ಪುಟ:ಹಳ್ಳಿಯ ಚಿತ್ರಗಳು.djvu/೧೩೮

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
೧೨೪
ಹಳ್ಳಿಯ ಚಿತ್ರಗಳು

ನಾನು ಇಲ್ಲವೆಂದು ತಲೆಯಲ್ಲಾಡಿಸಿದೆ.

“ಹಾಗಾದರೆ ಕೇಳು. ಈಗ ನಾನು ಬಸ್ ಏಜೆಂಟು ಆಗುತ್ತೇನೆ.”

“ಅದಕ್ಕೆ ನಿನ್ನ ರುಮಾಲನ್ನು ಯಾಕೆ ಕೆಸರಲ್ಲಿ ಅದ್ದಬೇಕು?”

“ನಿನಗೆ ಎಷ್ಟು ಹೇಳಿದರೂ ತಿಳಿಯುವುದೇ ಇಲ್ಲ. ಈ ಏಜೆಂಟ್ ಕೆಲಸಕ್ಕೆ ನಮ್ಮೂರಿನಿಂದ ಇನ್ನೂ ಮೂರು ಜನ ಅರ್ಜಿ ಹಾಕಿದ್ದಾರೆ."

“ನಿನಗೆ ಹೇಗೆ ತಿಳಿಯಿತು?”

"ಉಪಾಯವಿದ್ದರೆ ಎಲ್ಲಾ ತಿಳಿಯುತ್ತೆ. ಡೈವರ್ ಹೇಳಿದ."

"ಹೂ."

"ಆ ಮೂರು ಜನರನ್ನೂ ಬಿಟ್ಟು ಮೋಟಾರಿನ ಯಜಮಾನ ನನಗೇ ಯಾಕೆ ಏಜೆನ್ಸಿಕೊಡಬೇಕು? ಅದಕ್ಕಾಗಿ ಸ್ವಲ್ಪ ಕೊಳೆಯಾದರೆ ಆಗಲಿ ಎಂದು ಈ ಎಂಟು ರೂಪಾಯಿನ ರುಮಾಲನ್ನೇ ನೀರನ್ನು ಸೋದಿಸಲು ಹಾಕಿದೆ. ಬಸ್ಸಿನ ಯಜಮಾನನೂ ಅದನ್ನು ನೋಡಿದ್ದಾನೆ. ಇನ್ನೇನು ನಾನೇ ಬಸ್ಸಿಗೆ ಏಜೆಂಟು.”

ಭಟ್ಟನು ಏಜೆಂಟಾದರೂ ಅದರಿಂದ ಅವನಿಗೆ ಏನು ಲಾಭಬರಬಹುದೆಂಬುದು ನನಗೆ ತಿಳಿಯಲಿಲ್ಲ. ಆಗಲೇ ಅವನಿಗೆ ಐದು ರೂಪಾಯಿನ ಜೋಡು ಹೋಯ್ತು. ೩೦ ರೂಪಾಯಿನ ಗಡಿಯಾರ ಕೆಟ್ಟು ಹೋಯ್ತು. ರುಮಾಲಿನಲ್ಲಿ ಏನು ಮಾಡಿದರೂ ಹೋಗದ ಕೆಮ್ಮಣ್ಣಿನ ಕರೆ ನಿಂತಿತು. ಹಂದಿಯಂತೆ ಸೊಂಟದವರೆಗೆ ಕೆಸರಿನಲ್ಲಿ ನೆನೆದುದಾಯಿತು. ಒಂದು ಕಾಸೂ ಉತ್ಪತ್ತಿ ಇಲ್ಲದ ನಮ್ಮೂರ ಏಜೆನ್ಸಿಯಿಂದ ಈ ನಷ್ಟವನ್ನೆಲ್ಲಾ ಅವನು ಹೇಗೆ ಕೂಡಿಸಬಹುದೆಂಬುದೇ ನನಗೆ ಬಗೆ ಹರಿಯಲಿಲ್ಲ. ಆದರೆ ಆ ರೀತಿ ಹೇಳಿ ಪ್ರಾರಂಭದಲ್ಲಿಯೆ ಅವನಿಗೆ ನಿರುತ್ಸಾಹವುಂಟುಮಾಡಬಾರದೆಂದು ಬಾಯಿಗೆ ಬೀಗ ಹಾಕಿಕೊಂಡು ಸುಮ್ಮನಿದ್ದೆ,

ಆ ದಿವಸ ನ್ಯಾಯಸ್ಥಾನದಲ್ಲಿ ಭಟ್ಟನದು ಒಂದು ವ್ಯವಹಾರ. ಅದಕ್ಕೆ ನಾನೇ ಸಾಕ್ಷಿ; ಅದಕ್ಕಾಗಿಯೇ ನಾವು ಹಾಸನಕ್ಕೆ ಹೋಗಿದ್ದುದು. ಆದರೆ ಕೊಳದ ಬಳಿ ಬಟ್ಟೆಗಳೆಲ್ಲಾ ಒಣಗುವ ವೇಳೆಗೆ ಮಧ್ಯಾಹ್ನ ಮೂರು ಗಂಟೆ ಆಯಿತು. ಬಟ್ಟೆ ಇಲ್ಲದೆ ನ್ಯಾಯಸ್ಥಾನಕ್ಕೆ ಹೋಗುವುದಕ್ಕೆ ಆಗುತ್ತದೆಯೆ? ನಾವಿಬ್ಬರೂ ಮೂರು ಗಂಟೆಗೆ ನ್ಯಾಯಸ್ಥಾನದ ಬಳಿಗೆ