ಪುಟ:ಹಳ್ಳಿಯ ಚಿತ್ರಗಳು.djvu/೧೦೪

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
೯೦
ಹಳ್ಳಿಯ ಚಿತ್ರಗಳು

ನಮ್ಮ ಭಾವನವರ ಮುಖವು ಅವನ ಕಣ್ಣಿಗೆ ಬಿದ್ದಿತು. ಭಾವನವರೂ ಅವನನ್ನು ನೋಡಿದರು. ಆಗ ಅವರ ಮುಖದಲ್ಲಿ ತೋರಿದ ಗಾಬರಿಯನ್ನು ಹೇಳಬೇಕಾದುದೇ ಇಲ್ಲ. ಅವರು ಈ "ವಿಧವಾಪತಿ, ಪಿಶಾಚಿ" (ಕನ್ನಡದಲ್ಲಿ ಬಯ್ಯಲಿಲ್ಲ. ದೇವಭಾಷೆಯಲ್ಲಿ ಬಯ್ದರು) ಎಂದರು. ತಾನು ನೋಡಿದುದರಿಂದ ಅವರಿಗೆ ಅಸಮಾಧಾನವಾಯಿತೆಂದು ತಿಳಿದು ರೈತನು-

"ಉಣ್ತೀರಾ ಬುದ್ದಿ, ಉಣ್ಣಿ ಉಣ್ಣಿ” ಎಂದು ಹೇಳಿ ಹೊರಟು ಹೋದನು.

ಹತ್ತು ನಿಮಿಷ ನಮ್ಮ ಭಾವನವರು ಹುಚ್ಚನಂತೆ ಮಂಕಾಗಿ ಕುಳಿತು ಬಿಟ್ಟರು. ಶ್ರಾದ್ಧದ ದಿವಸ ಶೂದ್ರನು ಬ್ರಾಹ್ಮಣರ ಎಲೆಯನ್ನು ನೋಡಿಬಿಟ್ಟ. ಶ್ರಾದ್ಧವೆಲ್ಲ ಕೆಟ್ಟು ಹೋಯಿತು. ಪಿತೃಗಳೆಲ್ಲ ನಿರಾಶರಾಗಿ ಹೊರಟುಹೋಗುತ್ತಾರೆ, ಅಯ್ಯೋ ಎಂದು ಅವರು ದುಃಖಿಸಿದರು. ಶಾಸ್ತ್ರ ವಿದ್ವತ್ತಿನಲ್ಲಿ ನಮ್ಮ ತಂದೆಯವರು ನಮ್ಮ ಭಾವನವರಿಗಿಂತ ಒಂದು ಕೈ ಮೇಲು ಎಂದೇ ಹೇಳಬೇಕು. ಆದರೆ ಈಗ ತಾವೇ “ಬ್ರಾಹ್ಮಣ"ರಾಗಿ ಕುಳಿತುಬಿಟ್ಟಿದ್ದುದರಿಂದ ಅವರು ಯಾವ ಮಾತನ್ನೂ ಆಡಲು ಇಷ್ಟಪಡಲಿಲ್ಲ. ಭಾವನವರಿಗೆ ಶ್ರಾದ್ಧವು ಕೆಟ್ಟು ಹೋಯಿತಲ್ಲಾ ಏನು ಮಾಡಬೇಕೆಂಬ ಯೋಚನೆ ಹತ್ತಿಬಿಟ್ಟಿತು. ಸರಿ ಪುಸ್ತಕಗಳನ್ನು ಹುಡುಕುವುದಕ್ಕೆ ಪ್ರಾರಂಭ. ನಮ್ಮ ತಂದೆಯವರ ಪೆಟ್ಟಿಗೆಯಲ್ಲಿದ್ದ ಪುಸ್ತಕಗಳೆಲ್ಲಾ ಹೊರಕ್ಕೆ ಬಂದವು. ಓಲೆಯ ಪುಸ್ತಕಗಳೆಲ್ಲ ರಾಶಿರಾಶಿಯಾಗಿ ಹೊರಗೆ ಬಿದ್ದವು. "ಬ್ರಾಹ್ಮಣ"ರಿಗೆ ಹಸಿವು ಪ್ರಾಣಹೋಗುತ್ತಿದ್ದಿತು. ಆದರೆ ಈ ಶಾಸ್ತ್ರಾರ್ಥ ನಿರ್ಣಯವಾಗುವವರೆಗೆ, ಅವರು ಬಾಯಿಗೆ ಅನ್ನವನ್ನಿಡುವಂತಿರಲಿಲ್ಲ. ನಮ್ಮ ಮನೆಯಲ್ಲಿದ್ದ ಒಂದು ಪುಸ್ತಕದಲ್ಲಿಯೂ ನಮ್ಮ ಭಾವನವರಿಗೆ ಬೇಕಾದ ವಿಷಯ ದೊರಕಲಿಲ್ಲ. ಅವರು “ಬ್ರಾಹ್ಮಣ” ರನ್ನು ಎಲೆಯ ಮುಂದೆಯೇ ಕೂರಿಸಿ, ನಮ್ಮ ಚಿಕ್ಕಪ್ಪನವರ ಮನೆಗೆ ಓಡಿದರು. ಅಲ್ಲಿ ನೂರಾರು ಪುಸ್ತಕಗಳನ್ನು ತಿರಿವಿಹಾಕಿದುದಾಯಿತು. ಅನಂತರ ಆಚೆ ಬೀದಿ ಪುರೋಹಿತರ ಮನೆಗೆ ಓಡಿದರು. ಅಲ್ಲಿಂದ ೨೦೦ ಪುಸ್ತಕಗಳು ಬಂದವು. ಯಾವುದರಲ್ಲೂ ಶೂದ್ರನು "ಉಣ್ಣೆ ಉಣ್ಣಿ” ಎಂದರೆ ಏನು ಮಾಡಬೇಕೆಂಬ ವಿಷಯ ಬರೆದಿರಲಿಲ್ಲ. ಇಷ್ಟು ಹೊತ್ತಿಗೆ