ಪುಟ:ಹಳ್ಳಿಯ ಚಿತ್ರಗಳು.djvu/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೨೬

ಹಳ್ಳಿಯ ಚಿತ್ರಗಳು

ಇಟ್ಟುಬಿಡುತ್ತೇನೆ. ಪ್ರಾರಂಭದಲ್ಲಿ ಈ ಒಂದು 'ಲೈನ್' ಮಾತ್ರ. ಇದರಲ್ಲಿ ಗಡಿಗೆಗಟ್ಲೆ ರೂಪಾಯಿ ಹೊಡೆಯುತ್ತೇನೆ. ಆಮೇಲೆ ಸಕಲೇಶಪುರ, ಚೆನ್ನರಾಯಪಟ್ಟಣ, ಮಡಿಕೇರಿ, ಸೇಲಂ, ಅಲ್ಲಿಯವರೆಗೆ ಬಸ್ ಸರ್ವಿಸ್ ಇಡಬೇಕು. ೬-೮ ಡ್ರೈವರುಗಳೂ ಗುಮಾಸ್ತರೂ ಬೇಕು. ಆದರೂ ಚಿಂತೆಯಿಲ್ಲ. ಸುಮ್ಮನೆ ಕುಳಿತುಕೊಂಡು ನಿತ್ಯ ಬರುವ ದುಡ್ಡನ್ನು ಎಣಿಸಿ ಜೇಬಿಗೆ ಇಳಿಬಿಡುವುದೊಂದೇ ನನಗೆ ಕೆಲಸ. ಪ್ರಾರಂಭದಲ್ಲಿ ತಿಂಗಳಿಗೆ ಒಂದುಸಾವಿರಕ್ಕೆ ಕಡಮೆ ಇಲ್ಲದೆ ಲಾಭ ಬರುತ್ತದೆ. ಅನಂತರ ಎಷ್ಟು ಕಡಮೆ ಎಂದರೂ, ಬೇಡವೆಂದರೂ, ನಾಲ್ಕು ಸಾವಿರ ರೂಪಾಯಿಗಳಿಗೆ ಮೋಸವಿಲ್ಲದಂತೆ ಜೇಬಿಗೆ ಬೀಳುತ್ತದೆ. ಎರಡು ವರುಷಗಳು ಕಳೆಯುವುದರೊಳಗಾಗಿ ಮೈಸೂರು ಸೀಮೆಯಲ್ಲೆಲ್ಲಾ “ಭಟ್ಟನ ಬಸ್ ಸರ್ವಿಸ್” ಹೊರತು ಮತ್ತಾವುದೂ ಇಲ್ಲದಂತೆ ಮಾಡಿಬಿಡುತ್ತೇನೆ.”

“ಸ್ವಲ್ಪ ತಡಿ, ಈಗಿರುವ ಬಸ್ ಸರ್‍ವಿಸ್‍ಗಳೊ?"

“ಬಂದ ಲಾಭದಿಂದ ಅವುಗಳನ್ನೆಲ್ಲಾ ನಾನೇ ಕೊಂಡುಕೊಳ್ಳುತ್ತೇನೆ."

ಆ ದಿವಸ ಸಂಧ್ಯಾಕಾಲ ಬಸ್ ಯಜಮಾನನು ಭಟ್ಟನನ್ನೇ ನಮ್ಮೂರಿಗೆ ಏಜೆಂಟಾಗಿ ನಿಯಮಿಸಿದನು.

ಭಟ್ಟನು ತನ್ನ ಲಕ್ಷ್ಯವನ್ನೂ ತೀಕ್ಷ್ಮವಾದ ಮೆದುಳಿನ ಎಲ್ಲಾ ಶಕ್ತಿಯನ್ನೂ, ಬಸ್ಸಿನ ಕಡೆಗೆ ತಿರುಗಿಸಿದನು. ಅವನ ಮನೆಯಲ್ಲಿ ಅವರ ಅಜ್ಜಿಯೊಬ್ಬರಿದ್ದರು. ಅವರಿಗೆ ೮೦ಕ್ಕೆ ಮೀರಿದ ವಯಸ್ಸಾಗಿ ಕಣ್ಣು ಕಾಣುತ್ತಿರಲಿಲ್ಲ. ಅವರು ಭಟ್ಟನಿಗೆ ಪ್ರತಿನಿತ್ಯವೂ ದೇವರ ಪೂಜೆಮಾಡೆಂದು ಹೇಳುತ್ತಿದ್ದರು. ದೇವರ ಪೂಜೆಮಾಡಲು ಭಟ್ಟನಿಗೆ ಇಷ್ಟವಿಲ್ಲದೆ ಇಲ್ಲ. ಆದರೆ ಹಾಳಾದ್ದು ಬಸ್ಸು, ಅವನ ದೇವರ ಪೂಜೆಯ ವೇಳೆಗೆ ಸರಿಯಾಗಿ ನಮ್ಮೂರಿಗೆ ಬಂದುಬಿಡುತ್ತಿದ್ದಿತು. ಭಟ್ಟನು ಕೂಡಲೆ ಹೋಗಿ ಪ್ರಯಾಣಿಕರಿಗೆ ಟಿಕೆಟನ್ನು ಕೊಟ್ಟು ಅವರನ್ನು ಗಾಡಿಯಲ್ಲಿ ಕೂರಿಸಿ ತಾನು ಬಸ್ಸಿನಲ್ಲಿ ಕುಳಿತು ಸ್ವಲ್ಪಹೊತ್ತು ನಡೆಸುವುದನ್ನು ಅಭ್ಯಾಸಮಾಡಬೇಕಾಗಿದ್ದಿತು. ಆದರೆ ದೇವರ ಪೂಜೆಮಾಡದಿದ್ದರೆ ಅಜ್ಜಿಯವರು ಬಿಡುವಂತಿಲ್ಲ. ಆದುದರಿಂದ ಸ್ನಾನಕ್ಕೆ ಬಚ್ಚಲಿಗೆ ಇಳಿಯುವಾಗಲೇ ದೇವರ ಪೂಜೆಯ ಮಂತ್ರವನ್ನು ಪ್ರಾರಂಭಿಸಿಬಿಡುತ್ತಿದ್ದನು. ಸ್ನಾನಮಾಡಿ ಮೈ ಒರಸಿಕೊಂಡು ಪಂಚೆ