ಪುಟ:ಹಳ್ಳಿಯ ಚಿತ್ರಗಳು.djvu/೧೧೨

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
೯೮
ಹಳ್ಳಿಯ ಚಿತ್ರಗಳು

ಹಾಸನಕ್ಕೆ ತೆಗೆದುಕೊಂಡು ಹೋಗಲು, ತಿಂಡಿಗಳನ್ನು ಮಾಡಿಕೊಟ್ಟರು. ಹೊರಡುವಾಗ ಕಿಟ್ಟುವಿನ ತಾಯಿಯು "೩-೪ ದಿವಸ ಇಟ್ಟುಕೊಂಡು ತಿನ್ನು, ಯಾರಿಗೂ ಕೊಡಬೇಡ" ಎಂಬುದಾಗಿ ಹೇಳಿದರು. ಯಾರಿಗಾದರೂ ಕೊಡುವುದಿರಲಿ, ತಾನು ಇತರರನ್ನು ಕೇಳದಿದ್ದರೆ ಕಿಟ್ಟುವಿಗೆ ಸಾಕಾಗಿತ್ತು. ಹಾಸನಕ್ಕೆ ಬರುವಾಗ ದಾರಿಯಲ್ಲಿಯೇ ಮುಕ್ಕಾಲುಪಾಲು ತಿಂಡಿಯನ್ನು ಕಿಟ್ಟುವು ನರಹರಿಗೂ ಕೊಟ್ಟು ತಾನೂ ಮುಗಿಸಿದನು. ಹಾಸನಕ್ಕೆ ೧೧ ಗಂಟೆಗೆ ಹೋಗಿ, ಸ್ಕೂಲಿನಿಂದ ಒಂದೂವರೆ ಗಂಟೆಯ ವಿರಾಮದಲ್ಲಿ ಕೊಠಡಿಗೆ ಹಿಂದಿರುಗಿ, ಉಳಿದ ತಿಂಡಿಯನ್ನು ಬಲಿಹಾಕಿಬಿಟ್ಟನು. ಗಂಟಿನಲ್ಲಿ ತಿಂಡಿ ಇರುವವರೆಗೆ ಅವನಿಗೆ ಸಮಾಧಾನವಿರಲಿಲ್ಲ. ಅನಂತರ ನಿರ್‍ಯೋಚನೆಯಾಯಿತು.

ಒಂದು ಗಂಟೆಯ ವಿರಾಮದಲ್ಲಿ ನರಹರಿ ಬಂದು ನೋಡಿದ. ಕಿಟ್ಟು ಕೊಠಡಿಯಲ್ಲಿಯೇ ಕುಳಿತಿದ್ದ. ನರಹರಿಯು ಬಂದುದನ್ನು ಕಂಡು ಕಿಟ್ಟುವು

"ಬಹಳ ಹಸಿವಾಗುತ್ತೆ ಕಣೋ, ಮಧ್ಯಾಹ್ನ ಹಾಳಾದ್ದು ಅಡಿಗೆ ಚೆನ್ನಾಗಿರಲಿಲ್ಲ, ಹೊಟ್ಟೆ ತುಂಬ ಊಟಮಾಡಲಿಲ್ಲ” ಎಂದ.

ನರಹರಿಗೆ ಗಾಬರಿಯಾಯಿತು. "ಇದೇನು ಇವನು ನನ್ನ ತಿಂಡಿಗೆ ಏಟುಹಾಕ್ತಾನೆ” ಎಂದುಕೊಂಡು, “ಊರಿಂದ ತಂದ ತಿಂಡಿ ಏನಾಯ್ತು" ಎಂದ.

ಕಿಟ್ಟುವು ಜಿಗುಪ್ಪೆಯಿಂದ "ಏನ್ಮಹಾತಿಂಡಿ. ಎಲ್ಲೋ ಒಂದ್ಚೂರು ತಂದಿದ್ದೆ, ದಾರೀಲೇ ತಿಂದ್ಹಾಕಿಬಿಟ್ಟೆ” ಎನ್ನುತ್ತಾ, ತಿಂಡಿ ಕಟ್ಟಿದ್ದ ಬರಿದಾದ ಚೌಕವನ್ನು ಅವನ ಕಡೆಗೆ ಎಸೆದನು. ನರಹರಿಯು ಮಾತನಾಡಲಿಲ್ಲ. ಅವನು ಮಹಾ ಜಿಪುಣ, ತಿಂಡಿಯ ಗಂಟನ್ನೇ ಬಿಚ್ಚಲಿಲ್ಲ. ಬಿಚ್ಚಿದರೆ ಎಲ್ಲಿ ಕಿಟ್ಟುವಿಗೆ ಕೊಡಬೇಕಾಗುವುದೋ? ಎಂಬ ಭಯ. ಕಿಟ್ಟುವೂ ಕೂತ ಜಾಗಾಬಿಟ್ಟು ಏಳಲೇ ಇಲ್ಲ. ನರಹರಿಯು ೨-೩ ಸಲ ಅವನ ಕಡೆಗೆ ಕೋಪದಿಂದ ನೋಡಿದ. ಕಿಟ್ಟುವು ಅದೊಂದನ್ನೂ ಲಕ್ಷ್ಯಮಾಡಲಿಲ್ಲ. ೨ ಗಂಟೆ ಆಗಿಹೋಯಿತು. ಇಬ್ಬರೂ ಸ್ಕೂಲಿಗೆ ಹೊರಟುಹೋದರು.

೫ ಗಂಟೆಗೆ ಸ್ಕೂಲನ್ನು ಬಿಟ್ಟ ಕೂಡಲೆ ನರಹರಿಯು ಬೇಗ ಬೇಗ ಕೊಠಡಿಗೆ ಬಂದನು. ಅವನ ಜ್ಞಾನವೆಲ್ಲಾ ತಿಂಡಿಯ ಮೇಲೆಯೇ ಇದ್ದಿತು.