ವಿಷಯಕ್ಕೆ ಹೋಗು

ಪುಟ:ಹಳ್ಳಿಯ ಚಿತ್ರಗಳು.djvu/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೨೮
ಹಳ್ಳಿಯ ಚಿತ್ರಗಳು

“ನೀನು ಮಾಡುವ ಸಂಪಾದನೆಯ ವಿಚಾರ ಹೀಗೆಯೋ?” ಎಂದೆ.

ಭಟ್ಟನು “ನೋಡಿದೆಯಾ? ನಿನ್ನ ದೃಷ್ಟಿ ಬಹಳ ಸಂಕುಚಿತ. ನಿನಗೆ ವಿಶಾಲವಾದ ದೃಷ್ಟಿಯುಳ್ಳವನಾಗೆಂದು ಎಷ್ಟೋಸಲ ಹೇಳಿದರೂ ಪ್ರಯೋಜನವಾಗಲಿಲ್ಲ. ನಾನು ಹಾಗೆಲ್ಲಾ ಗುಂಡಿಗೆ ಬೀಳುತ್ತೇನೆಯೆ? ಈಗ ನೋಡು, ಸೊಸೈಟಿ ಅಂಗಡಿಗೆ ಅಕ್ಕಿ ಬೇಳೆ ಮುಂತಾದ ಸಾಮಾನುಗಳೆಲ್ಲಾ ಬೇಕು. ಅದನ್ನೆಲ್ಲಾ ತರುವುದಕ್ಕೆ 'ಭಟ್ಟನ ಬಸ್ ಸರ್ವಿಸ್' ಪ್ರಾರಂಭವಾಗುವುದರಿಂದ ಎಷ್ಟು ಸುಲಭ! ಒಂದು ಕಾಸೂ ಬಾಡಿಗೆ ಕೊಡಬೇಕಾದುದಿಲ್ಲ. ಆ ದುಡ್ಡೆಲ್ಲಾ ನನಗೇ ಉಳಿಯುತ್ತೆ, ಬಸ್ಸನ್ನು ದುದ್ದಕ್ಕೆ ಹೊಡೆದುಕೊಂಡು ಹೋಗಿ ಅಲ್ಲಿಯ ಸಂತೆಯಿಂದ ತೆಂಗಿನಕಾಯಿ ಮೆಣಸಿನಕಾಯಿ ಹೇರಿಕೊಂಡು ಬಂದು, ಎಲ್ಲಾ ಕಡೆಗೂ ಕಳುಹಿಸಬಹುದು. ದುದ್ದದಲ್ಲಿ ಮಾರುವುದಕ್ಕಿಂತ ಇಲ್ಲಿ ಕಡಿಮೆ ಬೆಲೆಗೆ ಮಾರಬಹುದು. ನಮ್ಮ ಸೊಸೈಟಿಯೇ ಒಂದು ದೊಡ್ಡ ಮಂಡಿಯಾಗುತ್ತದೆ. ಇದರಲ್ಲಿ ತಿಂಗಳಿಗೆ ಸಾವಿರಾರು ರೂಪಾಯಿ ಲಾಭ ಬರುವುದರಲ್ಲಿ ಸಂದೇಹವಿಲ್ಲ-”

“ಸ್ವಲ್ಪ ತಡಿ, ಆ ಲಾಭ ಸೊಸೈಟಿಗೆ ಬರುತ್ತದೆ. ನಿನಗೆ ಬಂದದ್ದೇನು?”

"ನನಗೆ ಬಂದದ್ದೇನೆ. ತೋರಿಸುತ್ತೇನೆ ಕೇಳು. ಯಾವಾಗ ಹೀಗೆ ನನ್ನ ಬುದ್ಧಿಶಕ್ತಿಯಿಂದಲೂ, ಏಕಾಗ್ರತೆಯಿಂದಲೂ, ನಾನು ವಿಧವಿಧವಾದ ವ್ಯಾಪಾರಗಳನ್ನು ಮಾಡಿ ಲಾಭವನ್ನು ಸಂಪಾದಿಸಿ ಸೊಸೈಟಿಗೆ ಕೊಡುತ್ತೇನೊ, ಆಗ ಅವರು ನನಗೆ ತಿಂಗಳಿಗೆ ನೂರಾರು ರೂಪಾಯಿಗಳನ್ನು 'ಬೋನಸ್ಸು' ಕೊಡಲೇ ಬೇಕು.”

ಆ ಮೇಧಾವಿಯ ಬುದ್ಧಿಶಕ್ತಿಯನ್ನು ನೋಡಿ ನನಗೆ ಆಶ್ಚಯ್ಯ ವಾಯಿತು. 'ಬಸ್ ಸರ್ವೀಸನ್ನೂ, ಇದನ್ನೂ ನೀನೊಬ್ಬನೇ ಹೇಗೆ ನಿರ್ವಹಿಸುತ್ತೀಯೆ?” ಎಂದೆ.

ಭಟ್ಟನು, “ಓ ಅದೇನು ಮಹಾ ಕಷ್ಟ, ೭-೮ ಗುಮಾಸ್ತರುಗಳನ್ನಿಟ್ಟುಬಿಡುತ್ತೇನೆ. ಇಂತಹ ಸಾವಿರ ಕೆಲಸಗಳನ್ನಾದರೂ ನಿರ್ವಹಿಸಬಲ್ಲ ಶಕ್ತಿಯು ನನ್ನ ಮೆದುಳಿನಲ್ಲಿದೆ" ಎಂದನು.

ಒಂದೆರಡು ತಿಂಗಳಾಗಿರಬಹುದು. ಒಂದು ದಿವಸ ಭಟ್ಟನು ಕೋ-ಆಪರೇಟಿವ್ ಸೊಸೈಟಿಯ ಕಾರ್‍ಯದರ್ಶಿಯಾಗಿ ಕೆಲಸಮಾಡುತ್ತಾ