ನೋಡುತ್ತಿರುವಾಗ, ಪೈಲ್ವಾನನು ಅವನನ್ನು “ಹಸೆ ಮಣೆಗೆ ಬಾ” ಎಂದು ಗರ್ಜಿಸಿದನು. ಶೀನಪ್ಪನು "ನೀನೆ ಹೋಗು ಹಸೆ ಮಣೆಗೆ, ನಾನೇನು ಮದವಣಿಗನೆ ಹಸೆ ಮಣೆಗೆ ಬರುವುದಕ್ಕೆ?" ಎಂದನು. ಪೈಲ್ವಾನನು ಕಣ್ಣನ್ನು ಕೆಂಪಗೆ ಮಾಡಿಕೊಂಡು “ನೀನು ಮದವಣಿಗ ಹೌದು. ನಿನಗೇ ಈವತ್ತು ಮದುವೆ" ಎಂದನು. ಕೇಳಿ ಶೀನಪ್ಪನಿಗೆ ಸಿಡಿಲು ಬಡಿದಂತಾಯಿತು.
ಪೈಲ್ವಾನನ ಮುಖವನ್ನು ನೋಡಿದ ಕೂಡಲೆ, ಅವನು ವಿನೋದಕ್ಕಾಗಿ ಹೇಳಲಿಲ್ಲವೆಂಬುದು ಗೊತ್ತಾಯಿತು. ಅವನ ಮಾತಿನ ಜೊತೆಯಲ್ಲಿಯೇ ಹಸೆಯ ಮಣೆಯು ಸಿದ್ಧವಾಯಿತು. ಶೀನಪ್ಪನಿಗೆ ಮಂಕು ಕವಿದುಕೊಂಡಿತು. ತಾನು ಎಲ್ಲಿರುವೆನೆಂಬುದೇ ಅವನಿಗೆ ಗೊತ್ತಾಗಲಿಲ್ಲ. ಇದೇನು ಸ್ವಪ್ನವೋ ಎಚ್ಚರವೋ ಎಂದು ಅವನು ತನ್ನನ್ನು ತಾನೇ ಕೇಳಿಕೊಳ್ಳಹತ್ತಿದನು. ಪೈಲ್ವಾನನು ಅವನ ಕೈಯನ್ನು ಹಿಡಿದುಕೊಂಡು "ಹಸೆಯ ಮಣೆಗೆ ಬರುತ್ತೀಯೋ ಇಲ್ಲವೊ” ಎಂದನು. ಅವನ ಹಿಡಿತವು ಕಬ್ಬಿಣದ ಮುಷ್ಟಿಯಂತಿದ್ದಿತು. ಶೀನಪ್ಪನ ಕೈ ಬಹಳ ನೋಯುವುದಕ್ಕೆ ಪ್ರಾರಂಭವಾಯಿತು. ಮರಣ ದಂಡನೆಗೆ ಗುರಿಮಾಡಲ್ಪಟ್ಟವನಂತೆ ಅವನು ಅತ್ತನು. ಮುಂದೆ ತನ್ನ ಮಾವನಾಗುವನನ್ನು ಗೋಗರೆದನು. ಪೈಲ್ವಾನನನ್ನು ಬೈದು ಗದರಿಸಿದನು. “ನಿಮ್ಮ ಹುಡುಗಾಟ ಇಷ್ಟು ಸಾಕು. ನಿಮ್ಮ ಪುಣ್ಯಕ್ಕೆ ಇನ್ನು ಬಿಟ್ಟುಬಿಡಿ" ಎಂದು ಬೇಡಿದನು. ಇವನ ಮಾತಿಗೆ ಯಾರೂ ಗಮನವನ್ನು ಕೊಡಲಿಲ್ಲ. ಇವನ ಮೇಲೆ ಇಟ್ಟ ಕೆಂಗಣ್ಣನ್ನು ಪೈಲ್ವಾನನು ಆಚೆಗೆ ತಿರುಗಿಸಲಿಲ್ಲ. ಇವನ ಕೈ ಅವನ ಕೈಯಲ್ಲಿಯೇ ಸೆರೆ ಸಿಲುಕಿಬಿಟ್ಟಿತು. ಚಿಕ್ಕ ಹುಡುಗಿಯರು ಸುತ್ತಲೂ ನಗುತ್ತಾ ಇದ್ದರು. ಒಬ್ಬಿಬ್ಬರು ಹೆಂಗಸರು ಅವನಿಗೆ ಕೇಳುವಂತೆಯೇ “ಇವನಿಗೇನು ರೋಗ, 'ಕರೆದು ಹೆಣ್ಣು ಕೊಟ್ಟರೆ ಮೊಲ್ಲೊಗರ ಬಂತು' ಅ೦ತ ಗೊಳೋ ಅಂತ ಅಳ್ತಾನೆ!” ಎಂದರು. ಇದನ್ನೆಲ್ಲಾ ಕೇಳಿ ಶೀನಪ್ಪನಿಗೆ ದು:ಖವೂ ಕೋಪವೂ ಉಂಟಾಯಿತು. ಆ ಮನೆಯನ್ನು ಬಿಟ್ಟು ಬಿಡಬೇಕೆಂದು ಅವನು ಪ್ರಯತ್ನ ಪಟ್ಟನು. ಧಾಂಡಿಗನು ಕೈಯನ್ನು ಹಿಡಿದುಕೊಂಡಿದ್ದುದರಿಂದ ಅದು ಸಾಧ್ಯವಾಗಲಿಲ್ಲ. ಗಟ್ಟಿಯಾಗಿ ಕಿರಿಚಿ