ಪುಟ:ಸ್ವಾಮಿ ಅಪರಂಪಾರ.pdf/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸ್ವಾಮಿ ಅಪರಂಪಾರ ೯೭

   ವೆಂಕೋಜಯೆಂದ:
   "ಓ. ಗುಪ್ತವಾಗಿ ಶಸ್ತ್ರಾಸ್ತ್ರಗಳನ್ನೂ ಸೈನಿಕರನ್ನೂ ಒಡೆಯರು ಕೊಡುತಾರೆ."
   "ಹಾಗಾದರೆ ಸಂತೋಷ."
   ಅದೇ ಸಮಯದಲ್ಲಿ ಮೈಸೂರಿನ ವರ್ತಕನೊಬ್ಬ ರಾಜನ ದರ್ಶನಕ್ಕೆ ಬಂದ. ಆತನ
 ಹೆಸರು ನೂನ್ ಲಾಲ್ ಬಾರ್ತಿ.
   ಚಿಕವೀರರಾಜನೆಂದ:
   "ಚನ್ನಬಸಪ್ಪನನ್ನೂ ಅವನ ಹೆಂಡತಿಯನ್ನೂ ಹೆಡೆ ಮುಡಿ ಕಟ್ಟಿ ಇಲ್ಲಿಗೆ ತರಬೇಕು
 ಅಂಬೋದು ನಮ್ಮ ಇಚ್ಛೆ. ನಮ್ಮ ಭಟರು ಬರುತ್ತಾರೆ. ನೀವು ಸಹಾಯ ಮಾಡತೀರಾ ?"
   ಆತ ಉತ್ತರಿಸಿದ : 
   "ನನ್ನ ಕೈಲಾದದು ಮಾಡೇನು, ಮಹಾಸಾಮಿ."
   "ಉತ್ತರ ಹಿಂದೂಸ್ಥಾನವನ್ನು ನೀವು ಬಲ್ಲಿರಾ?"
   "ನಾನು ಆ ಕಡೆಯವನೇ."
   "ಸಿಕ್ಖರ ಅರಸರಾದ ರಣಜಿತ್ ಸಿಂಗರು ಇಂಗ್ರೇಜಿಯವರ ಕಡುವೈರಿ ಅಂತ ಕೇಳಿದೇವೆ.”
   "అದು నిజ."
   "ಅವರ ಸಖ್ಯ ಬೆಳೆಸಬೇಕು ಅಂತ ನಮಗೆ ಅಪೇಕ್ಷೆಯಾಗಿದೆ. ನಮ್ಮ ರಾಯಭಾರಿ
 ಯಾಗಿ ಅಲ್ಲಿಗೆ ಹೋಗತೀರಾ ?"
   ಬಾರ್ತಿಯೆ೦ದ :
   "ಹೋಗಬಲ್ಲೆ. ಆದರೆ ನನಗಿಂತ ಹೆಚ್ಚು ಸುಲಭವಾಗಿ ಈ ಕೆಲಸ ಮಾಡುವಾತ ಒಬ್ಬ
 ಇದಾನೆ. ಲಾಹೋರ್ ಸಿಂಗ್  ಅಂತ. ಸಿಕ್ಕ."
   "ಈಗ ಅವನೆಲ್ಲಿ ಸಿಗಬೇಕು?"
   "ಅವನೂ ವ್ಯಾಪಾರಿಯೇ, ವೀರರಾಜಪೇಟೆಯಲ್ಲಿ ಇದಾನೆ. ಕರೆಸಬಹುದು."
   ...ಮಾರನೆಯ ದಿನವೇ ಲಾಹೋರ್ ಸಿಂಗ್ ರಾಜಾಜ್ಞೆಯಂತೆ ಮಡಕೇರಿಯನ್ನು
 ತಲಪಿದ. ಲಾಹೋರಿನವನಾದ ಕಾರಣ ಆ ಊರಿನ ಹೆಸರಿಂದಲೇ ಪ್ರಖ್ಯಾತನಾದವನು
 ಆತ. ಅರಸನ ಅಪೇಕ್ಷೆಯನ್ನು ತಿಳಿದಾಗ ಅವನೆಂದ:
   "ಲಾಹೋರ್ ದೂರ. ಆದರೂ ಹೋಗಿಬರತೇನೆ. ಕೆಲಸ ಬಾಳ ಜವಾಬ್ದಾರೀದು."
   "ನಮಗೆ ಬಾರ್ತಿಯವರು ಮಾಡುವ ಸಹಾಯಕ್ಕೆ ಪ್ರತಿಯಾಗಿ, ಕೊಡಗಿಗೆ ಬೇಕಾಗುವ
 ಸಾಮಾನನ್ನೆಲ್ಲ ಮುಂದೆ ಅವರಿಂದ ಕೊಳ್ಳಬೇಕೆಂದು ಮಾಡಿದೇವೆ. ಹಾಗೆಯೇ, ನಿಮಗೆ
 ಪ್ರತಿಫಲವಾಗಿ, ಇಲ್ಲಿನ ಕರಿಮೆಣಸನ್ನು ಹೊರಕ್ಕೆ ಒಯ್ದು ಮಾರುವ ಗುತ್ತಿಗೆಯನ್ನು
 ಕೊಡತೇವೆ" ಎಂದ ಚಿಕವೀರರಾಜೇಂದ್ರ.
   ಆ ಆಶ್ವಾಸನೆಯಿಂದ ಬಾರ್ತಿಯೂ ಲಾಹೋರ್ ಸಿಂಗನೂ ತೃಪ್ತರಾದಂತೆ ಕಂಡಿತು...
   ಬಿದನೂರಿನ ಪಾಳೆಯಗಾರರಲ್ಲೊಬ್ಬ-ಸೂರಪ್ಪ-ಆಂಗ್ಲರಿಗೆ ವಿರೋಧಿಯಾಗಿದ್ದ.
 ಆಂಗ್ಲ ಆಡಳಿತಗಾರರಿಗೆ ಅವನು ಒಂದೇ ಸಮನೆ ಕಿರುಕುಳ ಕೊಡುತ್ತಿದ್ದ. ಸಾಕಷ್ಟು ನೆರವು
 ದೊರೆತರೆ ಆತ ಬಂಡಾಯವೇಳುವುದೂ ಸಾಧ್ಯವಿತು.
   ಅವನೊಡನೆ ಸಖ್ಯ ಬೆಳಸುವ ಹೊಣೆಯನ್ನು ಆಪ್ತನಾದ ಬಸವನಿಗೆ ರಾಜ ಒಪ್ಪಿಸಿದ.
   ಇತ್ತ ಅತಿಥಿಗೃಹದಲ್ಲಿ ಕಾಸ್ಸಾಮೇಜರ್, ಬೋಪಣ್ಣನೊಡನೆ ಆಪಾಲೋಚನೆ ನಡೆಸಿದ.
   7