ಬೋರನ ಮಾತು ಮುಗಿಯುವುದರೊಳಗಾಗಿ ದೂರದಲ್ಲಿ ರಸ್ತೆಯಲ್ಲಿ ನಮ್ಮ ಕಣ್ಣಿಗೆ ಬಸ್ ಕಂಡಿತು. ಬೋರನು “ಅದೇನು ಸ್ವಾಮಿ? ಪಿಶಾಚಿಯಂತೆ ಬರುತ್ತಿದೆ. ಹಾವಿನಂತೆ ರಸ್ತೆಯ ಈಚೆಗೂ ಆಚೆಗೂ ನಲಿದಾಡುತ್ತ ಬರುತ್ತಿದೆಯಲ್ಲ?" ಎಂದನು. ನಾನು “ಇದು ಬಸ್" ಎಂದೆ. ನನಗೆ ಬಹಳ ಆನಂದವಾಯಿತು. “ನಮ್ಮೂರಿಗೂ ಒಂದು ಬಸ್ ಬಂದಿತು. ನಾಗರೀಕತೆಯ ತುದಿಯನ್ನು ಏರಿಬಿಟ್ಟೆವು ನಾವು" ಎಂದು ನಾನು ಕುಣಿದಾಡತೊಡಗಿದೆನು.
ನಮ್ಮೆದುರಿಗೆ ಬಂದಮೇಲೆ ಕೂಡ, ಅದು ಬಸ್ ಎಂದು ತಿಳಿಯುವುದೇ ನನಗೆ ಕಷ್ಟವಾಯಿತು. ಪ್ರಯಾಣಿಕರು ಕುಳಿತುಕೊಳ್ಳುವುದಕ್ಕಾಗಿ ಎಂದು ಅದನ್ನು ಮಾಡಿದ್ದರೂ ಅದಕ್ಕೆ ಕಮಾನಾಗಲಿ ಮುಸುಕಾಗಲಿ ಇರಲಿಲ್ಲ. ಅದೊಂದು ದೊಡ್ಡ ಒಡ್ಡರ ಬಂಡಿಯಂತೆ ತೋರುತ್ತಿದ್ದಿತು. ಅದರ ಯಜಮಾನನು ಅದನ್ನು ಕೊಂಡುಕೊಂಡ ಕತೆಯೂ ಬಹಳ ವಿನೋದವಾಗಿದೆ. ಸಕಲೇಶಪುರಕ್ಕೆ ಹೋಗುವಾಗ ಆ ಬಸ್ಸು ದಾರಿಯಲ್ಲಿ ಎಲ್ಲೋ ಒಂದು ಹಳ್ಳಕ್ಕೆ ಬಿದ್ದು ಹೋಯಿತಂತೆ. ದೇವರದಯದಿಂದ ಯಾರಿಗೂ ಪೆಟ್ಟಾಗಲಿಲ್ಲ. ಮೇಲಕ್ಕೆ ಎತ್ತುವುದಕ್ಕಾಗದೆ ಅದು ೬ ತಿಂಗಳು ಆ ಹಳ್ಳದಲ್ಲಿಯೇ ಬಿದ್ದಿದ್ದಿತಂತೆ. ಕೊನೆಗೆ ಬಸ್ಸಿನ ಒಡೆಯನು "ಇದನ್ನು ಯಾರು ಬೇಕಾದರೂ ಎತ್ತಿಕೊಂಡು ಉಪಯೋಗಿಸಿಕೊಳ್ಳಿ, ನನ್ನದು ಅಭ್ಯಂತರವಿಲ್ಲ" ಎಂದನಂತೆ. ಕೂಡಲೆ ಈಗಿನ ಬಸ್ಸಿನ ಈ ಯಜಮಾನನು ಅದಕ್ಕೆ ಒಂದು ಹಗ್ಗವನ್ನು ಕಟ್ಟಿ, ೨ ಜೊತೆ ಎತ್ತುಗಳಿಂದ ಬಹಳ ಕಷ್ಟಪಟ್ಟು ಮೇಲಕ್ಕೆ ಎಳಸಿದನಂತೆ, ಅದರ 'ಸೀಟು, ಕಮಾನು' ಮುಂತಾದುವುಗಳನ್ನೆಲ್ಲ ಗೆದ್ದಲು ತಿಂದುಹಾಕಿಬಿಟ್ಟಿದ್ದಿತು. ಏನೋ ಸ್ವಲ್ಪ 'ರಿಪೇರಿ' ಮಾಡಿ ಹಳ್ಳಿಯವರಿಗೆ ಇರಲಿ ಎಂದು ನಮ್ಮೂರಿಗೆ ಇಟ್ಟುಬಿಟ್ಟ.
ಬಸ್ಸಿನ ಧ್ವನಿ ಸುಮಾರು ೪ ಮೈಲು 'ಕಿರೋ' ಎಂದು ಕೇಳುತ್ತದೆ. ನಮ್ಮ ಹಳ್ಳಿಯಲ್ಲಿ ಯಾರಾದರೂ ಗಟ್ಟಿಯಾಗಿ ಕಿರಚಿದರೆ “ಬಸ್ಸು ಕಿರಚಿದಂತೆ ಅವನು ಕಿರಚುತ್ತಾನೆ” ಎನ್ನುತ್ತಾರೆ. ಒಂದು ದಿವಸ ನಾನು ನಮ್ಮೂರ ಈ ಬಸ್ಸಿನಲ್ಲಿ ಹಾಸನಕ್ಕೆ ಹೋಗಬೇಕಾಯಿತು. ನಾನು ಕುಳಿತಿದ್ದ ಸ್ಥಳದಲ್ಲಿ, ಬಸ್ಸಿನ ನೆಲದಮೇಲೆ ಹಾಸಿದ್ದ ಹಲಗೆ ತೂತುಬಿದ್ದಿದ್ದಿತು.