ಪುಟ:ಹಳ್ಳಿಯ ಚಿತ್ರಗಳು.djvu/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಮ್ಮ ಊರ ಬಸ್ಸು

೧೨೫

ಹೋಗಿ ಲಾಯರನ್ನು ನೋಡಿದೆವು. ಅವರು ನಮ್ಮನ್ನು ಕಂಡೊಡನೆಯೇ ಕೋಪದಿಂದ,

“ನಿಮ್ಮ 'ಕೇಸನ್ನು' ತೆಗೆದುಕೊಂಡುದು ನನ್ನ ತಪ್ಪು. ನಿಮ್ಮದು ಹುಡುಗಬುದ್ದಿ; ಜವಾಬ್ದಾರಿಯಿಲ್ಲ. ೧೧ ಗಂಟೆಯಿಂದ ೨ ಗಂಟೆಯವರೆಗೆ ನಿಮ್ಮ ಹೆಸರನ್ನು ಕೂಗಿ ಕೂಗಿ ಸಾಕಾಯಿತು. ನ್ಯಾಯಾಧಿಪತಿಗಳು ಹೊರಟುಹೋದರು. 'ಕೇಸು' ವಜಾ ಆಯಿತು” ಎಂದರು.

ಭಟ್ಟನು ವಿಧಿಯಿಲ್ಲದೆ,

"ನಿಮ್ಮದು ತಪ್ಪಲ್ಲ. ಹೋದರೆ ಹೋಯಿತು. ಏನು ಮಾಡೋದು. ಒಂದರಲ್ಲಿ ಹೋದರೆ ಇನ್ನೊಂದರಲ್ಲಿ ಬರುತ್ತೆ, ನೂರು ರೂಪಾಯಿ ತಾನೇ ಹೋದದ್ದು” ಎಂದನು.

"ಅಷ್ಟೇ ಅಲ್ಲ; ಎದುರು ಪಕ್ಷದವರ ವೆಚ್ಚ ಸುಮಾರು ೮೦ ರೂಪಾಯಿ ಆಗುತ್ತೆ. ಅದನ್ನೂ ನೀವೇ ಕೊಡಬೇಕು."

ನಾವು ಹಿಂದಿರುಗಿದ್ದೆವು. ಆ ದಿವಸದ ಘಟನೆಗಳನ್ನೂ ನಷ್ಟಗಳನ್ನೂ ನೋಡಿ ಯಾರಿಗಾದರೂ ನಿರುತ್ಸಾಹವೂ ಪೆಚ್ಚು ಮುಖವೂ ಉಂಟಾಗಬೇಕಾಗಿದ್ದಿತು. ನಾನೇನೋ ಬೆಪ್ಪಾಗಿ ಬರುತ್ತಿದ್ದೆ. ಆದರೆ ಭಟ್ಟನಿಗೆ ಸ್ವಲ್ಪವೂ ಬೇಸರಿಕೆಯಾದಂತೆಯೇ ತೋರಲಿಲ್ಲ. ಅವನು ಶಿಳ್ಳು ಊದುತ್ತಾ ಸಂತೋಷದಿಂದಲೇ ಬರುತ್ತಿದ್ದನು. ಅವನನ್ನು ಚೆನ್ನಾಗಿ ಬಯ್ದುಬಿಡಬೇಕೆಂದು ನಾನು ಯೋಚಿಸುತ್ತಿರುವಷ್ಟರಲ್ಲಿಯೇ ಭಟ್ಟನು,

“ಮುಂದಲ ಸಲ ಈ ಲಾಯರನ್ನು ನೋಡುವುದಕ್ಕೆ ಬಂದಾಗ ಮೋಟಾರ್ ಕಾರಿನಲ್ಲಿಯೇ ಬರುತ್ತೇನೆ" ಎಂದನು.

ನಾನು ಜಿಗುಪ್ಪೆಯಿಂದ "ಏಜೆಂಟ್ ಆಗುವೆಯಲ್ಲ. ಅದರಿಂದ ಮೋಟಾರ್‌ ನಿನ್ನದೆ ಆಯಿತಲ್ಲವೆ?” ಎಂದೆ.

ಭಟ್ಟನು ಗಂಭೀರವಾಗಿ,

“ಹಾಗಲ್ಲ ನೋಡು. ನಾಳೆಯಿಂದ ಏಜೆಂಟ್ ಆದ ಕೂಡಲೆ ನಾನೆ ಮೋಟಾರ್‌ ನಡೆಸಲು ಅಭ್ಯಾಸಮಾಡುತ್ತೇನೆ. ಅನಂತರ ಯಾವು ದಾದರೂ ಒಂದು ಹಳೆಯ ಗಾಡಿ ಯಾರಿಗೂ ಬೇಕಾಗದ್ದನ್ನು ತಂದು ಸರಿಮಾಡಿಬಿಡುತ್ತೇನೆ. ನಮ್ಮೂರಿಗೂ ಹಾಸನಕ್ಕೂ ನಾನೇ “ಸರ್‍ವೀಸ್