ವಿಷಯಕ್ಕೆ ಹೋಗು

ಪುಟ:ಹಳ್ಳಿಯ ಚಿತ್ರಗಳು.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ನಗೆಯ ನೀತಿ
೯೯

ಅವನು ಬರುವ ವೇಳೆಗೆ ಕಿಟ್ಟುವು ಆಗಲೇ ಬಂದು ಕೊಠಡಿಯಲ್ಲಿ ಕುಳಿತುಬಿಟ್ಟಿದ್ದನು. ನರಹರಿಯು ಕಿಟ್ಟುವನ್ನು ಕುರಿತು “ಎಲ್ಲೂ ಗಾಳಿಸಂಚಾರ ಹೋಗುವುದಿಲ್ಲವೇ ಕಿಟ್ಟು” ಎಂದನು. ಕಿಟ್ಟುವು "ಬಹಳ ಹಸಿವಾಗಿದೆ. ನಡೆಯೋದಕ್ಕೆ ತ್ರಾಣವಿಲ್ಲ. ತಿನ್ನೊದಕ್ಕೇನಾದರೂ ತಿಂಡಿ ಸಿಕ್ಕಿದರೆ ಹೋಗಬಹುದು" ಎಂದನು. ನರಹರಿಯು ಮಾತನಾಡದೆ ಸುಮ್ಮನಾದನು.

ಅನಂತರ ಇಬ್ಬರೂ ಹೋಟಲಿಗೆ ಹೋಗಿ ಊಟಮಾಡಿಕೊಂಡು ಬಂದರು. ನರಹರಿಯು ಆ ದಿವಸವೆಲ್ಲಾ ತಿಂಡಿಯನ್ನೇ ತಿಂದಿರಲಿಲ್ಲ. ರಾತ್ರಿ ಪಾಠವನ್ನೂ ಓದಲಿಲ್ಲ. ೯ ಗಂಟೆಗೆ ಮಲಗಿಕೊಂಡುಬಿಟ್ಟ. ಅವನು ಮಲಗಿದ ಕಾಲು ಗಂಟೆಯಮೇಲೆ ದೀಪವನ್ನು ಆರಿಸಿ, ಕಿಟ್ಟುವೂ ಮಲಗಿಕೊಂಡ. ಕಿಟ್ಟುವು ನರಹರಿಗೆ ನಿದ್ರೆ ಬಂದಿರಬಹುದೆಂದು ತಿಳಿದು ತಾನೂ ನಿದ್ರಿಸಲು ಪ್ರಯತ್ನ ಪಡುತ್ತಿದ್ದ. ಇವನು ಎಚ್ಚರವಾಗಿರುವುದು ನರಹರಿಗೆ ಗೊತ್ತಾಗಲಿಲ್ಲ. ಅವನು ಮೆಲ್ಲಗೆ ಹಾಸಿಗೆಯಿಂದ ಎದ್ದ. ಎದ್ದವನೇ ಸದ್ದಾಗದಂತೆ ಒಂದು ಗಂಟನ್ನು ಬಿಚ್ಚಿದ. ಗಂಟಿನಿಂದ ತಿಂಡಿ ತೆಗೆದು ಕತ್ತಲೆಯಲ್ಲಿಯೇ ತಿನ್ನುವುದಕ್ಕೆ ಪ್ರಾರಂಭಿಸಿದ. ನರಹರಿಯು ತಿಂಡಿ ಅಗಿಯುವ ಸದ್ದು ಕಿಟ್ಟುವಿಗೆ ಕೇಳಿಸಿತು. ಅವನು ಮನಸ್ಸಿನಲ್ಲಿಯೇ ನಕ್ಕು, "ಇರಲಿ ನಿನಗೆ ಮಾಡ್ತೀನಿ ಅಂದುಕೊಂಡು” ಸುಮ್ಮನಾದ.

ಮಾರನೆ ದಿವಸವೂ ಕಿಟ್ಟುವು ನರಹರಿಯ ಜೊತೆಯನ್ನು ಬಿಟ್ಟು ಅಲ್ಲಾಡಲಿಲ್ಲ. ಆವತ್ತೂ ನರಹರಿಗೆ ಹಗಲೆಲ್ಲಾ ತಿಂಡಿಯನ್ನು ತಿನ್ನಲು, ಅವಕಾಶವೇ ದೊರೆಯಲಿಲ್ಲ. ಮೊದಲ ದಿವಸದಂತೆಯೇ, ರಾತ್ರಿ ಕಿಟ್ಟುವು ಮಲಗಿದ ಮೇಲೆ ಅವನಿಗೆ ನಿದ್ರೆ ಬಂದಿರಬಹುದೆಂದು ನಂಬಿಕೆಯಾದಾಗ ತಿಂಡಿಯ ಗಂಟನ್ನು ಬಿಚ್ಚಿದ. ಕಿಟ್ಟು ಎಚ್ಚರವಾಗಿದ್ದರೂ ಮಾತನಾಡದೆ ಸುಮ್ಮನೆ ಮಲಗಿದ್ದ. ಅರ್ಧರಾತ್ರಿಗೆ ಕಿಟ್ಟುವಿಗೆ ಮತ್ತೆ ಎಚ್ಚರವಾಯಿತು. ಎದ್ದು ಸದ್ದು ಮಾಡದೆ ದೀಪವನ್ನು ಹಚ್ಚಿದ. ನರಹರಿಯ ಗಂಟನ್ನು ಬಿಚ್ಚಿ ನೋಡಿದ. 'ಸಜ್ಜಪ್ಪ' ಮತ್ತು ಅರಳುಹಿಟ್ಟು ಇತ್ತು. ಕಿಟ್ಟುವಿಗೆ ಒಂದು ಯೋಚನೆ ಹೊಳೆಯಿತು. ಲಾಂದ್ರವನ್ನು ಹಿಡಿದುಕೊಂಡು ಹೊರಕ್ಕೆ ಬಂದ. ಮನೆಯವರು ಬಾಗಿಲಿನಲ್ಲಿ ಬೆರಣಿಯನ್ನು ಕೊಂಡು ಹಾಕಿದ್ದರು.