ಪುಟ:ಹಳ್ಳಿಯ ಚಿತ್ರಗಳು.djvu/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಮ್ಮ ಊರ ಬಸ್ಸು

೧೨೯

ಪೆಟ್ಟಿಗೆಯ ಮುಂದೆ ಕುಳಿತುಕೊಂಡು ಲೆಕ್ಕಗಳನ್ನು ಬರೆಯುತ್ತಿದ್ದನು. ಪಾಲುಗಾರನೊಬ್ಬನು ೭೫ ರೂಪಾಯಿಗಳನ್ನು ಸೊಸೈಟಿಯಿಂದ ಸಾಲವಾಗಿ ಪಡೆದು ತೀರಿಸದೆ ಮೃತನಾಗಿದ್ದನು. ಅವನ ಪತ್ರವು ವಾಯಿದೆ ಮೀರುವ ಅವಸ್ಥೆಗೆ ಬಂದಿತ್ತು. ಅದನ್ನು ಕೋರ್ಟಿಗೆ ಕಳುಹಿಸಬೇಕೆಂದು ತೀರ್ಮಾನವಾಗಿದ್ದುದರಿಂದ, ಭಟ್ಟನು ಪತ್ರಕ್ಕೆ ೨೦ ರೂಪಾಯಿಗಳ ನೋಟನ್ನು ಗುಂಡುಸೂಜಿಯಿಂದ ಚುಚ್ಚಿ ಬಸ್ಸಿನಲ್ಲಿ ಹಾಸನಕ್ಕೆ ಲಾಯರಲ್ಲಿಗೆ ಕಳುಹಿಸಲು ಪೆಟ್ಟಿಗೆಯ ಮಗ್ಗುಲಲ್ಲಿ ಇಟ್ಟುಕೊಂಡಿದ್ದನು. ಆ ವೇಳೆಗೆ ಬಸ್ ಸದ್ದಾಯಿತು. ಭಟ್ಟನು ಕೂಡಲೆ ಗಡಿಬಿಡಿಯಿಂದ ಪೆಟ್ಟಿಗೆಯ ಬಾಗಿಲನ್ನು ಮುಚ್ಚಿ ಬಸ್ಸನ್ನು ವಿಚಾರಿಸಲು ಹೊರಟುಹೋದನು. ಹೋಗುವಾಗ ಅವಸರದಲ್ಲಿ ಪತ್ರವನ್ನೂ ಅದಕ್ಕೆ ಸೇರಿಸಿದ್ದ ನೋಟನ್ನೂ ಪೆಟ್ಟಿಗೆಯ ಮಗ್ಗುಲಲ್ಲಿಯೇ ಮರೆತುಬಿಟ್ಟನು.

ಬಸ್ಸನ್ನು ಕಳುಹಿಸಿದನಂತರ, ತಾನು ಪತ್ರವನ್ನೂ ದುಡ್ಡನ್ನೂ ಪೆಟ್ಟಿಗೆಗೆ ಹಾಕಿದುದೇ ಜ್ಞಾಪಕಬರಲಿಲ್ಲವಲ್ಲಾ ಎಂದುಕೊಂಡು ಭಟ್ಟನು ಅವಸರದಿಂದ ಮನೆಗೆ ಓಡಿಬಂದನು, ಪೆಟ್ಟಿಗೆಯ ಕಾಗದ ಪತ್ರಗಳನ್ನೆಲ್ಲಾ ನೆಲದ ಮೇಲೆ ಹರಡಿ ೧೦-೨೦ ಸಲ ಚೆನ್ನಾಗಿ ಹುಡುಕಿದನು. ಏನೂ ಪ್ರಯೋಜನವಾಗಲಿಲ್ಲ. ಅಲ್ಲಿಯೇ ನಿಂತಿದ್ದ ಅವನ ಮನೆಯ ಎಮ್ಮೆಯ ಎಳೆಗರುವು ಪತ್ರವನ್ನೂ ನೋಟನ್ನೂ ತಿಂದುಹಾಕಿಬಿಟ್ಟಿದ್ದಿತು. ಪತ್ರವನ್ನು ಬರೆದುಕೊಟ್ಟು ಹಣವನ್ನು ತೆಗೆದುಕೊಂಡವನನ್ನು ಕಾಣಬೇಕಾದರೆ ಯಮ ಲೋಕಕ್ಕೆ ಹೋಗಬೇಕಾಗಿತ್ತು. ಸೊಸೈಟಿಯ ಚಾಲಕರು ಭಟ್ಟನನ್ನು ಅವನ ಕೆಲಸಗಳಿಗಾಗಿ ವಂದಿಸಿ, ಕಳೆದುಹೋದ ಪತ್ರದ ಹಣವನ್ನು ಅವನಿಂದ ವಸೂಲ್ಮಾಡಿಕೊಂಡು ರಾಜೀನಾಮೆಯನ್ನು ಬರೆಸಿಕೊಂಡರು.

ಆ ಪ್ರಚಂಡನು ಇದಾವುದರಿಂದಲೂ ಹೆದರಲಿಲ್ಲ. “ಶ್ರೇಯಾಂಸಿ ಬಹು ವಿಘ್ನಾನಿ” ಎಂದು ಹೇಳುತ್ತಾ ಬಸ್ಸು ನಡೆಸುವುದನ್ನು ಕಲಿಯಲು ಪ್ರಾರಂಭಿಸಿದನು. ಪ್ರತಿದಿನವೂ ಅರ್ಧಗಂಟೆ ಪ್ರಯತ್ನಪಡುತ್ತಿದ್ದುದರಿಂದ ೬ ತಿಂಗಳಲ್ಲಿ ಸ್ವಲ್ಪಮಟ್ಟಿಗೆ ಬಸ್ಸನ್ನು ನಡೆಸುವುದು ಅಭ್ಯಾಸವಾಯಿತು. ಭಟ್ಟನ ಯೋಚನೆಯೆಲ್ಲವೂ ಹಳೆಯ ಬಸ್ಸನ್ನು ಕೊಂಡುಕೊಂಡು ಅದನ್ನು ಸರಿಮಾಡಿ ಲಾಭಹೊಡೆಯುವುದರ ಕಡೆಗೆ ಇದ್ದಿತು. ಒಂದು ದಿವಸ