ಪುಟ:ಹಳ್ಳಿಯ ಚಿತ್ರಗಳು.djvu/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಮ್ಮ ಊರ ಬಸ್ಸು

೧೧೭

ತರುತ್ತಿದ್ದರು. ಆಗ ನಮ್ಮ ಊರಿನಲ್ಲಿ ಮೊದಲು ನಿಂಗನು ವ್ಯಾಪಾರವನ್ನು ಪ್ರಾರಂಭಿಸಿದ. ವ್ಯಾಪಾರಕ್ಕಾಗಿ ಹಿಂದೂ ದೇಶಕ್ಕೆ ಮೊದಲು ಬಂದವನು ವ್ಯಾಸ್ಕೊಡಗಾಮ ತಾನೆ. ಆದುದರಿಂದ, ಅದಾವುದೋ ತರ್ಕದಿಂದ ಈ ಎರಡು ಹೆಸರುಗಳನ್ನೂ ಒಟ್ಟಾಗಿ ಸೇರಿಸಿ ಹುಡುಗರು ನಿಂಗನನ್ನು 'ವ್ಯಾಸ್ಕೊಡಗಾಮ'ನೆಂದು ಕರೆಯಲು ಪ್ರಾರಂಭಿಸಿಬಿಟ್ಟರು. ಈಚೆಗೆ ಅವನಿಗೆ ಆ ಹೆಸರೇ ನಿಂತುಹೋಯಿತು. ಇರಲಿ. ಈ ವ್ಯಾಸ್ಕೊಡಗಾಮನಿಗೆ ಸಾಮಾನು ತರುವುದಕ್ಕೆ ಪದೇ ಪದೇ ಗಾಡಿಯ ಆವಶ್ಯಕತೆಯಿದ್ದುದರಿಂದ, ಅವನು ಉಪಾಯವಾಗಿ ಮೊದಲು ಏಜೆಂಟ್ ಆದನು. ಇದರಿಂದ ಅವನಿಗೆ ಹಾಸನಕ್ಕೆ ಹೋಗುವ ಪ್ರಯಾಣದ ಖರ್ಚು ಪೂರ್ತಾ ಉಳಿದು ಹೋಗುತ್ತಿದ್ದಿತು. ಎಷ್ಟು ಸ್ವಲ್ಪ ಸಾಮಾನು ಬೇಕಾದರೂ ಬಸ್ಸಿನಲ್ಲಿ ಹೋಗಿ ತಂದುಬಿಡುತ್ತಿದ್ದನು. ಒಂದು ದಿವಸ ನಾನೂ ಅವನ ಜೊತೆಯಲ್ಲಿ ಹಾಸನಕ್ಕೆ ಹೋದೆ. ಅವನು ಅಲ್ಲಿ ಒಂದು ಒಳ್ಳೆಣ್ಣೆ ಡಬ್ಬಿ ಕೊಂಡು ಬಸ್ಸಿನಲ್ಲಿಟ್ಟನು. ಆ ಡಬ್ಬ ನಮ್ಮೂರಿನಂತಹ ಚಿಕ್ಕಹಳ್ಳಿಯಲ್ಲಿ ಖರ್ಚಾಗಬೇಕಾದರೆ ೪ ತಿಂಗಳು ಬೇಕು. ಹಾಗೆ ಖರ್ಚಾದನಂತರ ಉಳಿಯುವ ಲಾಭ ೪ ಆಣೆ ಮಾತ್ರ. ವ್ಯಾಸ್ಕೊಡಗಾಮನು ಬಸ್ಸಿನಲ್ಲಿ ಅದರ ಜೊತೆಯಲ್ಲಿಯೇ ಒಂದು ಚಿಕ್ಕ ಸಕ್ಕರೆಯ ಗಂಟನ್ನೂ ಇಟ್ಟನು. ಅಂತು ಬಸ್ಸು ನಮ್ಮೂರಿನ ಕಡೆ ಹೊರಟಿತು.

ಅದರ ಕಿರೋ ಎಂಬ ಶಬ್ದದಿಂದ ನಮ್ಮ ಕಿವಿ ಮರವಾಗಿ ಹೋಯಿತು. ಬಸ್ಸಿನಲ್ಲಿ ಆ ದಿವಸ ದುರದೃಷ್ಟವಶಾತ್ ನಾನು, ವ್ಯಾಸ್ಕೊಡಗಾಮ ಇಬ್ಬರೇ ಇದ್ದೆವು. ನೀವು ಬಸ್ಸಿನಲ್ಲಿ ಕುಳಿತಿದ್ದರೆ ನಿಮಗೆ ಗೊತ್ತಾಗುತ್ತೆ. ಬಸ್ಸು ತುಂಬಿ ಅದರಲ್ಲಿ ಹೆಚ್ಚು ಜನರಿದ್ದರೆ ಅದು ಕುಲುಕಾಡುವುದಿಲ್ಲ-ದೋಣಿಯಂತೆ-ಇಲ್ಲದಿದ್ದರೆ ಒಳಗೆ ಕುಳಿತಿರುವವರ ಕರುಳೆಲ್ಲಾ ಅಲ್ಲಾಡಿ ಹೋಗುತ್ತೆ. ಮಲೆನಾಡಿನ ರಸ್ತೆಯಂತೂ ದೇವರೇ ಗತಿ. ನಾವು ಬೀಳದಂತೆ ಹಿಡಿದುಕೊಂಡು ಕುಳಿತುಕೊಳ್ಳುವುದೇ ನಮಗೆ ಸಾಕಾಗಿ ಹೋಯಿತು. ವ್ಯಾಸ್ಕೊಡಗಾಮನ ಮೂಗು ಮುಂದಲ 'ಸೀಟಿಗೆ' ತಗಲಿ ಸ್ವಲ್ಪ ಪೆಟ್ಟೇ ಆಯಿತು. ಆದರೆ ಅವನು 'ಟಿಕೆಟ್ 'ಗೆ ದುಡ್ಡು ಕೊಟ್ಟಿರಲಿಲ್ಲ. ಕಷ್ಟ ವಿಲ್ಲದೆ ಸುಖ ಬರುತ್ತದೆಯೆ? ನೋವಿಲ್ಲದೆ ದುಡ್ಡು ಉಳಿಯುತ್ತದೆಯೆ?