೆಗದ ಬೀಡಾಗಿತು ಮಡಕೇರಿ.
   ಮುಮ್ಮಡಿ ಕೃಷ್ಣರಾಜನ ಆಂತರಂಗದ ಬಂಟನೊಬ್ಬ__ವೆಂಕೋಜಿ-ರಹಸ್ಯ ರಾಜ
 ಕಾರ್ಯದ ಮೇಲೆ ಚಿಕವೀರರಾಜನನ್ನು ಕಾಣಲು ಬಂದಿದ್ದ. ಮೈಸೂರು ರಾಜ್ಯವನ್ನು
 ಮರಳಿ ಪಡೆಯುವ ಯತ್ನದಲ್ಲಿ ಕೊಡಗಿನ ದೊರೆಯ ನೆರವನ್ನು ಒಡೆಯ ಯಾಚಿಸಿದ್ದ.
   ಚಿಕವೀರರಾಜ ಕೇಳಿದ :
   “ಇಂಗ್ರೇಜಿಯವರ ಹತ್ತಿರ ನಮ್ಮ ಮಾತು ನಡೀತದೇನು ? ಅವರಿಗರ್ಥವಾಗೋದು.
 ಮದ್ದುಗುಂಡಿನ ಭಾಷೆ ಮಾತ್ರ. ನಾಳೆ ನಮಗೂ ಅವರಿಗೂ ಯುದ್ಧವಾದರೆ ಕೃಷ್ಣರಾಜರ
 ಬೆಂಬಲ ನಮಗೆ ಸಿಕ್ಕಾತೇನು?"