ಪುಟ:ಹಳ್ಳಿಯ ಚಿತ್ರಗಳು.djvu/೧೪೧

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
೧೨೭
ನಮ್ಮ ಊರ ಬಸ್ಸು

ಯುಟ್ಟುಕೊಂಡು ವಿಭೂತಿಯನ್ನು ಧರಿಸಿ ಸಂಧ್ಯಾವಂದನೆ ಶಾಸ್ತ್ರ ಮಾಡಿ ದೇವರ ಪೂಜೆಗೆ ಕೂರುವ ವೇಳೆಗೆ ಎಲ್ಲಾ ಮಂತ್ರಗಳನ್ನೂ ಘಟ್ಟಿಯಾಗಿ ಹೇಳಿ ಮುಗಿಸಿಬಿಡುತ್ತಿದ್ದನು. ಕುರುಡು ಮುದುಕಿಯು ಘಂಟೆಯ ಸದ್ದನ್ನು ಕೇಳಿ ಮೊಮ್ಮಗನು ದೇವರಪೂಜೆ ಮಾಡಿಯಾಯಿತೆಂದು ಸಂತೋಷದಿಂದ ತೀರ್ಥವನ್ನು ತೆಗೆದುಕೊಳ್ಳುತ್ತಿದ್ದಳು. ತೀರ್ಥವನ್ನು ಮುದುಕಿಗೆ ಕೊಡುವ ವೇಳೆಯಲ್ಲಿ ಬಸ್ ಸದ್ದಾದರೂ ಸಾಕು, ಹಾವಾಡಿಗನ ತಮಟೆಯನ್ನು ಕೇಳಿ ಹುಡುಗರು ಓಡಿಬಿಡುವಂತೆ, ಭಟ್ಟನು ಬಟ್ಟಲನ್ನು ಅಲ್ಲಿಯೇ ಇಟ್ಟು ಓಡಿಬಿಡುತ್ತಿದ್ದನು. ಅವನ ಉತ್ಸಾಹವನ್ನು ನೋಡಿ ನಾನು ಭಟ್ಟನ ಬಸ್ ಸರ್ವಿಸ್ ಪ್ರಾರಂಭವಾದರೂ ಆಗಬಹುದೆಂದು ಯೋಚಿಸಿದೆ.

ಒಂದು ದಿವಸ ನಾನು ಗದ್ದೆಯ ಹಸುರು ಬಯಲ ಬದುವಿನಲ್ಲಿ ಕುಳಿತು "ಸಣ್ಣ ಕತೆಗಳನ್ನು” ಓದುತಲಿದ್ದೆ. ಆ ಸಮಯಕ್ಕೆ ಭಟ್ಟನು ಅಲ್ಲಿಗೆ ಬಂದನು. ಅವನ ಮುಖವನ್ನು ನೋಡಿದ ಕೂಡಲೇ ಏನೋ ವಿಷಯ ವಿರಬೇಕೆಂದು ನನಗೆ ಗೊತ್ತಾಯಿತು. ಅವನು ನನ್ನನ್ನು ಕುರಿತು,

“ನೀವೆಲ್ಲಾ ಶುದ್ಧ ಮೈಗಳ್ಳರು ಕಣೋ, ಅಪ್ಪ ಕೂಡಿಹಾಕಿದ ಗಂಟಿದೆ ಅಂತ ತಿಂದು ತಿಂದು ಕರಗಿಸ್ತೀರಿ. ದುಡ್ಡು ಸಂಪಾದನೆಯಾಗೋ ಒಂದು ಕೆಲಸಾನೂ ಪ್ರಾರಂಭಿಸೋಲ್ಲ, ನಿಮ್ಮ ಮೆದುಳೊ-”

ನಾನು “ಮಹಾ ನೀನು ಮಾಡಿದ್ದೇನು" ಎಂದೆ.

ಭಟ್ಟನ ಮುಖದ ಮೇಲೆ ನನ್ನ ಮಾತಿನಿಂದ ಜಿಗುಪ್ಪೆಯ ಚಿಹ್ನೆಯು ತೋರಿತು. ಆದರೂ ಅವನು ಸಂತೋಷದಿಂದ ಪ್ರಾರಂಭಿಸಿದನು.

“ಈಗ ಇನ್ನೊಂದು ದೊಡ್ಡ ಯೋಚನೆ ಮಾಡಿದ್ದೇನೆ. ಶ್ರೀನಿವಾಸ. ಕೋ-ಆಪರೇಟಿವ್ ಸೊಸೈಟಿ 'ಸೆಕ್ರೆಟರಿಷಿಪ್' ನನಗೆ ಕೊಡುವಂತೆ ಮಾಡಿದೆ."

“ಅವನು ಯಾಕೆ ಬಿಟ್ಟ.”

"ಬಿಡಲಿಲ್ಲ. ನಾನೇ ಬಲಾತ್ಕಾರವಾಗಿ ಕಸಿದುಕೊಂಡೆ.”

“ಅವನಿಗೆ ಏನು ಕೊಟ್ಟೆ.”

"ಹೂ! ಕೊಟ್ಟೆ, ೧೦೦ ರೂಪಾಯಿ.”