ಪುಟ:ಹಳ್ಳಿಯ ಚಿತ್ರಗಳು.djvu/೧೨೩

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
೧೦೯
ಬಲವಂತದ ಮದುವೆ

ಹೊರಗೆ ಬಂದುದನ್ನು ಕಂಡು ಆ ಪೈಲ್ವಾನನಂತಿದ್ದವನು “ಬಾಯ್ಯ, ಶ್ರೀನಿವಾಸಯ್ಯಂಗಾರ್‍ಯ. ಮದುವೆಯ ದಿವಸವೂ ನಿನಗೆ ಸ್ಕೂಲಿನ ಗಲಾಟೆಯೇ. ಮನೆಯಲ್ಲಿ ಓಡಾಡಿಕೊಂಡು ನಮಗೂ ಸ್ವಲ್ಪ ಸಹಾಯ ಮಾಡುವಿಯಂತೆ" ಎಂದನು. ಶೀನಪ್ಪನಿಗೆ ಬಹಳ ಸಂತೋಷವಾಯಿತು. ತಾನೇನೋ ದೊಡ್ಡ ಮನುಷ್ಯ ಎಂದು ನಾಲ್ಕು ಜನವೂ ಇಲ್ಲಿಗೆ ಬಂದು ಕರೆಯುತ್ತಾರೆ. ಯಾತಕ್ಕೆ ಹೋಗಿ ಸಹಾಯ ಮಾಡಬಾರದು. ಹೇಗಾದರೂ ಸ್ಕೂಲಿನಿಂದ ರಜ ತೆಗೆದುಕೊಳ್ಳಲು ಅವಕಾಶ ಸಿಕ್ಕಿತೆಂದರೆ ಸಾಕೆಂದು ಅವನ ಅಭಿಪ್ರಾಯ. "ಆಗಲಿ" ಎಂದ. ವರನ ತಾಯಿ ಸತ್ತು ಹೋದದ್ದೂ, ಮದುವೆಯು ನಿಂತುಹೋದದ್ದೂ, ವರನು ಹೇಳದೆ ಕೇಳದೆ ಓಡಿಹೋದದ್ದೂ, ಒಂದೂ ಇವನಿಗೆ ಗೊತ್ತಿರಲಿಲ್ಲ. ಬೆಳಿಗ್ಗೆ ಕೊಠಡಿಯನ್ನು ಬಿಟ್ಟವನು ಸ್ನೇಹಿತನ ರೂಮಿಗೆ ಹೋಗಿ 'ಹೋಮ್ ವರ್ಕ್' ಮಾಡಿಕೊಂಡು ವಾರದ ಮನೆಯಲ್ಲಿ ಊಟಮಾಡಿ, ನೆಟ್ಟಗೆ ಸ್ಕೂಲಿಗೆ ಬಂದಿದ್ದ. ಉತ್ಸಾಹದಿಂದ, “ಮೇಷ್ಟರಿಗೆ ಹೇಳಿ ರಜಾ ತೆಗೆದುಕೊಂಡು ಬರುತ್ತೇನೆ” ಎಂದು ಹೊರಟ. ಬಂದಿದ್ದ ನಾಲ್ಕು ಜನರೂ ಒಬ್ಬರ ಮುಖವನ್ನೊಬ್ಬರು ನೋಡಿದರು. ಎಲ್ಲರ ಮುಖದಲ್ಲಿಯೂ ಅನಿಶ್ಚಯವು ಒಡೆದು ತೋರುತ್ತಿದ್ದಿತು. ಕೊನೆಗೆ ಪೈಲ್ವಾನನಂತಿದ್ದವನು “ಏನೂ ಬೇಡ, ನೀನು ಇಲ್ಲಿಯೇ ಇರು. ನಾನೇ ಹೋಗಿ ರಜ ಹೇಳಿ ಬರುತ್ತೇನೆ” ಎಂದು ಹೊರಟನು. ಶೀನಪ್ಪನು "ಪುಸ್ತಕಗಳನ್ನೆಲ್ಲಾ ತರಬೇಕು, ನಾನೇ ಹೋಗಿ ಬರುತ್ತೇನೆ. ಒಂದೇ ನಿಮಿಷ" ಎಂದನು. ಪೈಲ್ವಾನನು ಪುಸ್ತಕಗಳನ್ನೂ ನಾನೇ ತರುತ್ತೇನೆ, ಎಂಬುದಾಗಿ ಹೇಳಿ ಹೊರಟುಹೋದನು. ಮತ್ತೊಬ್ಬ ಅಯ್ಯಂಗಾರಿಯು “ಪುಸ್ತಕ ಹೋದರೆ ಹೋಗಲಿ, ಎರಡು 'ನೋಟ್ ಬುಕ್ಕು' ತಾನೆ?” ಎಂದನು.

ಶೀನಪ್ಪನಿಗೆ ಆ ಮಾತು ವಿಚಿತ್ರವಾಗಿ ತೋರಿತು. “ಇವರಿಗೆ ಮದುವೆ ಸಂಭ್ರಮವಾದರೆ ನನ್ನ ಪುಸ್ತಕ ಯಾತಕ್ಕೆ ಹೋಗಬೇಕು?" ಎಂದು ಅವನು ಯೋಚಿಸಿದನು. “ತನ್ನನ್ನು ಕರೆಯುವುದಕ್ಕೆ ನಾಲ್ಕು ಜನ ಯಾತಕ್ಕೆ ಬರಬೇಕು? ಮನೆಯ ಯಜಮಾನ ಮಗಳ ಮದುವೆಯಲ್ಲಿ ತೊಡಗಿರುವುದನ್ನು ಬಿಟ್ಟು, ಏನೂ ಕೆಲಸವಿಲ್ಲದವನಂತೆ ಇಷ್ಟು ವಿರಾಮ