ಪುಟ:ಹಳ್ಳಿಯ ಚಿತ್ರಗಳು.djvu/೧೩೬

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
೧೨೨
ಹಳ್ಳಿಯ ಚಿತ್ರಗಳು

ನಾನು “ನಿನ್ನ ಮನೆ ಹಾಳಾಯ್ತು" ಎಂದುಕೊಂಡು, ನನ್ನ ಉಡುಪನ್ನೆಲ್ಲಾ ಬಿಚ್ಚಿ ಒಂದು ಚೌಕವನ್ನು ಸುತ್ತಿಕೊಂಡು, ಅವನನ್ನು ಎಳೆಯಲು ಪ್ರಾರಂಭಿಸಿದೆ. ಆದರೆ ಆ ಪುಣ್ಯಾತ್ಮ ಅಲುಗಾಡಲೇ ಇಲ್ಲ. "ಯಮನಿಗೆ ಯಾಕೆ ಈ ರೀತಿ ದೇಹ ಬೆಳಸಿಟ್ಟಿದ್ದೀಯೆ?” ಎಂದೆ. ಅಂತೂ ಇಂತೂ ಬಹಳ ಕಷ್ಟ ಪಟ್ಟು ಅವನನ್ನು ಮೇಲಕ್ಕೆ ಎತ್ತಿದುದಾಯಿತು. ನಮ್ಮ ಊರಿನವರೆಲ್ಲರೂ ಮಂಗಳೂರಿನಿಂದ ಐದೈದು ರೂಪಾಯಿಗಳನ್ನು ಕೊಟ್ಟು ಹೊಸ ಜೋಡುಗಳನ್ನು ತರಿಸುತ್ತಿದ್ದರು. ಪಾಪ ಭಟ್ಟನು ಜೋಡನ್ನು ಕೊಂಡು ಇನ್ನೂ ೩ ದಿನಗಳಾಗಿದ್ದುವು. ಅದು ಕೆಸರಿನಲ್ಲಿ ಮುಳುಗಿಹೋಯಿತು. ನಾನು “ಅನ್ಯಾಯವಾಗಿ ಒಳ್ಳೆ ಜೋಡು ಹೋಯಿತಲ್ಲಾ?” ಎಂದೆ. ಭಟ್ಟನು ಹೆದರದೆ "ಹೋಗಲಿ ಇದಕ್ಕೆಲ್ಲಾ ಲಕ್ಷ್ಯ ಮಾಡಿದರೆ ದೊಡ್ಡ ಕೆಲಸಗಳನ್ನು ಮಾಡುವುದಕ್ಕೆ ಆಗುತ್ತದೆಯೇ" ಎಂದನು. ನನಗೆ ಆ ದೊಡ್ಡ ಕೆಲಸ ಯಾವುದೆಂಬುದರ ವಾಸನೆ ಕೂಡ ತಿಳಿದಿರಲಿಲ್ಲ.

ಕೆಸರು ತುಂಬಿದ್ದ ಬಟ್ಟೆಗಳನ್ನೆಲ್ಲಾ ಒಗೆಯಲು ಆ ಇನ್ನೊಂದು ಕೊಳಕ್ಕೆ ಹೋದೆವು.

ದಾರಿಯಲ್ಲಿ ನಾನು "ಇದೆಲ್ಲಾ ನೀನು ಹುಚ್ಚನಂತೆ ಮೋಟಾರಿಗೆ ನೀರನ್ನು ತುಂಬಲು ನಿನ್ನ ಹೊಸ ರುಮಾಲನ್ನು ಎಸೆದುದರ ಫಲ” ಎಂದೆನು.

ಭಟ್ಟನು “ನಾನು ಯಾಕೆ ಹಾಗೆ ಮಾಡಿದೆ. ನಿನಗೆ ಗೊತ್ತೆ" ಎಂದನು.

ನಾನು ಇಲ್ಲವೆಂದು ಒಪ್ಪಿಕೊಂಡೆ.

ಅವನು “ಅಯ್ಯೋ ಮಂಕೆ! ಆದರೆ ಅದೆಲ್ಲ ತಿಳಿಯಬೇಕಾದರೆ ತಲೆ ಸ್ವಲ್ಪ ಚುರುಕಾಗಿರಬೇಕು; ದೂರದೃಷ್ಟಿ ಬೇಕು; ಲೋಕವ್ಯವಹಾರಬೇಕು. ನನ್ನ ಮೆದುಳು ಹೇಗೆ ಕೆಲಸಮಾಡುತ್ತೆ ನಿನಗೆ ಗೊತ್ತೆ? ಬೈಸಿಕಲ್ ೫೦ ಮೈಲಿ ವೇಗದಲ್ಲಿ ಹೋಗುತ್ತಿರುವಾಗ ಅದರ ಚಕ್ರ ಯಾವ ರೀತಿ ತಿರುಗುತ್ತದೆಯೋ ಆ ರೀತಿ ನನ್ನ ಮೆದುಳು ತಿರುಗುತ್ತಿದೆ. ಅದರ-