ವಾಗಿ ಯಾಕೆ ತಿರುಗುತ್ತಿದಾನೆ" ಎಂದೂ ಮುಂತಾಗಿ ಅವನು ಯೋಚಿಸಲಾರಂಭಿಸಿದನು. ಆದರೆ ಅಷ್ಟು ಹೊತ್ತಿಗೆ ಪೈಲ್ವಾನನು ಪುಸ್ತಕಗಳೊಂದಿಗೆ ಹಿಂದಿರುಗಿದುದರಿಂದ, ಮುಂದಕ್ಕೆ ಯೋಚನೆಮಾಡದೆ ಅವರ ಕೂಡ ನಡೆದನು. ನೋಡುವವರಿಗೆ ಅವನು ನಾಲ್ಕು ಪೋಲಿಸ್ ಜವಾನರ ಮಧ್ಯದಲ್ಲಿ ಹೋಗುತ್ತಿದ್ದ ಖೈದಿಯಂತೆ ತೋರುತ್ತಿದ್ದನು. ಶೀನಪ್ಪನಿಗೇನೊ ಆ ರೀತಿ ತೋರದೆ ಇದ್ದಿರಬಹುದು. ಆದರೆ ಅವನಿಗೂ ಕೂಡ ಈ ದೃಶ್ಯವು ವಿಚಿತ್ರವಾಗಿಯೇ ಕಂಡಿತು.
ಮನೆಯನ್ನು ಮುಟ್ಟಿದ ಕೂಡಲೇ ಶೀನಪ್ಪನ ಅನುಮಾನವು ಮತ್ತಷ್ಟು ಹೆಚ್ಚಾಯಿತು. ಮನೆಯ ಬಾಗಿಲಲ್ಲಿ ಓಲಗದ ಧ್ವನಿಯು ಕೇಳಲೇ ಇಲ್ಲ. ಅಲ್ಲಿ ವಾದ್ಯಗಾರರು ಇರಲೇ ಇಲ್ಲ. ಅವನು ಮನೆಯ ಯಜಮಾನರನ್ನು ಕುರಿತು, “ಯಾಕೆ ಓಲಗವೆಲ್ಲಿ?” ಎಂದನು. ತಕ್ಷಣವೇ ಪೈಲ್ವಾನನು “ಓಲಗವು ಗಂಡಿನ ಬಿಡಾರಕ್ಕೆ ಹೋಗಿದೆ" ಎಂದನು. ಮದುವೆಯ ಸಂಭ್ರಮವೂ ಗದ್ದಲವೂ ಮನೆಯಲ್ಲಿ ತೋರಲೇ ಇಲ್ಲ. ಮೊದಲನೇ ದಿವಸ ಆ ಮನೆಗೆ ಕಟ್ಟಿದ್ದ ತೋರಣಗಳು ಈಗ ಮನೆಯ ಮೌನವನ್ನು ಹಾಸ್ಯ ಮಾಡುವಂತೆ ಇದ್ದುವು.
ಮನೆಯೊಳಕ್ಕೆ ಹೋದ ಕೂಡಲೆ ಶೀನಪ್ಪನ ತಲೆಗೆ ಎಣ್ಣೆಯನ್ನು ತಂದು ಇಟ್ಟರು. ಅವನು ತಪ್ಪು ಮಾಡಿದ ಹುಡುಗನಂತೆ ಕಣ್ಣುಬಿಟ್ಟನು. "ನನ್ನ ತಲೆಗೆ ಯಾಕೆ ಎಣ್ಣೆ?” ಎಂದನು. ಪೈಲ್ವಾನನು “ನಿನಗೆ ಅಭ್ಯಂಜನ ಸ್ನಾನ” ಎಂದನು. ಶೀನಪ್ಪನು “ನಿನ್ನ ಅಭ್ಯಂಜನ ಸ್ನಾನ ಯಾರಿಗೆ ಬೇಕಾಗಿತ್ತು, ನೆನ್ನೆ ತಾನೆ ಅಗಸನಿಂದ ಬಂದ 'ಕೋಟು' ಎಣ್ಣೆಯಾಗಿ ಹಾಳಾಯಿತು" ಎಂದು ಹುಬ್ಬನ್ನು ಗಂಟುಹಾಕಿದನು. ಪೈಲ್ವಾನನು "ಆ ಕೋಟು ಹೋದರೆ ಹೊಸ ಕೋಟು ಕೊಡುತ್ತೇನೆ” ಎಂದು ಒಂದು ಸಾರಿ ಕಣ್ಣುಬಿಟ್ಟನು. ಸದ್ಯಕ್ಕೆ ಪೈಲ್ವಾನನೇ ಮನೆಯ ಆಡಳಿತವನ್ನೆಲ್ಲಾ ವಹಿಸಿಕೊಂಡಿರುವಂತೆ ತೋರಿತು. ಶೀನಪ್ಪನಿಗೆ ಅವನ ಕಣ್ಣನ್ನು ನೋಡಿ ಗಾಬರಿಯಾಯಿತು. “ಇವನ ಮನೆ ಹಾಳಾಗ, ಏನು ಬೇಕಾದರೂ ಆಗಲಿ, ಸದ್ಯ ಏಟು ತಪ್ಪಿದರೆ ಸಾಕು" ಎಂದು ಅವನು ಅಭ್ಯಂಜನ ಮಾಡಿಕೊಂಡನು. ಮುಂದೆ ಏನು ಬರುತ್ತೊ ಎಂದು ಅವನು ಕೌತುಕದಿಂದ