ಪುಟ:ಹಳ್ಳಿಯ ಚಿತ್ರಗಳು.djvu/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಮ್ಮ ಊರ ಬಸ್ಸು

೧೨೧

"ಕೈಯನ್ನು ನೀರಿಗೆ ಅದ್ದಿದಾಗ ಗಡಿಯಾರದ ಒಳಕ್ಕೆ ಎಲ್ಲೊ ನೀರು ಸೇರಿರಬೇಕು. ಅದರಿಂದಲೇ ನಿಂತುಹೋಗಿದೆ” ಎಂದನು.

ಇಷ್ಟೆಲ್ಲಾ ಆದಮೇಲೆ,

“ಸರಿ ಮೇಲಕ್ಕೆ ಬಾ” ಎಂದೆ.

ಭಟ್ಟನು ನಿರುತ್ಸಾಹದಿಂದ “ಬರುವ ಹಾಗಿಲ್ಲ" ಎಂದನು.

ನನಗೆ ಅರ್ಥವಾಗಲಿಲ್ಲ. ನೀರಿನಲ್ಲಿರುವವನು ನೀರುಬಿಟ್ಟು ಬರುವುದಕ್ಕಾಗುವುದಿಲ್ಲವೆಂದರೆ ಏನು ಅರ್ಥ?

"ಹಾಗಾದರೇನು ನಿನಗೆ ಜಲಸಮಾಧಿಯೇನೊ?” ಎಂದೆ.

ಭಟ್ಟನು "ಹಾಗೆಯೇ ಸರಿ" ಎಂದನು.

"ಮಂಡಿಯವರಿಗೆ ಕೆಸರಿನಲ್ಲಿ ಹೂತುಹೋಗಿದೆ. ನಾನಾಗಿಯೇ ಮೇಲಕ್ಕೆ ಬರುವಂತಿದ್ದರೆ ನೀನು ಮಹಾಗೃಹಸ್ಥ ಎಂದು ನಿನ್ನನ್ನು ಯಾಕೆ ಇಲ್ಲಿಗೆ ಕರೆಯಬೇಕಾಗಿತ್ತು? ನಿನ್ನ ಎರಡು ಕೈಗಳಿಂದಲೂ ನನ್ನ ಎರಡು ಕೈಗಳನ್ನೂ ಹಿಡಿದು ಬಲವಾಗಿ ಎಳಿ?” ಎಂದನು.

ಭಟ್ಟನನ್ನು ನೀವು ನೋಡಿಲ್ಲ. ಒಳ್ಳೆ ಆನೆ ಇದ್ದ ಹಾಗೆ ಇದ್ದಾನೆ. ಅವನನ್ನು ಎಳೆಯಬೇಕಾದರೆ ಆರು ಜೊತೆ ಬಲವಾದ ಎತ್ತುಗಳನ್ನು ಒಂದೇ ಕಾಲದಲ್ಲಿ ಕಟ್ಟಬೇಕು. ನಾನು ದಡದಲ್ಲಿ ನಿಂತುಕೊಂಡು ಕೈಗಳನ್ನು ಮುಂದಕ್ಕೆ ಚಾಚಿ “ಹು ಹು” ಎಂದೆ.

ಭಟ್ಟನು “ಆ ನಾಜೋಕೆಲ್ಲಾ ನಡಿಯೋ ಹಾಗಿಲ್ಲ. ಕೋಟು ರುಮಾಲು ಬಿಚ್ಚಿಡು. ಜೋಡು ಆಕಡೆ ಬಿಡು. ಸೊಂಟಕ್ಕೆ ಒಂದು ಚೌಕ ಸುತ್ತಿಕೊ, ಪಂಚೆಯನ್ನು ದೂರಕ್ಕೆ ಎಸೆ” ಎಂದನು.

ನಾನು "ಇಷ್ಟೆಲ್ಲಾ ಕಷ್ಟ ಯಾಕೆ? ಬಸ್ ನಿಲ್ದಾಣದಲ್ಲಿ ನಿಂತಿರುವ ಯಾರಾದರೂ ಮತ್ತೊಬ್ಬರನ್ನು ಕರೆಯುತ್ತೇನೆ" ಎಂದೆ.

ಭಟ್ಟನು ಕಾತರ ಧ್ವನಿಯಿಂದ

"ಹಾ, ಬೇಡ ಬೇಡ! ನೀನು ಹಾಗೆ ಮಾಡಿದರೆ ನಾನು ಇದುವರೆಗೆ ಮಾಡಿದುದೆಲ್ಲಾ ವ್ಯರ್ಥವಾಗುತ್ತದೆ” ಎಂದನು.