ಪುಟ:ಹಳ್ಳಿಯ ಚಿತ್ರಗಳು.djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೧೬

ಹಳ್ಳಿಯ ಚಿತ್ರಗಳು

ಬಸ್ಸು ಹೊರಟ ಕೂಡಲೇ ಅದರಿಂದ ಹೊಗೆಯು ಹೊರಡಲು ಪ್ರಾರಂಭವಾಯಿತು. ಹೊಗೆಯು ಬಸ್ಸನ್ನೆಲ್ಲಾ ತುಂಬಿಕೊಂಡಿತು. ನಾನು ಧರಿಸಿಕೊಂಡು ಹೋಗಿದ್ದ ಬಿಳಿಯ ಬಟ್ಟೆಗಳು, ನನ್ನ ಮೈ, ಎಲ್ಲಾ ರೈಲ್ವೆ ಇಂಜಿನ್ ಡ್ರೈವರನ ಮೈಯಂತೆ, ಕಪ್ಪಾಗಿ ಹೋದುವು. ಹಾಸನದಲ್ಲಿ ಈ ಕಪ್ಪನ್ನು ತೊಳೆಯುವುದಕ್ಕೆ ಒಂದು ಹಂಡೆ ನೀರನ್ನು ಎಲ್ಲಿ ಒದಗಿಸುವುದೆಂಬುದೇ ನನಗೆ ಯೋಚನೆಯಾಯಿತು. ಆಗ ನನ್ನ ಮುಖವನ್ನು ಯಾರಾದರೂ ನೋಡಿದರೆ ಗಾಬರಿಯಿಂದ ಹೆದರಿ ಓಡುತ್ತಿದ್ದರು. ಸ್ವತಃ ನನಗೇ ನನ್ನ ಗುರುತು ಹತ್ತಲಿಲ್ಲ. ಬಸ್ಸಿನಲ್ಲಿ ನಾನು ಕುಳಿತುದು ಅದೇ ಮೊದಲನೆಯ ಸಲವಾದುದರಿಂದ, ಈ ನನ್ನ ವೇಷವೂ ಅದರ ಆನಂದಕ್ಕೆ ಸೇರಿದುದೇನೋ? ಎಂದುಕೊಂಡೆ.

೨.ವ್ಯಾಸ್ಕೊಡಗಾಮನು ಏಜೆಂಟ್ ಆದುದು

ನಮ್ಮ ಊರ ಬಸ್ಸಿಗೆ ಏಜೆಂಟುಗಳ ಕಾಟ ಹೇಳಿತೀರದು. “ದೇಹಕ್ಕಿಂತ ಬಾಲವೇ ಭಾರ"ವೆಂಬಂತೆ ನಮ್ಮೂರಿನ ಬಸ್ ಯಜಮಾನನಿಗೆ ದೊರೆಯುವ ಪ್ರಯಾಣಿಕರಿಗಿಂತ ಟಿಕೆಟ್ ಮಾರುವ ಏಜೆಂಟುಗಳ ಸಂಖ್ಯೆಯೇ ಹೆಚ್ಚು. ಒಂದು ಬಸ್ಸಿಗೆ ೪ ಏಜೆಂಟುಗಳು. ಒಂದುಸಲ ಈ ಏಜೆಂಟುಗಳ ಸಂಖ್ಯೆಯು ಎಂಟಕ್ಕೆ ಏರಿತ್ತು. ಅನೇಕ ದಿವಸ ಪ್ರಯಾಣಿಕರು ದೊರಕುವುದೇ ಕಷ್ಟವಾದರೂ, ಬಸ್ಸೇನೋ ಈ ಏಜೆಂಟುಗಳಿಂದ ತುಂಬಿಹೋಗುತ್ತದೆ. ಸಾಮಾನ್ಯವಾಗಿ ಯಾರು ಯಾರು ದುಡ್ಡು ಕೊಟ್ಟು ಪ್ರಯಾಣಮಾಡಬೇಕೊ, ಅಂತವರೆಲ್ಲಾ ಏಜೆಂಟುಗಳೇ ಆಗಿಬಿಟ್ಟರೆ ಪಾಪ, ಬಸ್ಸಿನ ಯಜಮಾನನ ಗತಿ ಏನು? ಮೊದಲು ನಮ್ಮೂರ 'ವ್ಯಾಸ್ಕೊಡಗಾಮ' ಇದಕ್ಕೆ ಏಜೆಂಟ್ ಆದ. ಓಹೊ ಮರೆತೆ, ವ್ಯಾಸ್ಕೊಡಗಾಮನೆಂದರೆ ಯಾರೆಂಬುದನ್ನೇ ನಿಮಗೆ ತಿಳಿಸಲಿಲ್ಲ. ಪೋರ್ಚುಗೀಸರು ಇಲ್ಲಿ ಎಲ್ಲಿ ಬಂದರೆಂಬುದಾಗಿ ಯೋಚಿಸಬೇಡಿ. ಇವನಿಗೆ 'ವ್ಯಾಸ್ಕೊಡಗಾಮ'ನೆಂದು ಹೆಸರು ಬರಲು ಕಾರಣವನ್ನು ಹೇಳುತ್ತೇನೆ. ನಮ್ಮ ಊರು ಮಲೆನಾಡ ಹಳ್ಳಿ. ಅಲ್ಲಿ ಹಿಂದಲಿಂದಲೂ ಅಂಗಡಿ ಯಾವುದೂ ಇರಲಿಲ್ಲ. ಗ್ರಾಮಸ್ಥರು ಯಾವ ಸಾಮಾನು ಬೇಕಾದರೂ, ಸುತ್ತಮುತ್ತಲ ಸಂತೆಗಳಿಗೆ ಹೋಗಿ